ಬಿಹಾರಕ್ಕೆ ಸಿಗ್ತಾರಾ ಬಿಜೆಪಿಯ ಮೊದಲ ಸಿಎಂ..? ಉಪಮುಖ್ಯಮಂತ್ರಿಗಳಿಂದ ಹಿಡಿದು ಸಂಸದರವರೆಗೆ ರೇಸ್‌ನಲ್ಲಿರುವ ಘಟಾನುಘಟಿಗಳು ಇವರೇ ನೋಡಿ!

Picture of Savistara

Savistara

Bureau Report

ಪಟನಾ: ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದು ಸಂಭವಿಸಿದ್ದು, ಎನ್‌ಡಿಎ ಮೈತ್ರಿಕೂಟ ಶೀಘ್ರದಲ್ಲೇ ನಾಯಕತ್ವ ಬದಲಾವಣೆಗೆ ಸಾಕ್ಷಿಯಾಗಲಿದ್ದು, ದಶಕಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ನಿತೀಶ್ ಕುಮಾರ್ (Bihar CM Race) ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ, ಈ ಬೆಳವಣಿಗೆಗಳು ವೇಗ ಪಡೆದುಕೊಂಡಿವೆ.

ನಿತೀಶ್ ಕುಮಾರ್ ಬದಲಾವಣೆಯ ಬಳಿಕ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದ್ದು, ಬಿಜೆಪಿಯ ಹಲವು ಪ್ರಬಲ ನಾಯಕರು ಸಂಭಾವ್ಯ ಅಭ್ಯರ್ಥಿಗಳಾಗಿ ಮುಂಚೂಣಿಗೆ ಬಂದಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಬಿಹಾರ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಯ ನಾಯಕರೊಬ್ಬರು ಮುಖ್ಯಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ.

ಸಿಎಂ ರೇಸ್​ನಲ್ಲಿರುವವರು..

ಸಾಮ್ರಾಟ್ ಚೌಧರಿ: ತಾರಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಪ್ರಸ್ತುತ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ. ಆರ್‌ಜೆಡಿಯ ಅರುಣ್ ಕುಮಾರ್​​ರನ್ನು 45,843 ಮತಗಳ ಅಂತರದಿಂದ ಸೋಲಿಸುವ ಮೂಲಕ ಜಯಗಳಿಸಿದ್ದು, ಸಿಎಂ ಸ್ಥಾನಕ್ಕೆ ಇವರ ಹೆಸರೇ ಮುಂಚೂಣಿಯಲ್ಲಿದೆ.

ವಿಜಯ್ ಕುಮಾರ್ ಸಿನ್ಹಾ: ನಿತೀಶ್ ಕುಮಾರ್ ಸರ್ಕಾರದಲ್ಲಿ ಸಾಮ್ರಾಟ್ ಚೌಧರಿ ಜೊತೆಗೆ ವಿಜಯ್ ಕುಮಾರ್ ಸಿನ್ಹಾ ಕೂಡ ಬಿಹಾರದ ಉಪ ಮುಖ್ಯಮಂತ್ರಿಯಾಗಿದ್ದಾರೆ. 2010 ರಿಂದ ಲಖಿಸರಾಯ್ ಕ್ಷೇತ್ರದಿಂದ ಬಿಹಾರ ವಿಧಾನಸಭೆಯ ಸದಸ್ಯರಾಗಿದ್ದಾರೆ.

ನಿತ್ಯಾನಂದ ರೈ : ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿರುವ (MoS) ನಿತ್ಯಾನಂದ ರೈ ಬಿಹಾರದ ಉಜಿಯಾರ್‌ಪುರದ ಲೋಕಸಭಾ ಸದಸ್ಯರಾಗಿದ್ದಾರೆ.

ಸಂಜೀವ್ ಚೌರಾಸಿಯಾ: ದಿಘಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಚೌರಾಸಿಯಾ, 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಲಿಬರೇಶನ್ ಅಭ್ಯರ್ಥಿ ದಿವ್ಯಾ ಗೌತಮ್​​​ರನ್ನು 59,079 ಮತಗಳಿಂದ ಸೋಲಿಸುವ ಮೂಲಕ ಶಾಸಕರಾಗಿದ್ದಾರೆ.

