ಹೊಸದಿಲ್ಲಿ, ಎ.1: ದೇಶದಲ್ಲಿ ಎರಡು ತಿಂಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಪೂರೈಕೆಯಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ. ಪಶ್ಚಿಮ ಏಶ್ಯ ಸಂಘರ್ಷ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಭದ್ರತೆ ಹಾಗೂ LPG ಪೂರೈಕೆಯ ಕುರಿತು ಆತಂಕ ಹೆಚ್ಚುತ್ತಿರುವ ನಡುವೆ ಈ ಹೇಳಿಕೆ ನೀಡಲಾಗಿದೆ.ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಅಂತರ್ ಸಚಿವಾಲಯಗಳ ಸಭೆಯಲ್ಲಿ ಮಾತನಾಡಿದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು, ದೇಶದಲ್ಲಿರುವ ತೈಲ ಸಂಸ್ಕರಣಾಗಾರಗಳು ಗರಿಷ್ಠ ಮಟ್ಟದಲ್ಲಿ ಕಾರ್ಯಾಚರಿಸುತ್ತಿವೆ ಹಾಗೂ ರಿಟೇಲ್ ಮಾರಾಟಗಾರರಲ್ಲಿ ತೈಲ ದಾಸ್ತಾನು ಮುಗಿದಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲವೆಂದು ತಿಳಿಸಿದ್ದಾರೆ.
ಸಾಮಾನ್ಯ ಬಳಕೆದಾರರನ್ನು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯ ಹೊರೆಯಿಂದ ರಕ್ಷಿಸುವ ಪ್ರಯತ್ನವಾಗಿ, ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ ಎಂದು ಸುಜಾತಾ ತಿಳಿಸಿದರು.ವಿಮಾನ ಇಂಧನ ಹಾಗೂ ಡೀಸೆಲ್ ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಿರುವುದನ್ನು ಖಾತರಿಪಡಿಸುವ ಉದ್ದೇಶದಿಂದ ಭಾರತ ಸರ್ಕಾರವು ರಫ್ತು ಸುಂಕವನ್ನು ಹೇರಿದೆ ಎಂದು ಅವರು ಹೇಳಿದರು. ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಅವುಗಳನ್ನು ಜನರು ಗಾಬರಿಬಿದ್ದು ಖರೀದಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.














































