ಗುವಾಹಟಿ: ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವುಸಾಧಿಸಿದೆ. ಅಭಿವೃದ್ಧಿ ಮತ್ತು ಪ್ರಾದೇಶಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಆಡಳಿತ ನಡೆಸಿಕೊಂಡು ಬಂದಿರುವುದು ಬಿಜೆಪಿ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಕಳೆದ ಐದು ವರ್ಷಗಳಿಂದ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ಅಸ್ಸಾಮಿಗರ ನಂಬಿಕೆ ಮತ್ತು ಅಭಿವೃದ್ಧಿ ಮೂಲಮಂತ್ರ ಎನ್ನುತ್ತಲೇ ಆಡಳಿತ ನಡೆಸಿದ್ದಾರೆ.
ಅಸ್ಸಾಂನಲ್ಲಿ ಬಿಜೆಪಿ ಗೆಲುವಿಗೆ 10 ಪ್ರಮುಖ ಕಾರಣಗಳೆಂದರೆ…
ಹಿಮಂತ ಬಿಸ್ವಾ ಶರ್ಮಾ ಅವರ ವರ್ಚಸ್ಸು
ಮುಖ್ಯಮಂತ್ರಿಯಾಗಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ನಾಯಕತ್ವ ನಿರ್ವಹಿಸಿ, ಆಡಳಿತದ ಮೇಲೆ ಬಿಗಿ ಹಿಡಿತ ಹೊಂದಿದ್ದರು. ಅಭಿವೃದ್ಧಿ ಕೆಲಸಗಳ ಜೊತೆಗೆ ಹಿಂದುತ್ವದ ವಿಚಾರಗಳನ್ನು ಸಮರ್ಥವಾಗಿ ಪ್ರತಿಪಾದಿಸುತ್ತ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಲ್ಯಾಣ ಯೋಜನೆಗಳು
ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಜಾರಿಗೆ ತಂದ ಕಲ್ಯಾಣ ಯೋಜನೆಗಳು ಬಿಜೆಪಿ ಗೆಲುವಿಗೆ ನೆರವಾಗಿದೆ. ಉದಾಹರಣೆಗೆ ‘ಅರುಣೋದೋಯ್’ ಯೋಜನೆ. ಬಡ ಕುಟುಂಬಗಳ ಮಹಿಳೆಯರಿಗೆ ನೇರವಾಗಿ ನಗದು ವರ್ಗಾವಣೆ ಮಾಡುವ ಯೋಜನೆ ಇದಾಗಿದ್ದು, ಮಹಿಳಾ ಮತದಾರರ ದೊಡ್ಡ ‘ವೋಟ್ ಬ್ಯಾಂಕ್ ಸೃಷ್ಟಿಸಿತ್ತು. ‘ನಿಜುತ್ ಮೊಯಿನಾ’ ಯೋಜನೆ ಮೂಲಕ ಹೆಣ್ಣು ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು 5.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ಅಸ್ಸಾಮಿಗರ ರಕ್ಷಣೆ
ಬಾಂಗ್ಲಾದೇಶದಿಂದ ರಾಜ್ಯಕ್ಕೆ ಬರುವ ಅಕ್ರಮ ವಲಸಿಗರ ವಿರುದ್ದದ ಕಠಿಣ ನಿಲುವು ಮತ್ತು ಸ್ಥಳೀಯ ಅಸ್ಸಾಮಿ ಜನರ ಭೂಮಿ, ಭಾಷೆ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಭರವಸೆಯು ಜನರಲ್ಲಿ ವಿಶ್ವಾಸ ಮೂಡಿಸಲು ಕಾರಣವಾಗಿದೆ. ಅಲ್ಲದೆ ಅಸ್ಸಾಂ ‘ಬಿಹು’ ನೃತ್ಯ ಗಿನ್ನೆಸ್ ದಾಖಲೆ ನಿರ್ಮಿಸಲು ಸರ್ಕಾರದ ಪ್ರೋತ್ಸಾಹ, ಚರೈಡಿಯೋ ಮೈದಾನವನ್ನು ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿ ಘೋಷಿಸಿರುವುದು ಜನರಲ್ಲಿ ಸಂಸ್ಕೃತಿಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎನ್ನುವ ನಿಲುವಿಗೆ ಬರುವಂತೆ ಮಾಡಿದೆ.
ಮೂಲ ಸೌಕರ್ಯದ ಅಭಿವೃದ್ಧಿ
ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾದ ಬೃಹತ್ ಸೇತುವೆಗಳು, ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ ಮತ್ತು ಹೊಸ ರೈಲ್ವೆ ಸಂಪರ್ಕಗಳು ಅಸ್ಸಾಂನ ಚಿತ್ರಣವನ್ನೇ ಬದಲಿಸಿವೆ. ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಗುರಿ ಮತ್ತು ಗುವಾಹಟಿಯಲ್ಲಿ ಏಮ್ಸ್ ಆರಂಭಿಸಿರುವುದು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತಂದಿದೆ. ಇದು ಮಧ್ಯಮ ವರ್ಗದ ಜನರ ಬೆಂಬಲಕ್ಕೆ ಕಾರಣವಾಗಿದೆ.
