ಹುಬ್ಬಳ್ಳಿ: ‘ದೇಶದ ಬೇರೆ ರಾಜ್ಯದಲ್ಲೆಲ್ಲೂ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿಲ್ಲ.ಕರ್ನಾಟಕದಲ್ಲಿ ಮಾತ್ರ ಈ ಸಮಸ್ಯೆ ಹುಟ್ಟಿಕೊಂಡಿದ್ದು, ಯುದ್ಧದ ಪರಿಣಾಮವೋ ಅಥವಾ ವ್ಯವಸ್ಥಿತ ಹುನ್ನಾರವೋ? ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ’ ಎಂದು ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಸದಸ್ಯ ಸುಧಾಕರ ಶೆಟ್ಟಿ ಅನುಮಾನ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುದ್ಧದ ನೆಪವೊಡ್ಡಿ ಹೋಟೆಲ್‌ಗಳಿಗೆ ಅಡುಗೆ ಅನಿಲದ ಸಿಲೆಂಡರ್ ಪೂರೈಕೆಯನ್ನು ಮಂಗಳವಾರದಿಂದ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಈಗಾಗಲೇ ಕೆಲವು ಸಣ್ಣ ಹೋಟೆಲ್‌ಗಳು ಬಂದ್ ಆಗಿದ್ದು, ಇಂದು ರಾತ್ರಿಯೊಳಗೆ ಶೇ 35ರಷ್ಟು ಹೋಟೆಲ್‌ಗಳು ಬಂದ್ ಆಗಲಿವೆ. ಅಡುಗೆ ಅನಿಲಕ್ಕೆ ಪರ್ಯಾಯವಾಗಿ ನಮ್ಮಲ್ಲಿ ಬೇರೆ ವ್ಯವಸ್ಥೆಯಿಲ್ಲದ ಕಾರಣ, ಎರಡು ದಿನಗಳಲ್ಲಿ ಎಲ್ಲ ಹೋಟೆಲ್‌ಗಳು ಸಂಪೂರ್ಣ ಬಂದ್ ಆಗಲಿವೆ’ ಎಂದರು.’ಯಾವ ಮುನ್ಸೂಚನೆಯನ್ನೂ ನೀಡದೆ ಒಮ್ಮಿಂದೊಮ್ಮೆಲೆ ಅನಿಲ ಪೂರೈಕೆಯನ್ನು ಸ್ಥಗಿತ ಮಾಡಲಾಗಿದೆ. ಖಾಸಗಿ ಏಜೆನ್ಸಿಯವರಿಂದ ಖರೀದಿಸಬೇಕೆಂದರೂ, ಅಗತ್ಯವಿದ್ದಷ್ಟು ಸಂಗ್ರಹ ಅವರಲ್ಲಿ ಇಲ್ಲ. ಇದ್ದರೂ ₹1,900ಕ್ಕೆ ಸಿಗುತ್ತಿದ್ದ 19.5 ಕೆ.ಜಿ.ಯ ಸಿಲಿಂಡರ್‌ಗೆ ₹3,000 ನಿಗದಿ ಮಾಡುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರೆ, ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸುತ್ತದೆ. ಎರಡೂ ಸರ್ಕಾರ ತಕ್ಷಣ ಸಮಸ್ಯೆಗೆ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.
‘ಹುಬ್ಬಳ್ಳಿಯಲ್ಲಿ ಅಂದಾಜು 5 ಸಾವಿರ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ 60 ಸಾವಿರದಷ್ಟು ಹೋಟೆಲ್‌ಗಳು ಇದ್ದು, 1.20 ಲಕ್ಷದಷ್ಟು ಕಾರ್ಮಿಕರು ಇದ್ದಾರೆ. ಹೋಟೆಲ್‌ನಲ್ಲಿ ಕೆಲಸವಿಲ್ಲ ಎಂದರೆ ಕಾರ್ಮಿಕರು ಮನೆಗೆ ತೆರಳುತ್ತಾರೆ. ಮತ್ತೆ ಪುನಃ ಉದ್ಯಮ ಆರಂಭಿಸಬೇಕು ಎಂದರೆ ಕಾರ್ಮಿಕರು ಸಿಗುವುದಿಲ್ಲ. ಹೋಟೆಲ್‌ಗಳು ಬಂದ್ ಆದರೆ ಕಾರ್ಮಿಕರ ಜೊತೆಗೆ ಸಾರ್ವಜನಿಕರು ಸಹ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸುಕುಮಾರ ಶೆಟ್ಟಿ, ಕಾರ್ಯದರ್ಶಿ ರವಿಂದ್ರ ಗಾಯತೊಂಡೆ, ಸರ್ವೋತ್ತಕ ಕಾಮತ್ ಇದ್ದರು.
ಉಗ್ರ ಸ್ವರೂಪದ ಹೋರಾಟ: ‘ಗ್ಯಾಸ್ ಪೂರೈಕೆ ಸ್ಥಗಿತಮಾಡಿರುವುದರಿಂದ, ಹೋಟೆಲ್ ಮೇಲಾಗಿರುವ ಗಂಭೀರ ಪರಿಣಾಮದ ಸ್ಪಷ್ಟ ಚಿತ್ರಣ ಗುರುವಾರ ಸಿಗಲಿದೆ. ಬೇಕರಿ ಮತ್ತು ಸ್ವೀಟ್ಸ್ ಮಾರ್ಟ್ ಅಂಗಡಿಯವರು ಸಹ ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲರೂ ಸೇರಿ ನಾಳೆ ಅಥವಾ ನಾಡಿದ್ದು ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅನಿಲ ಪೂರೈಕೆ ಮಾಡದಿದ್ದರೆ ಉಗ್ರ ಸ್ವರೂಪದ ಹೋರಾಟಕ್ಕೂ ಇಳಿಯುತ್ತೇವೆ’ ಎಂದು ಸುಧಾಕರ ಶೆಟ್ಟಿ ಎಚ್ಚರಿಕೆ ನೀಡಿದರು.














































