ರಾಜ್ಯದ ರೈತರಿಗೆ ಸಹಕಾರಿ ಸಂಘಗಳ ಮೂಲಕ ನೀಡಲಾಗುತ್ತಿರುವ ಶೂನ್ಯ ಬಡ್ಡಿದರದ ಅಲ್ಪಾವಧಿ ಕೃಷಿ ಸಾಲದ ಗರಿಷ್ಠ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಿರುವ ಕುರಿತು ಸರಕಾರ ಸ್ಪಷ್ಟ ವಾದ ಮಾಹಿತಿ ಮತ್ತು ಅನುಷ್ಠಾನದ ಮಾರ್ಗಸೂಚಿ ತಕ್ಷಣ ಬಿಡುಗಡೆಗೆ ಒತ್ತಾಯ ಕೇಳಿ ಬಂದಿದೆ.ರಾಜ್ಯದಲ್ಲಿ ಹಲವು ವರ್ಷಗಳಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪಿಎಸಿಎಸ್) ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಮೂಲಕ ಅರ್ಹ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಕೃಷಿ ಸಾಲವನ್ನು ನೀಡಲಾಗುತ್ತಿದೆ. ಈ ಸಾಲದ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ. ಗೆ ಹೆಚ್ಚಿಸುವ ಕುರಿತು ಸರಕಾರ ಈಗಾಗಲೇ ನಿರ್ಧಾರ ಕೈಗೊಂಡಿರುವ ಬಗ್ಗೆ 2023ರಲ್ಲಿಯೇ ಸರಕಾರ ಆದೇಶ ಹೊರಡಿಸಿದೆ.
ಆದರೆ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ಕೃಷಿ ಸಾಲ ಲಭ್ಯವಿದೆ ಎಂಬ ಸಂದೇಶ ರೈತರಿಗೆ ತಲುಪುತ್ತಿರುವ ರೀತಿಗೂ, ವಾಸ್ತವವಾಗಿ ಹಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ವಿತರಣೆ ನಡೆ ಯುತ್ತಿರುವ ರೀತಿಗೂ ವ್ಯತ್ಯಾಸ ಕಂಡುಬರುತ್ತಿದೆ. ಪರಿಣಾಮ ರೈತರು ಸಹಕಾರಿ ಸಂಘಗಳಿಗೆ ತೆರಳಿ 5 ಲಕ್ಷ ರೂ. ಸಾಲಕ್ಕಾಗಿ ವಿಚಾರಿಸುತ್ತಿದ್ದಾರೆ. ಆದರೆ ಹಲವು ಕಡೆಗಳಲ್ಲಿ 3 ಲಕ್ಷ ರೂ. ವರೆಗೆ ಮಾತ್ರ ಸಾಲ ನೀಡಲು ಸಾಧ್ಯವಾಗುತ್ತಿರುವ ಪರಿಸ್ಥಿತಿ ಕಂಡು ಬರು ತಿದ್ದು ಇದರಿಂದ ರೈತರು ಮತ್ತು ಸಹಕಾರಿ ಸಂಘಗಳ ನಡುವೆ ಅನಗತ್ಯ ಗೊಂದಲ ಉಂಟಾಗುತ್ತಿದೆ.
