ವಿಜಯಪುರ: ‘ಪಕ್ಷದಿಂದ ಉಚ್ಛಾಟಿಸಲಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಂದ ಬಾಗಲಕೋಟೆ ಉಪಚುನಾವಣೆಯಲ್ಲಿ ಪ್ರಚಾರ ಮಾಡಿಸುವ ಪರಿಸ್ಥಿತಿ ಬಿಜೆಪಿಗೆ ಬಂದಿರುವುದು ಶೋಚನೀಯ’ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
‘ಬಾಗಲಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರ ಗುಂಪಿನ ಅಭ್ಯರ್ಥಿ. ಯತ್ನಾಳ ಅವರು ತಮ್ಮ ಸ್ವಾಭಿಮಾನ ಬಿಟ್ಟು ಚರಂತಿಮಠ ಪರ ಪ್ರಚಾರ ನಡೆಸಿ, ಯಡಿಯೂರಪ್ಪ, ವಿಜಯೇಂದ್ರ ನಾಯಕತ್ವ ಬಲಪಡಿಸಲು ಮುಂದಾಗಿದ್ದಾರೆ. ಈವರೆಗೆ ಅಪ್ಪ-ಮಕ್ಕಳನ್ನು ಬೈಯುತ್ತಿದ್ದದ್ದು ಕೇವಲ ನಾಟಕ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.’ಯತ್ನಾಳ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವ ನೆಪದಲ್ಲಿ ಮರಳಿ ಬಿಜೆಪಿ ಸೇರ್ಪಡೆಗೆ ನಾಟಕ ಆರಂಭಿಸಿದ್ದಾರೆ. ಈ ನಾಟಕದ ಬದಲು ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಕೈಮುಗಿದು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಬೇಡುವುದು ಉತ್ತಮ’ ಎಂದರು.’ದಾವಣಗೆರೆ ಬಿಜೆಪಿ ಅಭ್ಯರ್ಥಿಯು ಯಡಿಯೂರಪ್ಪ ಗುಂಪಿನ ಅಭ್ಯರ್ಥಿಯಲ್ಲ. ಜಿ.ಎಂ.ಸಿದ್ದೇಶ್ವರ ಅವರ ಗುಂಪಿನ ಅಭ್ಯರ್ಥಿ. ಯತ್ನಾಳ ಅವರು ದಾವಣಗೆರೆಗೆ ಏಕೆ ಪ್ರಚಾರಕ್ಕೆ ಹೋಗಿಲ್ಲ. ಯತ್ನಾಳಗೆ ಮಾನ, ಮರ್ಯಾದೆ ಕಿಂಚಿತ್ತು ಇಲ್ಲ’ ಎಂದು ವಾಗ್ದಾಳಿ ನಡೆಸಿದರು.














































