ಬೆಂಗಳೂರು: ನಂದಿನಿ ಹಾಲು ಹಾಗೂ ಉತ್ಪನ್ನಗಳ ಗುಣಮಟ್ಟದಬಗ್ಗೆ ಅಪಪ್ರಚಾರ ಮಾಡುವ ರೀಲ್ಸ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದಡಿ ಚರ್ಮರೋಗ ತಜ್ಞೆ ಡಾ.ಶರಣ್ಯಾ ಪದ್ಮಾ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
‘ನಗರದ 32ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿನ ನನ್ನ ವಿರುದ್ದದ ಕ್ರಿಮಿನಲ್ ಪ್ರಕರಣದ ವಿಚಾರಣೆ ರದ್ದುಪಡಿಸಬೇಕು’ ಎಂದು ಕೋರಿ ಡಾ.ಶರಣ್ಯಾ (42) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠ, ‘ನಂದಿನಿ ಹಾಲು ಸರಿಯಿಲ್ಲ ಎಂದು ನೀವು ಹೇಗೆ ಹೇಳುತ್ತೀರಾ? ನೀವೇನು ಹಾಲು ಪರೀಕ್ಷೆ ಮಾಡಿದ್ದೀರಾ? ಈ ರೀತಿ ಹೇಳುವ ಮೂಲಕ ನೀವು ಜನರನಲ್ಲಿ ಆತಂಕ ಮೂಡಿಸಿದ್ದೀರಿ’ ಎಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.’ಹಾಲು ಪರೀಕ್ಷೆ ಮಾಡಿ ಅದರ ಗುಣಮಟ್ಟವನ್ನು ಏನಾದರೂ ದೃಢೀಕರಿಸಿದ್ದೀರಾ ಮತ್ತು ಈ ಬಗ್ಗೆ ಸರ್ಕಾರಕ್ಕೆ ಯಾವತ್ತಾದರೂ ಮಾಹಿತಿ ನೀಡಿದ್ದೀರಾ’ ಎಂದು ಖಾರವಾಗಿ ಪ್ರಶ್ನಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಲು ನಿರಾಕರಿಸಿತು.
ಪ್ರಕರಣದ ಪ್ರತಿವಾದಿಗಳಾದ ರಾಜ್ಯ ಪ್ರಾಸಿಕ್ಯೂಷನ್, ಕೆಎಂಎಫ್ ನಿರ್ದೇಶಕಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.
ಕೆಎಂಎಫ್ ಸ್ಪಷ್ಟನೆ: ‘ಕೆಎಂಎಫ್ (ಕರ್ನಾಟಕ ಸಹಕಾರ ಹಾಲುಉತ್ಪಾದಕರ ಮಹಾಮಂಡಳಿ) ಉತ್ಪನ್ನಗಳಿಗೆ ಯಾವುದೇ ರಾಸಾಯನಿಕ ಹಾಕಲಾಗುವುದಿಲ್ಲ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಸಂಪೂರ್ಣ ಸುರಕ್ಷಿತವಾಗಿವೆ. ಸ್ವಚ್ಛ ಹಾಗೂ ಉತ್ತಮ ಗುಣಮಟ್ಟದಿಂದ ಕೂಡಿವೆ. ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ ನಿಗದಿಪಡಿಸಿದ ಎಲ್ಲಾ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ’ ಎಂದು ಕೆಎಂಎಫ್ ಸ್ಪಷ್ಟನೆ ನೀಡಿತ್ತು.’ಈತನಕ ಕೆಎಂಎಫ್ ಉತ್ಪನ್ನಗಳ ಬಗ್ಗೆ ಯಾವುದೇ ದೂರು ಬಂದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಕೆಎಂಎಫ್ ಉತ್ಪನ್ನಗಳ ಬಗ್ಗೆ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಡಾ.ಶರಣ್ಯಾ ಪದ್ಮಾ ವಿರುದ್ಧ ಕೇಸ್ ದಾಖಲಿಸಲಾಗಿದೆ’ ಎಂದು ಎಚ್ಚರಿಸಿತ್ತು.