ನಿತೀಶ್ ಮಿಶ್ರಾ: ಮಧುಬನಿ ಜಿಲ್ಲೆಯ ಝಂಜರ್‌ಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಿಶ್ರಾ 52,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ದಿಲೀಪ್ ಜೈಸ್ವಾಲ್: ಬಿಹಾರ ಬಿಜೆಪಿಯ ರಾಜ್ಯಧ್ಯಕ್ಷರಾಗಿದ್ದ ಜೈಸ್ವಾಲ್​, ಮೂರನೇ ಬಾರಿಗೆ ವಿಧಾನಪರಿಷತ್ತಿನ ಸದಸ್ಯರಾಗಿದ್ದಾರೆ. ಇವರು 2014 ರ ಲೋಕಸಭಾ ಚುನಾವಣೆಯಲ್ಲಿ ಕಿಶನ್‌ಗಂಜ್‌ನಿಂದ ಸ್ಪರ್ಧಿಸಿದ್ದರು.

ರಾಮ್ ಕೃಪಾಲ್ ಯಾದವ್: ಬಿಹಾರದ ಪಾಟಲಿಪುತ್ರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದು, ಇವರ ಹೆಸರು ಕೂಡ ಸಿಎಂ ಸ್ಥಾನಕ್ಕೆ ಜೋರಾಗಿ ಕೇಳಿ ಬರುತ್ತಿದೆ. ಜನಕ್ ರಾಮ್: ಬಿಹಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದು, ಗೋಪಾಲ್‌ಗಂಜ್‌ನ ಮಾಜಿ ಲೋಕಸಭಾ ಸದಸ್ಯರಾಗಿದ್ದಾರೆ.

ನಿತೀಶ್ ಕುಮಾರ್ ಪುತ್ರ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ

ಈಗಾಗಲೇ ಸುದೀರ್ಘ ರಾಜಕೀಯದಲ್ಲಿ ತಮ್ಮನ್ನೇ ತಾವು ಸವೆಸಿಕೊಂಡಿರುವ ನಿತೀಶ್​, ತಮ್ಮ ಉತ್ತರಾಧಿಕಾರಿಯನ್ನು ಅಖಾಡಕ್ಕಿಳಿಸಲು ಸಜ್ಜಾಗಿದ್ದಾರೆ ಎಂದು ಜೆಡಿಯು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದ್ದು, ಅವರ ಪುತ್ರ ನಿಶಾಂತ್ ಕುಮಾರ್ ಸಕ್ರಿಯ ರಾಜಕೀಯಕ್ಕೆ ಪದಾರ್ಪಣೆ ಮಾಡುವುದು ಈಗ ಬಹುತೇಕ ಖಚಿತವಾಗಿದೆ.

ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ನಿಶಾಂತ್, ಹೋಳಿ ಹಬ್ಬದ ಸಂದರ್ಭದಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದು ಬಿಹಾರದ ಆಡಳಿತಾರೂಢ ಮೈತ್ರಿಯಲ್ಲಿ ಹೊಸ ಸಂಚಲನ ಮೂಡಿಸಿದೆ. ಮಾರ್ಚ್ 5 ರಂದು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಇದೇ ವೇಳೆ ಜೆಡಿಯುನಿಂದ ನಿಶಾಂತ್ ಕುಮಾರ್ ಅಥವಾ ನಿತೀಶ್ ಕುಮಾರ್ ಅವರ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ.

ನಿತೀಶ್ ಕುಮಾರ್ ಸ್ಥಾನಕ್ಕೆ ಬಿಜೆಪಿ ತನ್ನದೇ ನಾಯಕರನ್ನು ತಂದು ಕೂರಿಸಲಿದೆ ಎನ್ನಲಾಗಿದ್ದು, ಸದ್ಯಕ್ಕೆ ಬಿಜೆಪಿ ನಾಯಕರು ನಿಶಾಂತ್ ಕುಮಾರ್ ರಾಜಕೀಯ ಪ್ರವೇಶಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದಿದ್ದ ನಿತೀಶ್ ಕುಮಾರ್ ಈಗ ತಮ್ಮ ಪುತ್ರನನ್ನೇ ರಾಜಕೀಯಕ್ಕೆ ತರುತ್ತಿರುವುದು ವಿರೋಧ ಪಕ್ಷಗಳ ಟೀಕೆಗೆ ಆಹಾರವಾಗಿದ್ದರೂ, ಜೆಡಿಯು ಕಾರ್ಯಕರ್ತರಲ್ಲಿ ಮಾತ್ರ ಈ ನಿರ್ಧಾರವು ಹೊಸ ಹುಮ್ಮಸ್ಸು ತಂದಿದೆ

[t4b-ticker]
error: Content is protected !!