ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ಹಿಂದೂ ಪ್ರಜ್ಞೆ ಕೇವಲ ಧಾರ್ಮಿಕವಿಧಿ ವಿಧಾನ ಮಾತ್ರವಲ್ಲ. ಜೀವನದಲ್ಲಿ ಅನುಸರಿಸಿಕೊಂಡು ಹೋಗಬೇಕಾಗಿರುವ ಪದ್ಧತಿಯೇ ಆಗಿದೆ. ನದಿ, ಪರ್ವತ, ಪ್ರಾಣಿ ಸೇರಿದಂತೆ ಪ್ರತಿಯೊಂದರಲ್ಲಿಯೂ ಮನುಷ್ಯ ದೈವತ್ವ ನೋಡುವುದು ಇದರ ಉದ್ದೇಶವಾಗಿದೆ’ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಯಡೂರ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನ ಹಾಗೂ ಕಾಡಸಿದ್ದೇಶ್ವರ ಮಠದಿಂದ ಗುರುವಾರ ಹಮ್ಮಿಕೊಂಡ ರಾಜಗೋಪುರಗಳ ಲೋಕಾರ್ಪಣೆಗೊಳಿಸಿ ಹಾಗೂ ವೀರಶೈವ ಲಿಂಗಾಯತ ಧರ್ಮೋತ್ಥಾನ ಸಮ್ಮೇಳನದಲ್ಲಿ ಅವರು ಮಾತನಾಡಿದರು.’ವೀರಶೈವ ಮಠ, ಮಂದಿರಗಳು ರಾಜ್ಯದಲ್ಲಿ ಅಪಾರ ಕೊಡುಗೆ ನೀಡಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಯತ್ನದಿಂದ ಇದೀಗ ಭಾರತ ಜಗತ್ತಿನಲ್ಲಿಯೇ ಪ್ರಭಾವಶಾಲಿಯಾಗಿದೆ. ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಸಾಕಷ್ಟು ಬೆಳೆದಿದೆ. ವಿಕಾಸದ ಕಡೆಗೆ ಭಾರತ ಹೆಜ್ಜೆ ಇಡುತ್ತಿದೆ’ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಮಾತನಾಡಿ, ‘ವಿಶ್ವ ಕಲ್ಯಾಣಕ್ಕಾಗಿ ಜಗತ್ತಿನ ಹಲವು ದೇಶಗಳು ಭಾರತದತ್ತ ನೋಡುತ್ತಿವೆ’ ಎಂದರು.
ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಅವರಿಗೆ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮಠದಿಂದ ಕೊಡಮಾಡಿದ ‘ವಿಕಾಸವೀರ ಪ್ರಶಸ್ತಿ’ ಪ್ರದಾನ ಮಾಡಿದರು.ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀ, ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಶಾಸಕ ಗಣೇಶ ಹುಕ್ಕೇರಿ ಇತರರು ಇದ್ದರು.













