ಕಡಿಮೆಯಾದ ಹಿಂಸಾಚಾರ, ಗಲಭೆ
ದಶಕಗಳಿಂದ ಅಸ್ಸಾಂನಲ್ಲಿ ನಡೆಯುತ್ತಿದ್ದ ಬೋಡೋಲ್ಯಾಂಡ್ ಮತ್ತು ಉಲ್ಫಾ (ULFA) ಸೇರಿದಂತೆ ಹಲವು ಬಂಡುಕೋರ ಗುಂಪುಗಳೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಇದಲ್ಲದೆ ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯಗಳೊಂದಿಗೆ ದಶಕಗಳಿಂದ ಇದ್ದ ಗಡಿ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸಲು ಎನ್‌ಡಿಎ ಮುಂದಾಗಿದೆ. ಇದು ರಾಜ್ಯದ ಜನರಲ್ಲಿ ಧೈರ್ಯ ಮೂಡಿಸಿದೆ.
ಮೈತ್ರಿಕೂಟದ ಬೆಂಬಲ
ಅಸ್ಸಾಂ ಗಣ ಪರಿಷತ್ (AGP) ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (UPPL) ಜೊತೆಗಿನ ಬಿಜೆಪಿಯ ಮೈತ್ರಿಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಹೀಗಾಗಿ ಇದು ಬುಡಕಟ್ಟು ಮತಗಳು ಮತ್ತು ಸ್ಥಳೀಯ ಅಸ್ಸಾಮಿ ಮತಗಳು ಚದುರದಂತೆ ನೋಡಿಕೊಂಡಿದೆ.
ಉದ್ಯೋಗ ಸೃಷ್ಟಿಯ ಭರವಸೆ
ದೇಶದಾದ್ಯಂತ ಯುವ ಜನತೆ ನಿರುದ್ಯೋಗದ ಸುಳಿಯಲ್ಲಿ ಸಿಲುಕಿರುವ ಹೊತ್ತಿನಲ್ಲಿ ಅಸ್ಸಾಂ ಬಿಜೆಪಿ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ಸುಮಾರು 1.65 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಅತ್ಯಂತ ಪಾರದರ್ಶಕವಾಗಿ ನೀಡಿದೆ ಎಂದು ಹೇಳಿಕೊಂಡಿದೆ. ಇದು ಜನರಲ್ಲಿ ಹೊಸ ಭರವಸೆ ಮೂಡಲು ಕಾರಣವಾಯಿತು.
ಧಾರ್ಮಿಕ ಕೇಂದ್ರಗಳ ರಕ್ಷಣೆ
ಅಸ್ಸಾಂನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾದ ‘ಸತ್ರ’ಗಳ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದವರಿಂದ ಮುಕ್ತಗೊಳಿಸುವ ಸರ್ಕಾರದ ಕ್ರಮವು ಧಾರ್ಮಿಕ ಮತಗಳ ಧ್ರುವೀಕರಣಕ್ಕೆ ನೆರವಾಗಿದೆ.
ಪಕ್ಷದ ಸಂಘಟನೆ
ಬೂತ್ ಮಟ್ಟದಲ್ಲಿ ಬಿಜೆಪಿಯ ಸಂಘಟನೆ ಅತ್ಯಂತ ಪ್ರಬಲವಾಗಿದೆ. ಆರ್‌ಎಸ್‌ಎಸ್ ಮತ್ತು ಇತರ ಸಂಘಟನೆಗಳ ತಳಮಟ್ಟದ ಕೆಲಸವು ಚುನಾವಣೆ ಸಮಯದಲ್ಲಿ ಜನರು ಬಿಜೆಪಿಗೆ ಮತ ಹಾಕುವಂತೆ ಮಾಡಿದೆ.
ವಿರೋಧ ಪಕ್ಷದಲ್ಲಿ ನಾಯಕತ್ವದಲ್ಲಿ ಕೊರತೆ
ಕಾಂಗ್ರೆಸ್ ಮತ್ತು ಬೋಡೋಲ್ಯಾಂಡ್ ನಡುವಿನ ಗೊಂದಲ ಹಾಗೂ ವಿರೋಧ ಪಕ್ಷಗಳಲ್ಲಿ ಬಲವಾದ, ಸರ್ವಸಮ್ಮತ ನಾಯಕನ ಕೊರತೆ ಎನ್‌ಡಿಎ ಗೆಲುವಿನ ಹಾದಿಯನ್ನು ಸುಗಮಗೊಳಿಸಿದೆ.










































