ಗೃಹಲಕ್ಷ್ಮಿಗೆ ‘ಸತ್ತವರ ನೆರಳು’: ಅನರ್ಹರಿಗೆ ₹65 ಕೋಟಿ ಪಾವತಿ ಶಂಕೆ

Picture of Savistara

Savistara

Bureau Report

ಬೆಂಗಳೂರು: ಪ್ರತಿಮನೆಯ ಯಜಮಾನಿಗೂ ತಿಂಗಳಿಗೆ ₹2ಸಾವಿರ ನೀಡುವ ‘ಗೃಹಲಕ್ಷ್ಮಿ’ ಯೋಜನೆಯ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ 1.08 ಲಕ್ಷ ಮೃತ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿರುವುದನ್ನು ಪತ್ತೆ ಮಾಡಿದೆ.

ಅರ್ಹ ಫಲಾನುಭವಿಗಳನ್ನು ಗುರುತಿಸಲು ಮುಂದಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೃತರ ಹೆಸರಿನಲ್ಲಿ ಹಣ ಪಾವತಿಯಾಗುತ್ತಿರುವುದನ್ನು ಪತ್ತೆ ಮಾಡಿದೆ. ಈ ಖಾತೆಗಳಿಗೆ ಜಮೆಯಾಗಿರುವ ಹಣವನ್ನು ವಸೂಲಿ ಮಾಡಲೂ ಕ್ರಮ ತೆಗೆದುಕೊಂಡಿದೆ.“ಅನರ್ಹ ಫಲಾನುಭವಿಗಳು ಗೃಹಲಕ್ಷ್ಮಿಯೋಜನೆಯ ಹಣ ಪಡೆದುಕೊಳ್ಳುತ್ತಿದ್ದು, ಇದರಿಂದ ಸರ್ಕಾರದ ₹150 ಕೋಟಿಗೂ ಹೆಚ್ಚು ಹಣ ದುರುಪಯೋಗವಾಗಿದೆ. ಹೀಗಾಗಿ ಯೋಜನೆಯ ಫಲಾನುಭವಿಗಳ ಪಟ್ಟಿಯ ಪರಿಷ್ಕರಣೆ ಅನಿವಾರ್ಯ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ತಾವು ಉಪ ಮುಖ್ಯಮಂತ್ರಿ ಆಗಿದ್ದಾಗ ಹೇಳಿದ್ದರು.ಸರ್ಕಾರವು ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿಲ್ಲದೇ ಇದ್ದರೂ ಇಲಾಖಾ ಮಟ್ಟದಲ್ಲಿ ಅನರ್ಹ ಫಲಾನುಭವಿಗಳನ್ನು ಗುರುತಿಸಲು ಆದೇಶಿಸಿತ್ತು. ಆದೇಶದ ಪ್ರತಿ ಮತ್ತು ನಂತರದ ಇಲಾಖಾ ಟಿಪ್ಪಣಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮೇ 5ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಸಭೆ ನಡೆಸಿ, ಮೃತ ಫಲಾನುಭವಿಗಳ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದರು.ಅದರಂತೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿತ್ತು. ಮೇ ಅಂತ್ಯದವರೆಗೂ ಈ ಕಾರ್ಯ ನಡೆದಿದ್ದು, 1.30 ಕೋಟಿ ಫಲಾನುಭವಿಗಳ ಪೈಕಿ 2.88 ಲಕ್ಷ ಮಂದಿ ಮೃತಪಟ್ಟಿರುವುದು ಪತ್ತೆಯಾಗಿತ್ತು. ಇದರಲ್ಲಿ 1,08,755 ಫಲಾನುಭವಿಗಳು ಮೃತಪಟ್ಟ ನಂತರವೂ ಅವರು ಖಾತೆಗಳಿಗೆ ಯೋಜನೆಯ ಹಣ ಜಮೆಯಾಗಿದೆ ಎಂಬ ದತ್ತಾಂಶವನ್ನು ಇಲಾಖೆಯು ಕ್ರೋಡೀಕರಿಸಿದೆ.ಈ 1.08 ಲಕ್ಷ ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಹಣವನ್ನು ಸರ್ಕಾರಕ್ಕೆ ವಾಪಸ್ ಮಾಡಬೇಕಿದೆ. ಹೀಗಾಗಿ, ಫಲಾನುಭವಿಗಳ ಬ್ಯಾಂಕ್ ಅಥವಾ ಅಂಚೆ ಉಳಿತಾಯ ಖಾತೆ ಸಂಖ್ಯೆ, ಫಲಾನುಭವಿ ಮೃತಪಟ್ಟ ದಿನಾಂಕ, ಆನಂತರ ಅವರ ಖಾತೆಗೆ ಜಮೆಯಾಗಿರುವ ಹಣ, ಮರಣದ ನಂತರ ಅವರ ಖಾತೆಯನ್ನು ಸ್ಥಗಿತಗೊಳಿಸಿದ್ದರೆ (ಫ್ರೀಝ್) ಅದರಲ್ಲಿರುವ ಹಣ, ಫಲಾನುಭವಿಗಳು ಮೃತಪಟ್ಟ ನಂತರವೂ ಅವರ ಖಾತೆಯಿಂದ ಕುಟುಂಬದವರು ಹಣ ಡ್ರಾ ಮಾಡಿರುವ ಮಾಹಿತಿಗಳನ್ನು ಸಂಗ್ರಹಿಸಿ ಎಂದು ಇಲಾಖಾ ನಿರ್ದೇಶಕರು, ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಿದ್ದಾರೆ.

