ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ನೆಲೆಯೂರಲು ಸಾಧ್ಯವಾಗದ್ದಕ್ಕೆ ಕಾರಣ ನೀಡಿರುವ ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಎ.ರಾಜಾ(A Raja), ಧರ್ಮನಿಷ್ಠ ತಮಿಳನು ದೇವಸ್ಥಾನದಲ್ಲಿ ಪ್ರಾರ್ಥಿಸಿ, ಹೊರಗಡೆ ಬಂದು ಪೆರಿಯಾರ್ ಚಿರಾಯುವಾಲಿ ಎಂದು ಜಪಿಸುತ್ತಾನೆ. ಹೀಗಾಗಿ ಇಲ್ಲಿ ಬಿಜೆಪಿ ನೆಲೆಯೂರಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ದಿನಪತ್ರಿಕೆಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರಪಂಚದಾದ್ಯಂತ ಪ್ರತಿಗಾಮಿ ವಿಚಾರಗಳು ಬೆಳೆಯುತ್ತಿವೆ . ಆದರೆ ತಮಿಳುನಾಡಿನಲ್ಲಿ ಪೆರಿಯಾರ್ ಸಿದ್ಧಾಂತ ಸಾಂಸ್ಥಿಕೀಕರಣಗೊಂಡ ಕಾರಣ ಬಿಜೆಪಿ ನೆಲೆಯೂರಲು ಸಾಧ್ಯವಾಗಿಲ್ಲ. ಪೆರಿಯಾರ್ ದೇವರು ಇಲ್ಲ ಎಂದು ಹೇಳಿದ್ದು, ದೇವರ ಮೇಲಿನ ನಂಬಿಕೆಯ ಮೇಲೆ ದಾಳಿ ಮಾಡಲು ಅಲ್ಲ, ಬದಲಾಗಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ಶೋಷಣೆಗೆ ಒಳಗಾಗದಂತೆ ಶೋಷಿತರನ್ನು ರಕ್ಷಿಸಲು ಎಂದು ತಮಿಳರು ಅರ್ಥೈಸಿಕೊಳ್ತಾರೆ ಎಂದಿದ್ದಾರೆ.ತಮಿಳುನಾಡಿನಲ್ಲಿ ಒಬ್ಬ ಧರ್ಮನಿಷ್ಠ ವ್ಯಕ್ತಿ ದೇವಸ್ಥಾನಕ್ಕೆ ಹೋಗುತ್ತಾನೆ, ಹೊರಗೆ ಬರುತ್ತಾನೆ ಮತ್ತು ಡಿಎಂಕೆಗೆ ಮತ ಹಾಕುತ್ತಾನೆ. ಅವನು ಪೆರಿಯಾರ್ ಚಿರಾಯುವಾಗಲಿ ಎಂದು ಜಪಿಸುತ್ತಾನೆ. ಆ ವ್ಯಕ್ತಿ ನಂಬಿಕೆಯುಳ್ಳವನು ಮತ್ತು ಪೆರಿಯಾರಿಸ್ಟ್ ಆಗಿದ್ದಾನೆ. ಪೆರಿಯಾರ್ ಅವರ ವೈಚಾರಿಕತೆಯು ಅವರ ವೈಯಕ್ತಿಕ ನಂಬಿಕೆಯನ್ನು ಕಸಿದುಕೊಳ್ಳಲು ಅಲ್ಲ, ವಿಮೋಚನೆಗಾಗಿ ಎಂದು ಪ್ರತಿಪಾದಿಸಿದ್ದಾರೆ.
ಮುಂದವರೆದು, ದ್ರಾವಿಡವಾದ ಕೇವಲ ಒಂದು ಕಲ್ಪನೆ ಅಲ್ಲ, ಅದು ಒಂದು ಸಂಸ್ಥೆ. ಪ್ರತಿಯೊಂದು ಜಿಲ್ಲೆಯಲ್ಲೂ ಅದು ಸಂಘಟನಾತ್ಮಕ ಅಸ್ತಿತ್ವವನ್ನು ಹೊಂದಿದೆ. ಪೆರಿಯಾರ್ ಸಿದ್ಧಾಂತವು ತಮಿಳುನಾಡಿನಲ್ಲಿ ದೇವಾಲಯ ಪೂಜೆಯೊಂದಿಗೆ ಹೇಗೆ ಸಹಬಾಳ್ವೆ ನಡೆಸುತ್ತದೆ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಲು ಅಥವಾ ಭೇದಿಸಲು ಸಾಧ್ಯವಿಲ್ಲ. ಅದು ದ್ರಾವಿಡ ಚಳವಳಿಯ ಪ್ರತಿಭೆ ಎಂದು ತಿಳಿಸಿದ್ದಾರೆ.ತಮಿಳುನಾಡು ವಿಧಾನಸಭೆ ಚುನಾವಣೆಗೆ ಮಾ. 30ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಏ. 06 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಏ. 23ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 04ರಂದು ಫಲಿತಾಂಶ ಪ್ರಕಟವಾಗಲಿದೆ.














































