ಶಬರಿಮಲೆ ದೇವಾಲಯಕ್ಕೆ ಸಂಬಂಧಿಸಿದ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.ಪ್ರಕರಣದಲ್ಲಿ ಎಸ್‌ಐಟಿ ಇದೀಗ ಪ್ರಧಾನ ತಂತ್ರಿ ಕಂದರಾರು ರಾಜೀವರು ಅವರನ್ನು ಬಂಧಿಸಿದೆ. ವಿಸ್ತ್ರತ ವಿಚಾರಣೆ ಬಳಿಕ ಬಂಧನ ಮಾಡಲಾಗಿದೆ. ಇನ್ನೂ ಅಧಿಕಾರಿಗಳ ತಂಡವು ಇದರ ಹಿಂದೆ ದೊಡ್ಡ ಸಂಚು ಮತ್ತು ಮಧ್ಯವರ್ತಿಗಳ ಲಿಂಕ್ ಇರುವ ಶಂಕೆ ವ್ಯಕ್ತಪಡಿಸಿದೆ.
ಬಂಧಿತ ತಂತ್ರಿ ರಾಜೀವರು 14 ದಿನ ನ್ಯಾಯಾಂಗ ಬಂಧನವಾಗಿದ್ದು, ಅವರ ಆರೋಗ್ಯ ತಪಾಸಣೆ ನಡೆಸಿ ತಿರುವನಂತಪುರ ಜೈಲಿಗೆ ಸಾಗಿಸಲಾಗುತ್ತಿದೆ.
ಬಂಧಿತ ತಂತ್ರಿ ರಾಜೀವ್ ಅವರು, ಶಬರಿಮಲೆ ತಂತ್ರಿ ಉನ್ನಿಕೃಷ್ಣನ್ ಪೊಟ್ಟಿಯವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಉನ್ನಿಕೃಷ್ಣನ್ ಪೊಟ್ಟಿ ಸಹಾಯಕರಾಗಿ ಶಬರಿಮಲೆಗೆ ಆಗಮಿಸಿದ್ದರೆ ಎನ್ನಲಾಗಿದ್ದು, ದೇವಸ್ಥಾನದ ಫಲಕಗಳಿಗೆ ಚಿನ್ನ ಲೇಪಿಸುವ ನೆಪದಲ್ಲಿ ನಡೆದ ಪ್ರಾಯೋಜಕತ್ವವೇ ಬಳಿಕ ಚಿನ್ನದ ಕಳ್ಳತನಕ್ಕೆ ಕಾರಣವಾಯಿತು ಎನ್ನುವ ಆರೋಪ ಕೇಳಿಬಂದಿದೆ. ಫಲಕಗಳಿಗೆ ಚಿನ್ನ ಲೇಪಿಸಲು ತಂತ್ರಿಯೇ ಅನುಮತಿ ನೀಡಿದ್ದಾರೆ ಎಂದು ತನಿಖೆ ವೇಳೆ ಹೊರಬಂದಿದೆ ಎನ್ನಲಾಗುತ್ತಿದೆ
2025ರ ನವೆಂಬರ್‌ನಲ್ಲಿಯೇ ಎಸ್‌ಐಟಿ ತಂತ್ರಿ ರಾಜೀವ್ ಅವರಿಂದ ಮಾಹಿತಿ ಸಂಗ್ರಹಿಸಿತ್ತು. ಆ ವೇಳೆ ತಂತ್ರಿ ನೀಡಿದ್ದ ಹೇಳಿಕೆಯಲ್ಲಿ ದೇವಾಲಯದ ಚರ ಮತ್ತು ಸ್ಥಿರಾಸ್ತಿಗಳ ಸಂಪೂರ್ಣ ಜವಾಬ್ದಾರಿ ತಿರುವಾಂಕೂರು ದೇವಸ್ವಂ ಮಂಡಳಿಯದ್ದೇ ಎಂದು ಸ್ಪಷ್ಟಪಡಿಸಿದ್ದರು. ಫಲಕಗಳ ದುರಸ್ತಿ ಸಂಬಂಧ ದೇವಸ್ವಂ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸಿದ್ದರು ಅಂತಲೂ ಅವರು ತಿಳಿಸಿದ್ದರು.
