
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉಪಹಾರ ಮತ್ತು ಭೋಜನ ಪ್ರಸಾದ ವಿತರಣೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ.ಪ್ರತಿದಿನದಂತೆ ಭೋಜನ ಪ್ರಸಾದ ಮತ್ತು ಉಪಹಾರವನ್ನು ಭಕ್ತರಿಗೆ ವಿತರಿಸಲಾಗುತ್ತದೆ. ಒಂದು ವಾರಕ್ಕೆ ಬೇಕಾದ ಗ್ಯಾಸ್ ಶೇಖರಿಸಲ್ಪಟ್ಟಿದ್ದು ಮಾ.11 ರಂದು ಕೂಡಾ ಶ್ರೀ ದೇವಳಕ್ಕೆ ಗ್ಯಾಸ್ ಸಿಲಿಂಡರ್ ಬಂದಿದೆ.ಆದುದರಿಂದ ಭಕ್ತರಿಗೆ ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ದೇವಳದ ಆಡಳಿತ ತಿಳಿಸಿದೆ.
ಯುದ್ಧ ಕಾರಣದಿಂದ ಗ್ಯಾಸ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಬಹುದೆಂಬ ಕಾರಣದಿಂದ ಮಿತವಾಗಿ ಗ್ಯಾಸ್ ಬಳಸಲು ದೇವಳದಲ್ಲಿ ಕ್ರಮ ಕೈಗೊಳ್ಳಲಾಗಿದೆ.ಹಾಗಾಗಿ ದೇವಳದಲ್ಲಿ ದಿನವಾಹಿ ನೀಡುತ್ತಿದ್ದ ವಿವಿಧ ರೀತಿಯ ಉಪಹಾರ ತಿನಿಸುಗಳಿಗೆ ಬದಲಾಗಿ ಎರಡು ದಿನಕ್ಕೊಮ್ಮೆ ಅವಲಕ್ಕಿ ಮೊಸರು ಹಾಗೂ ಉಳಿದ ದಿನ ಹೆಸರು ಕಾಳು,ಉಪ್ಪಿಟ್ಟು ವಿತರಣೆ ನಡೆಯಲಿದೆ.ಅದೇ ರೀತಿ ಬೋಜನ ಪ್ರಸಾದ ವಿತರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ.ಹೆಚ್ಚುವರಿ ತಯಾರಿಸುತ್ತಿದ್ದ ಪಲ್ಯಕ್ಕೆ ಬದಲಾಗಿ ದೇವಳದ ಪ್ರಸಿದ್ಧ ಭೋಜನ ಖಾದ್ಯ ಚಟ್ನಿಯನ್ನು ಮಾತ್ರ ತಯಾರಿಸಿ ವಿತರಿಸಲಾಗುತ್ತದೆ.ಆದುದರಿಂದ ಭಕ್ತರಿಗೆ ಬೋಜನ ಪ್ರಸಾದ ಹಾಗೂ ಉಪಹಾರ ಯಥಾ ಪ್ರಕಾರವಾಗಿ ಭಕ್ತರಿಗೆ ವಿತರಿಸಲಾಗುತ್ತದೆ.
2 ಲೋಡ್ ಕಟ್ಟಿಗೆ ರೆಡಿ
ಮುಂದೆ ವಾರಗಳ ಬಳಿಕ ಗ್ಯಾಸ್ ಪೂರೈಕೆ ಆಗದೇ ಇದ್ದಲ್ಲಿ ಭಕ್ತರಿಗೆ ಭೋಜನ ಪ್ರಸಾದ ವಿತರಣೆ ಹಾಗೂ ಉಪಹಾರ ವಿತರಣೆಗೆ ಯಾವುದೇ ತೊಂದರೆ ಆಗದಂತೆ ಯೋಜನೆ ರೂಪಿಸಲಾಗಿದೆ.ಈಗಾಗಲೇ ಎರಡು ಲೋಡು ಕಟ್ಟಿಗೆಯನ್ನು ತರಿಸಿ ದಾಸ್ತಾನು ಇರಿಸಲಾಗಿದೆ.ಗ್ಯಾಸ್ ಪೂರೈಕೆ ಆಗದೆ ಇದ್ದಾಗ ಕಟ್ಟಿಗೆ ಒಲೆಯ ಮೂಲಕ ಬೋಜನ ಮತ್ತು ಉಪಹಾರ ತಯಾರಿಸಿ ಭಕ್ತರಿಗೆ ವಿತರಿಸಲು ವ್ಯವಸ್ಥೆ ಇದೆ. ಭಕ್ತರಿಗೆ ಭೋಜನ ಪ್ರಸಾದ ವಿತರಣೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಿದ್ದಾರೆ.
ಗ್ಯಾಸ್ ಪೂರೈಕೆ ಆಗಿರುತ್ತದೆ
ಗ್ಯಾಸ್ ಪೂರೈಕೆ ಸಂಸ್ಥೆಯವರಿಗೆ ದಿನಕ್ಕೆ 20 ಸಿಲಿಂಡರ್ ಗ್ಯಾಸ್ ಪೂರೈಕೆ ಮಾಡಲು ದೇವಸ್ಥಾನದಿಂದ ಪತ್ರ ಬರೆಯಲಾಗಿದೆ. ಅಲ್ಲದೆ ದೇವಳಕ್ಕೆ ಗ್ಯಾಸ್ ಪೂರೈಕೆ ಸಮರ್ಪಕವಾಗಿ ನೆರವೇರಿಸಲು ಅಪರ ಜಿಲ್ಲಾಧಿಕಾರಿಗಳು ಕೂಡಾ ಗ್ಯಾಸ್ ಪೂರೈಕಾ ಸಂಸ್ಥೆಯವರಿಗೆ ಆದೇಶಿಸಿದ್ದಾರೆ. ಮಾ.11 ರಂದೇ ದೇವಳಕ್ಕೆ ಗ್ಯಾಸ್ ಸಿಲಿಂಡರ್ ಅನ್ನು ಪೂರೈಕೆದಾರರು ವಿತರಿಸಿದ್ದಾರೆ. ಬಳಿಕವೂ ಗ್ಯಾಸ್ ಪೂರೈಕೆಯಾಗುತಿದ್ದು ಸಮಸ್ಯೆಗಳು ಆಗದಂತೆ ಸೂಕ್ತ ಕ್ರಮ ವಹಿಸಲು ಮುಜರಾಯಿ ಸಚಿವರು ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದು.ಅದರಂತೆ ಕಾರ್ಯನಿರ್ವಹಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿರುವುದಾಗಿ ತಿಳಿದು ಬಂದಿದೆ.













