ಸಂದೇಶದಿಂದ ಗೊಂದಲ: ಇತ್ತೀಚೆಗೆ ಮುಖ್ಯಮಂತ್ರಿ ಕಚೇರಿ ಅಥವಾ ಸರಕಾರದ ಹೆಸರಿನಲ್ಲಿ ರೈತರಿಗೆ ಮೊಬೈಲ್/ವಾಟ್ಸ್ ಆ್ಯಪ್ ಮೂಲಕ 5 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ಲಭ್ಯವಿದ್ದು, ರೈತರು ತಮ್ಮ ಹತ್ತಿರದ ಸಹಕಾರಿ
ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು ಎಂಬ ಅರ್ಥ ಬರುವ ಸಂದೇಶಗಳು ರೈತರಿಗೆ ತಲುಪುತ್ತಿವೆ.ಇಂತಹ ಸಂದೇಶಗಳಿಂದ ರೈತರು ಸಹಜ ವಾಗಿಯೇ ತಮ್ಮ ಸಹಕಾರಿ ಸಂಘಗಳಿಗೆ ತೆರಳಿ 5 ಲಕ್ಷ ರೂ. ಸಾಲದ ಬಗ್ಗೆ ವಿಚಾರಿಸುತ್ತಿದ್ದಾರೆ. ಈಗಾಗಲೇ 3 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿ ದರದ ಕೃಷಿ ಸಾಲ ಪಡೆಯುತ್ತಿರುವ ರೈತರು, ಹೊಸ ಪ್ರಕಟಣೆ ಹಿನ್ನೆಲೆಯಲ್ಲಿ ಇನ್ನು ಮುಂದೆ ನಮಗೆ 5 ಲಕ್ಷ ರೂ. ವರೆಗೆ ಸಂಪೂರ್ಣ ಶೂನ್ಯ ಬಡ್ಡಿ ಸಾಲ ಸಿಗುತ್ತದೆಯೇ
ಎಂದು ಸಹಕಾರಿ ಸಂಘಗಳ ಸಿಬ್ಬಂದಿ ಮತ್ತು ಆಡಳಿತ ಮಂಡಳಿಗಳನ್ನು ಪ್ರಶ್ನಿಸುತ್ತಿದ್ದಾರೆ.ಇಂದಿನ ಕೃಷಿ ವೆಚ್ಚ ಕೂಲಿ, ಗೊಬ್ಬರ, ಬೀಜ, ಕೃಷಿ ಯಂತ್ರೋಪಕರಣ, ನೀರಾವರಿ ಹಾಗೂ ಬೆಳೆ ಸಂರಕ್ಷಣೆಯ ವೆಚ್ಚಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ 3 ಲಕ್ಷ ರೂ. ಮಿತಿ ಅನೇಕ ರೈತರಿಗೆ ಸಾಕಾಗುವುದಿಲ್ಲ. ಆದ್ದರಿಂದ 5 ಲಕ್ಷ ರೂ. ಮಿತಿಯ ಅನುಷ್ಠಾನ ನಿಜ ವಾಗಿಯೂ ರೈತರಿಗೆ ತಲುಪಬೇಕು ಎನ್ನುವ ಬೇಡಿಕೆ ರೈತರದ್ದು.
ಸಹಕಾರಿ ಕ್ಷೇತ್ರವು ರಾಜ್ಯದ ಕೃಷಿ ಆರ್ಥಿಕತೆಯ ಪ್ರಮುಖ ಆಧಾರವಾಗಿದ್ದು, ರೈತ ಸಹಕಾರಿ ಸಂಘ, ಜಿಲ್ಲಾ ಸಹಕಾರಿ ಬ್ಯಾಂಕ್, ರಾಜ್ಯ ಸಹಕಾರಿ ಬ್ಯಾಂಕ್, ಸರಕಾರ ನಡುವೆ ಸಮನ್ವಯದಿಂದ ಮಾತ್ರ ಶೂನ್ಯ ಬಡ್ಡಿ ಕೃಷಿ ಸಾಲ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲು ಸಾಧ್ಯ. ಆದ್ದರಿಂದ ರಾಜ್ಯ ಸರಕಾರವು ಈ ವಿಷಯವನ್ನು ತುರ್ತು ಆದ್ಯತೆಯಲ್ಲಿ ಪರಿಗಣಿಸಿ, ರೈತರು ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸುವ ಸ್ಪಷ್ಟ ಆದೇಶ ಹೊರಡಿಸಬೇಕು.
–ಸಾಣೂರು ನರಸಿಂಹ ಕಾಮತ್
ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸಹಕಾರ ಭಾರತಿ.








