ದೇವಸ್ವಂ ಮಂಡಳಿಯಿಂದ ಅರ್ಜಿ ಸಲ್ಲಿಸಿದ ಬಳಿಕ ಧಾರ್ಮಿಕ ವಿಧಿ ವಿಧಾನಗಳಂತೆ ಅನುಮತಿ ನೀಡಲಾಗಿತ್ತು. ದೇವರ ಆಶೀರ್ವಾದ ಪಡೆದು ಕಾರ್ಯಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ರಾಜೀವ್ ವಿವರಿಸಿದ್ದರು. ದ್ವಾರಪಾಲಕ ಶಿಲ್ಪದ ಮೇಲಿನ ಚಿನ್ನದ ನಿಲುವಂಗಿಯ ಬಣ್ಣ ಮಸುಕಾಗಿದ್ದರಿಂದ ಅದನ್ನು ನವೀಕರಿಸಲು ಅವಕಾಶ ನೀಡಲಾಗಿದೆ ಎಂಬುದನ್ನೂ ಅವರು ಎಸ್‌ಐಟಿಗೆ ತಿಳಿಸಿದ್ದಾರೆ.
ಆದರೆ, ದೇವರಂತಹ ಜನರು ಎಂಬ ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿದ ತಂತ್ರಿ ರಾಜೀವ್, ಎಷ್ಟು ಜನರು ದೇವರಂತೆ ಇದ್ದಾರೆ ಎಂದು ನನಗೆ ಹೇಗೆ ತಿಳಿಯಬೇಕು? ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಈಗ ಮತ್ತಷ್ಟು ವಿವಾದಕ್ಕೆ ಕಾರಣ ಆಗಿದೆ. ತಂತ್ರಿ ಕಾಂತರ್ ಮೋಹನ್ ಸಹ ಈ ಹಿಂದೆ ಸಮಾನ ಹೇಳಿಕೆ ನೀಡಿದ್ದರು.ಈ ಪ್ರಕರಣವು ಇದೀಗ ಕೇವಲ ಕಳ್ಳತನದ ಮಟ್ಟಕ್ಕೆ ಸೀಮಿತವಾಗಿಲ್ಲ. ಶಬರಿಮಲೆ ಚಿನ್ನ ದರೋಡೆ ಪ್ರಕರಣದಲ್ಲಿ ಇ.ಡಿ ಪ್ರಕರಣ ದಾಖಲು ಮಾಡಿಕೊಂಡಿದೆ. ಕೊಚ್ಚಿ ಘಟಕದಲ್ಲಿ ಇಸಿಐಆರ್ ದಾಖಲಾಗಿದ್ದು, ಪಿಎಂಎಲ್‌ಎ ಕಾಯ್ದೆಯಡಿ ತನಿಖೆ ನಡೆಸಲಾಗುತ್ತಿದೆ.
ಅಪರಾಧ ವಿಭಾಗದಿಂದ ಹೆಸರಿಸಲಾದ ಎಲ್ಲರೂ ಇದೀಗ ಇಡಿ ಪ್ರಕರಣದಲ್ಲೂ ಆರೋಪಿಗಳಾಗಿದ್ದಾರೆ. ಎ.ಪದ್ಮಕುಮಾರ್, ಎನ್.ವಾಸು, ಉನ್ನಿಕೃಷ್ಣನ್ ಪೊಟ್ಟಿ, ಮುರಾರಿ ಬಾಬು ಸೇರಿ ಹಲವರ ಹೆಸರುಗಳು ಆರೋಪಿಗಳ ಪಟ್ಟಿಯಲ್ಲಿ ಸೇರಿವೆ. ಈ ತನಿಖೆಯನ್ನು ಇ.ಡಿ.ಸಹಾಯಕ ನಿರ್ದೇಶಕ ರಾಕೇಶ್ ಕುಮಾರ್ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.ಇದೇ ವೇಳೆ, ಜಾಗತಿಕ ಅಯ್ಯಪ್ಪ ಸಂಗಮದ ಆದಾಯ-ವೆಚ್ಚದ ಲೆಕ್ಕಪತ್ರಗಳ ಪರಿಶೀಲನೆಗಾಗಿ ತಿರುವಾಂಕೂರು ದೇವಸ್ವಂ ಮಂಡಳಿ ತುರ್ತು ಸಭೆ ಕರೆದಿದೆ. ಹೈಕೋರ್ಟ್‌ನ ತೀವ್ರ ಟೀಕೆಗಳ ಹಿನ್ನೆಲೆ ಈ ಸಭೆ ನಡೆಯುತ್ತಿದೆ. ಅನೇಕ ಪ್ರಾಯೋಜಕರು ಇನ್ನೂ ಹಣ ಪಾವತಿಸಿಲ್ಲ ಎಂದು ಮಂಡಳಿ ಅಧ್ಯಕ್ಷ ಕೆ. ಜಯಕುಮಾರ್ ತಿಳಿಸಿದ್ದಾರೆ. ಸರ್ಕಾರ ಅಥವಾ ತಿರುವಾಂಕೂರಿನಿಂದ ಒಂದು ಪೈಸೆಯನ್ನೂ ಖರ್ಚು ಮಾಡುವುದಿಲ್ಲ ಎಂದು ಭರವಸೆ ನೀಡಿಯೇ ಪಂಪಾದಲ್ಲಿ ಸಂಗಮ ಆಯೋಜಿಸಲಾಗಿತ್ತು.
