ಕುಕ್ಕೆ ಸುಬ್ರಹ್ಮಣ್ಯ, ಜುಲೈ 7: ಜುಲೈ 10ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ ಅವರು ಸೋಮವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಹತ್ವದ ಸಭೆ ನಡೆಸಿದರು.
ಕುಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವೈದ್ಯರ ಕೊರತೆ, 24 ಗಂಟೆಗಳ ತುರ್ತು ಆರೋಗ್ಯ ಸೇವೆಯ ಅಭಾವ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆಗಳ ಕುರಿತು ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಅಧಿಕಾರಿಗಳ ಮುಂದಿಟ್ಟರು.
ಸಭೆಯಲ್ಲಿ ಗ್ರಾಮಸ್ಥರು, ಕುಕ್ಕೆ ಸುಬ್ರಹ್ಮಣ್ಯವು ಲಕ್ಷಾಂತರ ಭಕ್ತರು ಭೇಟಿ ನೀಡುವ ಕ್ಷೇತ್ರವಾಗಿದ್ದು, ಶನಿವಾರ, ಭಾನುವಾರ ಹಾಗೂ ರಾತ್ರಿ ವೇಳೆಯಲ್ಲಿ ವೈದ್ಯರಿಲ್ಲದ ಕಾರಣ ತುರ್ತು ಚಿಕಿತ್ಸೆಗೆ ಸಾರ್ವಜನಿಕರು ಮತ್ತು ಭಕ್ತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ತಕ್ಷಣ ಶಾಶ್ವತ ವೈದ್ಯರನ್ನು ನೇಮಿಸಿ, ಆಸ್ಪತ್ರೆಯಲ್ಲಿ 24 ಗಂಟೆಗಳ ವೈದ್ಯಕೀಯ ಸೇವೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಸರ್ಕಾರದ ನಿಯಮಾನುಸಾರ ವೈದ್ಯರ ನೇಮಕ ಪ್ರಕ್ರಿಯೆಗೆ ಸಮಯ ಬೇಕಾಗುತ್ತದೆ. ಈ ಕುರಿತು ಸರ್ಕಾರ ಹಾಗೂ ಆರೋಗ್ಯ ಸಚಿವರ ಗಮನಕ್ಕೆ ವಿಷಯವನ್ನು ತಂದು ಅಗತ್ಯ ಕ್ರಮಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.ತಾತ್ಕಾಲಿಕ ಪರಿಹಾರವಾಗಿ, ಸರ್ಕಾರದ ಅನುಮತಿ ಪಡೆದು ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜಿನ ವೈದ್ಯರನ್ನು ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕಡಬ ಭಾಗಕ್ಕೆ ಸೇವೆಗೆ ನಿಯೋಜಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುವುದು. ಈ ಸಂಬಂಧ ಕೆವಿಜಿ ಆಡಳಿತವನ್ನು ಭೇಟಿಯಾಗಿ ಮನವಿ ಸಲ್ಲಿಸಲು ತಾವೂ ಗ್ರಾಮಸ್ಥರೊಂದಿಗೆ ಬರಲು ಸಿದ್ಧವಿರುವುದಾಗಿ ಅವರು ಭರವಸೆ ನೀಡಿದರು.ಸಭೆಯಲ್ಲಿ ಹೋರಾಟ ಸಮಿತಿಯ ಪ್ರಮುಖ ಶಿವರಾಮ ರೈ ಸೇರಿದಂತೆ ಹಲವು ಗ್ರಾಮಸ್ಥರು ಅಧಿಕಾರಿಗಳ ಭರವಸೆಯನ್ನು ಸ್ವಾಗತಿಸಿದರೂ, ಶಾಶ್ವತ ಪರಿಹಾರ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.ಸಮಾಜಸೇವಕ ರವಿ ಕಕ್ಕೆಪದವು ಮಾತನಾಡಿ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ವೈದ್ಯರ ಕೊರತೆಯಿಂದ ಹಲವು ಅಮೂಲ್ಯ ಜೀವಗಳು ಕಳೆದುಹೋಗಿವೆ. ಈ ಪರಿಸ್ಥಿತಿ ಮರುಕಳಿಸದಂತೆ ಸರ್ಕಾರ ಶಾಶ್ವತ ವೈದ್ಯರನ್ನು ತಕ್ಷಣ ನೇಮಿಸಬೇಕು ಎಂದು ಭಾವುಕರಾಗಿ ಮನವಿ ಮಾಡಿದರು.
ಸಭೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯರಾದ ಅಶೋಕ್ ನೆಕ್ರಜೆ, ಡಾ. ರಘು, ಶ್ರೀಮತಿ ಸೌಮ್ಯ ಭರತ್, ಶ್ರೀಮತಿ ಲೀಲಾ ಮನಮೋಹನ್. ಶ್ರೀಮತಿ ಪ್ರವೀಣಾ ರೈ, ಸುಳ್ಯ ಮತ್ತು ಕಡಬ ತಾಲೂಕು ಆರೋಗ್ಯಾಧಿಕಾರಿಗಳು, ಡಾ. ಮಂಜುನಾಥ್, ಶಿವರಾಮ ರೈ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಪವನ್ ಎಂ.ಡಿ, ಅಚ್ಚುತ ಆಲ್ಕಬೆ, ಸ್ಥಳೀಯರಾದ ಶಿವಕುಮಾರ್ ಹೊಸೋಳಿಕೆ, ಗಣೇಶ್ ಪ್ರಸಾದ್, ರಾಜೇಶ್ ಎನ್ ಎಸ್, ದೀಪಕ್ ನಂಬಿಯಾರ್, ಗೋಪಾಲ ಎಣ್ಣೆಮಜಲು, ಅಶೋಕ್ ಕುಮಾರ್, ಡಾ| ರವಿ ಕಕ್ಕೆಪದವು, ಎಚ್.ಎಲ್ ವೆಂಕಟೇಶ್, ಮೋಹನ್ ದಾಸ್ ರೈ, ಸುಹಾಸ್, ಪ್ರಕಾಶ್ ಶೆಟ್ಟಿ, ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ, ರವಿ ಶೆಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಮಸ್ಥರು, ಸರ್ಕಾರವು ಶೀಘ್ರದಲ್ಲಿ ಸ್ಪಷ್ಟ ಕ್ರಮ ಕೈಗೊಂಡು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಾಶ್ವತ ವೈದ್ಯರನ್ನು ನೇಮಿಸಿ 24 ಗಂಟೆಗಳ ಆರೋಗ್ಯ ಸೇವೆ ಆರಂಭಿಸಬೇಕೆಂದು ಆಗ್ರಹಿಸಿದ್ದಾರೆ.









































