ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಟಕ್ಕೆ ಅಡ್ಡಿ: ಸಮಸ್ಯೆ ಪರಿಹಾರಕ್ಕೆ ಕರ್ನಾಟಕ ನಿಯೋಗದಿಂದ ಫಡ್ನವಿಸ್ ಭೇಟಿ

Picture of Savistara

Savistara

Bureau Report

ನವದೆಹಲಿ: ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಟದ ವಾಹನಗಳ ಸಂಚಾರಕ್ಕೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ, ಅಡಿಕೆ ಬೆಳೆಗಾರರು ಹಾಗೂ ವರ್ತಕರ ಹಿತರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಕೋರಿ ಕರ್ನಾಟಕದ ಉನ್ನತ ಮಟ್ಟದ ನಿಯೋಗವು ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಅವರ ನೇತೃತ್ವದಲ್ಲಿ ನಡೆದ ಈ ಭೇಟಿಯಲ್ಲಿ, ನಿಯಮಬದ್ಧ ಹಾಗೂ ಕಾನೂನುಬದ್ಧವಾಗಿ ಸಾಗಣೆಯಾಗುತ್ತಿರುವ ಅಡಿಕೆ ವಾಹನಗಳ ಸಂಚಾರಕ್ಕೆ ಮಹಾರಾಷ್ಟ್ರದಲ್ಲಿ ಎದುರಾಗುತ್ತಿರುವ ಅಡಚಣೆಗಳನ್ನು ತಕ್ಷಣವೇ ನಿವಾರಿಸುವಂತೆ ನಿಯೋಗವು ಒತ್ತಾಯಿಸಿತು.

ನಿಯೋಗದಲ್ಲಿ ಸಂಸದರಾದ ಕ್ಯಾ ಬ್ರಿಜೇಶ್ ಚೌಟ, ಬಿ.ವೈ. ರಾಘವೇಂದ್ರ ಹಾಗೂ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಆರಗ ಜ್ಞಾನೇಂದ್ರ ಮತ್ತು ರಾಜೇಶ್ ನಾಯ್ಕ, ಕ್ಯಾಂಸ್ಕೋ ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿವಿಧ ಅಡಿಕೆ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಅಡಿಕೆಯು ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದ್ದು, ರಾಜ್ಯದ ಲಕ್ಷಾಂತರ ರೈತ ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದೆ. ಅಷ್ಟೇ ಅಲ್ಲದೆ. ಅಡಿಕೆ ವ್ಯಾಪಾರವನ್ನು ಅವಲಂಬಿಸಿರುವ ವರ್ತಕರು, ಕಾರ್ಮಿಕರು, ಸಾರಿಗೆದಾರರು ಮತ್ತು ಸಹಕಾರಿ ಸಂಸ್ಥೆಗಳ ಆರ್ಥಿಕ ಚಟುವಟಿಕೆಗಳಿಗೂ ಇದು ಪ್ರಮುಖ ಬೆನ್ನೆಲುಬಾಗಿದೆ ಎಂದು ನಿಯೋಗವು ಮುಖ್ಯಮಂತ್ರಿ ಗಮನಕ್ಕೆ ತಂದಿತು.

ಅಂತರರಾಜ್ಯ ವ್ಯಾಪಾರಕ್ಕೆ ಯಾವುದೇ ರೀತಿಯ ಅನಗತ್ಯ ಅಡ್ಡಿ ಉಂಟಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದ್ದು, ಕಾನೂನುಬದ್ಧ ದಾಖಲೆಗಳೊಂದಿಗೆ ಸಾಗುತ್ತಿರುವ ಅಡಿಕೆ ವಾಹನಗಳ ಸುಗಮ ಸಂಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ನಿಯೋಗವು ಮನವಿ ಮಾಡಿತು.ರಾಜ್ಯದ ರೈತರು ಹಾಗೂ ಅಡಿಕೆ ವ್ಯಾಪಾರ ವಲಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.

[t4b-ticker]
error: Content is protected !!