ಅಯೋಧ್ಯಾ (ಉತ್ತರ ಪ್ರದೇಶ): ರಾಮಮಂದಿರ ದೇಣಿಗೆ ಕಳವುಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರು ಕೇವಲ ತಮ್ಮ ಹುದ್ದೆಗಳನ್ನಷ್ಟೇ ಅಲ್ಲ, ಬದಲಿಗೆ ಟ್ರಸ್ಟ್‌ನ ಸದಸ್ಯತ್ವವನ್ನೂ ಕಳೆದುಕೊಂಡಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಮಹಾಂತ ಗೋವಿಂದ ದೇವ ಗಿರಿ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಅವರಿಬ್ಬರು ಟ್ರಸ್ಟಿಯಾಗಿ ಮುಂದುವರಿಯಲಿದ್ದಾರೆ ಎಂಬ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ರಾಜೀನಾಮೆ ಬೆನ್ನಲ್ಲೇ, ಟ್ರಸ್ಟ್‌ನ ವಿಶೇಷ ಆಹ್ವಾನಿತ ಸದಸ್ಯರ ಪಟ್ಟಿಯಿಂದ ಗೋಪಾಲ್ ರಾವ್ ಅವರನ್ನು ಸಹ ಉಚ್ಚಾಟಿಸಲು ಟ್ರಸ್ಟ್ ನಿರ್ಧರಿಸಿದೆ. ದೇಣಿಗೆ ಕಳ್ಳತನದಲ್ಲಿ ಅವರ ಪಾತ್ರವೂ ಇದೆ ಎಂಬ ಆರೋಪ ಕೇಳಿಬಂದಿತ್ತು.
ಕೃಷ್ಣ ಮೋಹನ್ ಕಾಯಂ?
ಸದ್ಯ ಟ್ರಸ್ಟ್‌ನ ಸದಸ್ಯ, ನಿವೃತ್ತ ಐಎಫ್‌ಎಸ್ ಅಧಿಕಾರಿ ಕೃಷ್ಣ ಮೋಹನ್ ಅವರಿಗೆ ಟ್ರಸ್ಟ್‌ನ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಅವರನ್ನು ಅದೇ ಹುದ್ದೆಯಲ್ಲಿ ಕಾಯಂಗೊಳಿಸುವ ಕುರಿತು ಮತ್ತು ತೆರವಾಗಿರುವ ಸ್ಥಾನಗಳಿಗೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಕುರಿತು ಪರಿಶೀಲಿಸಲು ಜುಲೈ 22ರಂದು ನಡೆಯಲಿರುವ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗಿರಿ ತಿಳಿಸಿದ್ದಾರೆ,
ಸದಸ್ಯರ ಅಸಮಾಧಾನ
ಪ್ರಕರಣದಲ್ಲಿ ರಾಯ್ ಮತ್ತು ಮಿಶ್ರಾ ಅವರ ಪಾತ್ರದ ಬಗ್ಗೆ ಟ್ರಸ್ಟ್‌ನ ಹಲವು ಸದಸ್ಯರು ಸಭೆಯಲ್ಲಿ ಅಸಮಾಧಾನವನ್ನು ಹೊರಹಾಕಿದರು. ‘ತನಿಖೆ ಪೂರ್ಣಗೊಳ್ಳುವವರೆಗೆ ರಾಯ್ ಅವರಿಗೆ ಮುಂದುವರಿಯಲು ಅವಕಾಶ ನೀಡಬೇಕು ಎಂದು ಕೆಲವು ಸದಸ್ಯರು ಅಭಿಪ್ರಾಯಪಟ್ಟಿದ್ದರಿಂದ, ಅವರ ರಾಜೀನಾಮೆ ಅಂಗೀಕರಿಸುವ ವಿಷಯದಲ್ಲಿ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳಿದ್ದವು’ ಎಂದು ಮೂಲಗಳು ತಿಳಿಸಿವೆ.
ನೈತಿಕ ಹೊಣೆ ಹೊತ್ತು ರಾಜೀನಾಮೆ
ರಾಮಮಂದಿರದ ದೇಣಿಗೆ ಕಳವು ಆರೋಪ ಕೇಳಿಬಂದ ಬೆನ್ನಲ್ಲೇ ರಾಯ್ ಹಾಗೂ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಸೋಮವಾರ ನಡೆದ ಸಭೆಯಲ್ಲಿ ಅವರ ರಾಜೀನಾಮೆಯನ್ನು ಟ್ರಸ್ಟ್ ಅಂಗೀಕರಿಸಿದೆ. ರಾಯ್, ಮಿಶ್ರಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಅಂಗೀಕರಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ’ ಎಂದು ಗಿರಿ ಹೇಳಿದ್ದರು.









