ಪ್ರಾಯೋಜಕರ ಹಣ ಇನ್ನೂ ಬಂದಿಲ್ಲ. ಗುತ್ತಿಗೆ ಪಡೆದ ಉರಾಲುಂಗಲ್ ಸೊಸೈಟಿ ಮತ್ತು ಸಂಬಂಧಿತ ಸಂಸ್ಥೆಗಳು ಲೆಕ್ಕಪತ್ರ ಸಲ್ಲಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಸೆಪ್ಟೆಂಬರ್ 20ರಂದು ನಡೆದ ಜಾಗತಿಕ ಅಯ್ಯಪ್ಪ ಸಂಗಮದ ಲೆಕ್ಕಪತ್ರಗಳನ್ನು 45 ದಿನಗಳಲ್ಲಿ ಸಲ್ಲಿಕೆ ಮಾಡುವಂತೆ ಹೈಕೋರ್ಟ್ ಸೂಚಿಸಿತ್ತು. ಈ ತಿಂಗಳಲ್ಲೇ ಲೆಕ್ಕಪತ್ರ ಸಲ್ಲಿಸಲಾಗುವುದು ಎಂದು ಜಯಕುಮಾರ್ ಭರವಸೆ ನೀಡಿದ್ದಾರೆ.ಪದ್ಮಕುಮಾರ್ ಹೇಳಿದ್ದೇನು?: ಈ ವಂಚನೆಯಲ್ಲಿ ಉನ್ನಿಕೃಷ್ಣನ್ ಪೋಟ್ಟಿಗೆ ದೊರೆತ ಲಾಭದ ಒಂದು ಭಾಗ ತಂತ್ರಿಗೂ ಲಭಿಸಿದೆ ಎಂಬ ಸೂಚನೆಗಳಿವೆ. ಉನ್ನಿಕೃಷ್ಣನ್ ಪೋಟ್ಟಿಯನ್ನು ಶಬರಿಮಲೆಗೆ ಕರೆತಂದವರೂ, ತಮಗೆ ಪರಿಚಯ ಮಾಡಿಕೊಟ್ಟವರೂ ತಂತ್ರಿಯೇ ಎಂದು ಪದ್ಮಕುಮಾರ್ ಎಸ್‌ಐಟಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಿನ್ನವನ್ನು ಚೆನ್ನೈಗೆ ಕಳುಹಿಸಲು ತಂತ್ರಿಯವರು ಅನುಮತಿ ನೀಡಿದ್ದರು ಹಾಗೂ ತಂತ್ರಿಯವರೇ ಪೋಟ್ಟಿಯನ್ನು ಕರೆದುಕೊಂಡು ಬಂದಿದ್ದರಿಂದಲೇ ಅವರ ಮೇಲೆ ನಂಬಿಕೆ ಇಟ್ಟಿದ್ದೆವು ಎಂಬುದಾಗಿ ಪದ್ಮಕುಮಾರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಶಬರಿಮಲೆ ಚಿನ್ನ ಕಳ್ಳತನ ಪ್ರಕರಣವು ಧಾರ್ಮಿಕ ಸಂಸ್ಥೆಗಳ ಪಾರದರ್ಶಕತೆ, ಆಡಳಿತ ಮತ್ತು ಹಣಕಾಸು ಶಿಸ್ತು ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಪ್ರಕರಣ ಇನ್ನೂ ಯಾವ ತಿರುವು ಪಡೆದುಕೊಳ್ಳುತ್ತದೆಯೋ ಎಂದು ಕಾದುನೋಡಬೇಕಿದೆ.













































