ಗ್ಯಾಸ್ ಸಿಲಿಂಡ‌ರ್ ಕೊರತೆ ಒಪ್ಪಿಕೊಂಡ ಕೇಂದ್ರ: ಸಿಲಿಂಡ‌ರ್ ಬುಕಿಂಗ್ ಅವಧಿ ನಗರಗಳಲ್ಲಿ 25, ಗ್ರಾಮೀಣ ಭಾಗದಲ್ಲಿ 45 ದಿನಕ್ಕೆ ವಿಸ್ತರಣೆ..

Picture of Savistara

Savistara

Bureau Report

ನವದೆಹಲಿ: ಕಳೆದ ಕೆಲವು ದಿನಗಳಿಂದ ನಿರಾಕರಿಸುತ್ತಲೇ ಬಂದಿದ್ದ ಅಡುಗೆ ಅನಿಲದ (LPG) ಪೂರೈಕೆಯ ಕೊರತೆಯನ್ನು ಕೇಂದ್ರ ಸರ್ಕಾರ ಕೊನೆಗೂ ಗುರುವಾರ ಒಪ್ಪಿಕೊಂಡಿದೆ. ಈ ಬಿಕ್ಕಟ್ಟನ್ನು ನಿಭಾಯಿಸಲು ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ಕಟ್ಟುನಿಟ್ಟಿನ ‘ಬೇಡಿಕೆ ನಿರ್ವಹಣಾ’ ಕ್ರಮಗಳನ್ನು ಜಾರಿಗೊಳಿಸಿದೆ.

ಬುಕಿಂಗ್ ಅವಧಿಯಲ್ಲಿ ಬದಲಾವಣೆ:ಹೊಸ ನಿಯಮದ ಪ್ರಕಾರ, ಗ್ರಾಹಕರು ಒಂದು ಸಿಲಿಂಡ‌ರ್ ಪಡೆದ ನಂತರ ಮುಂದಿನ ಸಿಲಿಂಡರ್ ಬುಕ್ ಮಾಡಲು ಇರುವ ಕಾಲಾವಧಿಯನ್ನು ಹೆಚ್ಚಿಸಲಾಗಿದೆ.ನಗರ ಪ್ರದೇಶಗಳಲ್ಲಿ: 25 ದಿನಗಳಿಗೊಮ್ಮೆ ಮಾತ್ರ ಬುಕಿಂಗ್‌ಗೆ ಅವಕಾಶ.ಗ್ರಾಮೀಣ ಪ್ರದೇಶಗಳಲ್ಲಿ: 45 ದಿನಗಳಿಗೊಮ್ಮೆ ಮಾತ್ರಬುಕಿಂಗ್‌ಗೆ ಅವಕಾಶ.(ಈ ಮೊದಲು ದೇಶಾದ್ಯಂತ ಪ್ರತಿ 21 ದಿನಗಳಿಗೊಮ್ಮೆ ಬುಕಿಂಗ್ ಮಾಡಲು ಅವಕಾಶವಿತ್ತು).

ವಾಣಿಜ್ಯ ಬಳಕೆಗೆ ಭಾರಿ ಹೊಡೆತ:ಹೋಟೆಲ್‌ಗಳು ಮತ್ತು ಕೈಗಾರಿಕೆಗಳಿಗೆ ಬಳಸುವ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಭಾರಿ ಕಡಿತ ಮಾಡಲಾಗಿದೆ. ಇನ್ನು ಮುಂದೆ ತೈಲ ಕಂಪನಿಗಳು ಒಟ್ಟು ಬೇಡಿಕೆಯ ಕೇವಲ ಶೇ. 20ರಷ್ಟು ಅನಿಲವನ್ನು ಮಾತ್ರ ಪೂರೈಸಲಿವೆ. ಸರ್ಕಾರದ ಈ ನಿರ್ಧಾರಕ್ಕೆ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಸಚಿವರ ಸ್ಪಷ್ಟನೆ:ಈ ಕುರಿತು ಮಾಹಿತಿ ನೀಡಿದ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ. “ಅಡುಗೆ ಅನಿಲದ ಸಂಗ್ರಹಣೆ ಮತ್ತು ಕಾಳಸಂತೆ ತಡೆಯಲು ಈ ನಿಯಂತ್ರಣ ಅಗತ್ಯವಾಗಿದೆ. ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರೂ, ಪರ್ಯಾಯ ಮಾರ್ಗಗಳ ಮೂಲಕ ಅನಿಲ ತರಿಸಲು ಕ್ರಮ ಕೈಗೊಳ್ಳಲಾಗಿದೆ. ದೀರ್ಘಾವಧಿಯ ಬಿಕ್ಕಟ್ಟು ಎದುರಾದರೂ ನಿಭಾಯಿಸಲು ಭಾರತ ಸಿದ್ದವಿದೆ” ಎಂದು ಭರವಸೆ ನೀಡಿದ್ದಾರೆ.

ಪರ್ಯಾಯ ಇಂಧನಕ್ಕೆ ಮೊರೆ:ಅನಿಲದ ಮೇಲಿನ ಒತ್ತಡ ಕಡಿಮೆ ಮಾಡಲು ಸರ್ಕಾರ ಪರ್ಯಾಯ ದಾರಿಗಳನ್ನು ಹುಡುಕಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮೂಲಕ ಸೀಮೆಎಣ್ಣೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಕೈಗಾರಿಕೆಗಳಿಗೆ ಇಂಧನ ತೈಲ ಬಳಸಲು ಅನುಮತಿ ನೀಡಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳು ಕೂಡ ಬಿಕ್ಕಟ್ಟಿನ ಈ ಸಮಯದಲ್ಲಿ ಇಂತಹ ಇಂಧನಗಳ ಬಳಕೆಗೆ ತಾತ್ಕಾಲಿಕವಾಗಿ ಸಮ್ಮತಿ ಸೂಚಿಸಿವೆ.

[t4b-ticker]
error: Content is protected !!