‘ಅದರಂತೆ ಅಂಗನವಾಡಿ ಕಾರ್ಯಕರ್ತೆಯರು ಈ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈವರೆಗಿನ ಮಾಹಿತಿ ಪ್ರಕಾರ ಸುಮಾರು ₹65 ಕೋಟಿ, ಇಂತಹ ಖಾತೆಗಳಿಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಪೂರ್ಣ ಮಾಹಿತಿ ಲಭ್ಯವಾದ ನಂತರ ಈ ಮೊತ್ತ ಇನ್ನಷ್ಟು ಹೆಚ್ಚಾಗಬಹುದು. ಈಗ ಮಾಹಿತಿ ಸಂಗ್ರಹಕ್ಕಷ್ಟೇ ಸೂಚಿಸಲಾಗಿದೆ. ಕೆಲವು ಖಾತೆಗಳನ್ನು ಸರ್ಕಾರವು ಬ್ಯಾಂಕ್‌ ಹಂತದಲ್ಲಿ ಫ್ರೀಝ್ ಮಾಡಿಸಿದೆ. ದತ್ತಾಂಶ ಲಭ್ಯವಾದ ನಂತರ ಮುಖ್ಯ ಕಾರ್ಯದರ್ಶಿಗೆ ಮತ್ತು ಹಣಕಾಸು ಇಲಾಖೆಗೆ ಸಲ್ಲಿಸಲಾಗುತ್ತದೆ. ಹಣವನ್ನು ವಸೂಲಿ ಮಾಡುವ ಬಗ್ಗೆ ಮತ್ತು ಅನರ್ಹರನ್ನು ಪಟ್ಟಿಯಿಂದ ಕೈಬಿಡುವ ಬಗ್ಗೆ ಆನಂತರವಷ್ಟೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.*2.88 ಲಕ್ಷ ಮೃತ ಫಲಾನುಭವಿಗಳ ಪೈಕಿ 1.08 ಲಕ್ಷ ಮಂದಿಯ ಖಾತೆಗಷ್ಟೇ ಗ್ಯಾರಂಟಿ ಹಣ ಜಮೆಯಾಗಿದೆ. ಮೃತಪಟ್ಟ ಇತರ ಫಲಾನುಭವಿಗಳ ಕುಟುಂಬದವರು, ಕುಟುಂಬದ ನಂತರದ ಮುಖ್ಯಸ್ಥೆಯನ್ನು ಫಲಾನುಭವಿ ಪಟ್ಟಿಗೆ ಸೇರಿಸಿದ್ದಾರೆ. ಹೀಗಾಗಿ ಅಂತಹವರು ಅನರ್ಹ ಫಲಾನುಭವಿ ಎನಿಸಿಕೊಳ್ಳುವುದಿಲ್ಲ’ ಎಂದು ತಿಳಿಸಿದರು.

ಅನರ್ಹರ ಪತ್ತೆಗೆ ಕ್ಷಿಪ್ರ ಕಾರ್ಯಾಚರಣೆ

ಯೋಜನೆ ಅನುಷ್ಠಾನದಲ್ಲಿ ಭಾರಿ ಅಕ್ರಮ ನಡೆದಿರುವುದನ್ನೂ ಇಲಾಖೆಯು ಗುರುತಿಸಿದೆ. ಒಬ್ಬರೇ ಫಲಾನುಭವಿಯು ಐದಾರು ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದು, ಆ ಎಲ್ಲ ಖಾತೆಗಳಿಗೂ ಗೃಹಲಕ್ಷ್ಮಿ ಹಣ ಜಮೆಯಾಗಿರುವುದು ಪತ್ತೆಯಾಗಿದೆ. ಈ ಬಗ್ಗೆ ತಾಲ್ಲೂಕುವಾರು ಮಾಹಿತಿ ಸಂಗ್ರಹಿಸಲು ಇಲಾಖೆ ಸೂಚಿಸಿದೆ.ಜತೆಗೆ ಏಳು-ಎಂಟು ಫಲಾನುಭವಿಗಳ ಬ್ಯಾಂಕ್ ಖಾತೆ ಒಂದೇ ಇದ್ದು, ಅಷ್ಟೂ ಫಲಾನುಭವಿಗಳ ಹಣ ಒಂದೇ ಖಾತೆಗೆ ಜಮೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಒಂದರಲ್ಲೇ 892 ಖಾತೆಗಳನ್ನು ಈವರೆಗೆ ಗುರುತಿಸಲಾಗಿದೆ ಎಂದು ಗೊತ್ತಾಗಿದೆ. ಜತೆಗೆ 1.45 ಲಕ್ಷದಷ್ಟು ಫಲಾನುಭವಿಗಳು ಆದಾಯ ತೆರಿಗೆ, ಜಿಎಸ್‌ಟಿ ಪಾವತಿದಾರರಾಗಿದ್ದಾರೆ. ಅವರನ್ನು ಯೋಜನೆಯಿಂದ ಕೈಬಿಡಬೇಕೇ ಅಥವಾ ಇಲ್ಲವೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಇಂತಹ ಖಾತೆ ಮತ್ತು ಫಲಾನುಭವಿಗಳನ್ನು ಗುರುತಿಸಲು ‘ಕುಟುಂಬ್’ ಪೋರ್ಟಲ್, ಆಧಾ‌ರ್ ದತ್ತಾಂಶಗಳನ್ನು ಪರಿಶೀಲಿಸಲಾಗುತ್ತಿದೆ. ಈ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಶೀಘ್ರವೇ ಇಂತಹ ಫಲಾನುಭವಿಗಳ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಇಂತಹ ಫಲಾನುಭವಿಗಳ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಆನಂತರವಷ್ಟೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿವೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!