ಬೆಂಗಳೂರು: ಹೊಗೆ ತಪಾಸಣೆ ನಡೆಸಿ ವಾಹನಗಳವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ನೀಡಲು ಸಾರ್ವಜನಿಕರಿಂದ ಪಡೆಯುವ ಪರೀಕ್ಷಾ ಶುಲ್ಕವನ್ನು ಸಾರಿಗೆ ಇಲಾಖೆ ಹೆಚ್ಚಿಸಿ ಆದೇಶ ಹೊರಡಿಸಿದೆ.
‘ಕಚ್ಚಾ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್-ಡೀಸೆಲ್ ದರ, ವಿದ್ಯುತ್ ಬಿಲ್ ಹಾಗೂ ಉಪಕರಣ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವುದರಿಂದ ಹೊಗೆ ತಪಾಸಣೆಯ ಶುಲ್ಕ ಹೆಚ್ಚಿಸಬೇಕು ಎಂದು ತಪಾಸಣಾ ಕೇಂದ್ರಗಳು ಮನವಿ ಮಾಡಿದ್ದವು. ಅದರಂತೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ’ ಎಂದು ಸಾರಿಗೆ ಇಲಾಖೆ ತಿಳಿಸಿದೆ.ಗಣಕೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ತಪಾಸಣಾ ಕೇಂದ್ರಗಳು ಮಾತ್ರ ಸಾರ್ವಜನಿಕರಿಂದ ಈ ಪರಿಷ್ಕೃತ ಶುಲ್ಕವನ್ನು ವಸೂಲಿ ಮಾಡುವ ಅರ್ಹತೆ ಹೊಂದಿವೆ.ಕೇಂದ್ರಗಳಲ್ಲಿ ನುರಿತ ಸಿಬ್ಬಂದಿಯನ್ನು ನೇಮಿಸಿರಬೇಕು. ನಿಯಮಿತವಾಗಿ ಗ್ಯಾಸ್ ಅನಲೈಸರ್‌ಗಳನ್ನು ಮರುಮಾಪನ ಮಾಡಬೇಕು ಮತ್ತು ಅದರ ವಿವರಗಳನ್ನು ಸಾರ್ವಜನಿಕರಿಗೆ ಕಾಣಿಸುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ಪ್ರಮಾಣಪತ್ರಗಳಲ್ಲಿ ಯಾವುದೇ ಕೈಬರಹಕ್ಕೆ ಅವಕಾಶವಿರುವುದಿಲ್ಲ. ಆನ್‌ಲೈನ್ ಪ್ರಮಾಣಪತ್ರಗಳ ಮೇಲೆ ಹಾಲೋಗ್ರಾಂ ಮತ್ತು ತಪಾಸಣೆಗೊಳಪಟ್ಟ ವಾಹನಕ್ಕೆ ಸ್ಟಿಕ್ಕರ್ ಅಂಟಿಸುವುದು ಕಡ್ಡಾಯ. ನಿಯಮಗಳನ್ನು ಉಲ್ಲಂಘಿಸುವ ಕೇಂದ್ರಗಳ ಪರವಾನಗಿಯನ್ನು ಅಮಾನತು ಅಥವಾ ರದ್ದುಗೊಳಿಸಲಾಗುವುದು ಎಂದು ತಪಾಸಣಾ ಕೇಂದ್ರಗಳಿಗೆ ಇಲಾಖೆ ಸೂಚನೆ ನೀಡಿದೆ.













