ಅಂತೆಯೇ, ಈ ನಿಟ್ಟಿನಲ್ಲಿ ಕೆಎಂಎಫ್ ನಿರ್ದೇಶಕಿ ಆರ್.ಪದ್ಮಾವತಿ, ‘ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಡಾ.ಶರಣ್ಯಾ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋರಿ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಇದರ ಆಧಾರದಡಿ ಪೊಲೀಸರು; ಭಾರತೀಯ ನ್ಯಾಯ ಸಂಹಿತಾ-2023ರ (ಬಿಎನ್‌ಎಸ್) ಕಲಂ 353(1) (ಬಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಕಲಂ 66(ಡಿ) ಅಡಿಯಲ್ಲಿ ಡಾ.ಶರಣ್ಯಾ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಕ್ಯಾನ್ಸರ್ ಬರಲಿದೆ ಎಂಬ ಭೀತಿಯ ರೀಲ್ಸ್
ಡಾ .ಶರಣ್ಯಾ ಪದ್ಮಾಕೋಲಾರ ಜಿಲ್ಲೆಯ ಮಾಲೂರಿನ ಹೆಸರಾಂತ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, 2026ರ ಫೆಬ್ರುವರಿ 8ರಂದು ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ಕುರಿತು ರೀಲ್ಸ್ ಹರಿಬಿಟ್ಟಿದ್ದರು.’ನಂದಿನಿ ಉತ್ಪನ್ನಗಳಾದ ಕ್ರೀಮ್ ಬನ್, ಸ್ಟ್ರಾಬೆರ್ರಿ ಪ್ಲೇವರ್ಡ್ ಮಿಲ್ಕ್ ಹಾಗೂ ಫ್ಲ್ಯಾಷ್ ಡ್ರಿಂಕ್ಸ್ ಉತ್ಪನ್ನಗಳು ವಿಷಕಾರಿ ಹಾಗೂ ರಾಸಾಯನಿಕ ಯುಕ್ತವಾಗಿವೆ. ಇವುಗಳ ಸೇವನೆಯಿಂದ ಭವಿಷ್ಯದಲ್ಲಿ ಕ್ಯಾನ್ಸರ್ ಬರಲಿದೆ. ಈ ಉತ್ಪನ್ನಗಳನ್ನು ನೈಸರ್ಗಿಕವಲ್ಲದ ಕೃತಕ ಬಣ್ಣ ಬೆರೆಸಿ ತಯಾರಿಸಲಾಗಿದೆ. ನಂದಿನಿ ಉತ್ಪನ್ನಗಳ ತಯಾರಿಕೆಗೆ, ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ (ಎಫ್‌ಎಸ್‌ಎಸ್‌ಎಐ) ಹೇಗೆ ಅನುಮತಿ ನೀಡಿದೆ’ ಎಂದು ಪ್ರಶ್ನಿಸಿದ್ದರು.“ಕೆಎಂಎಫ್ ಒಂದು ಸರ್ಕಾರಿ ಸ್ವಾಮ್ಯದ ಮಂಡಳಿ. ಸರ್ಕಾರ ಇದರ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡಿ ಲಾಭ ಪಡೆಯುವ ಭ್ರಮೆಯಲ್ಲಿದೆ. ಹೀಗಾಗಿ, ಕೆಎಂಎಫ್ ರೀತಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಬಾರದು’ ಎಂದು ಅವರು ತಮ್ಮ ರೀಲ್ಸ್‌ನಲ್ಲಿ ವಿವರಿಸಿದ್ದರು. ಈ ವಿಡಿಯೋ ಇನ್ಸ್‌ಸ್ಟಾಗ್ರಾಂನಲ್ಲಿ ವ್ಯಾಪಕ ಪ್ರಚಾರ ಪಡೆದು ವೈರಲ್ ಆಗಿತ್ತು.










































