ಬೆಂಗಳೂರು, ಆಗಸ್ಟ್ 17: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಧಾನಸಭೆಯಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಕಲಾಪದಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮೃತಪಟ್ಟವರು ತಮ್ಮ ಜಮೀನಿಗೆ ಹೋಗಿರಲಿಲ್ಲ, ಬದಲಾಗಿ ಅರಣ್ಯದೊಳಗೆ 5 ರಿಂದ 8 ಕಿಲೋಮೀಟರ್ ಅಕ್ರಮವಾಗಿ ಪ್ರವೇಶಿಸಿದ್ದರು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಅರಣ್ಯ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಶೂಟೌಟ್ ಮಾಡಿಲ್ಲ, ಆತ್ಮರಕ್ಷಣೆಗಾಗಿ ಹಾಗೂ ಕತ್ತಲಿನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿರುವ ಸಚಿವರು, ಸಿಬ್ಬಂದಿಯ ತಪ್ಪು ಕಂಡುಬಂದರೆ ಖಂಡಿತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಸಚಿವರು ನೀಡಿದ ವಿವರಗಳ ಪ್ರಕಾರ, ಹನೂರು ವ್ಯಾಪ್ತಿಯ ಶಾಗ್ಯ ಬಳಿ ಕಳ್ಳಬೇಟೆಗಾರರು ಅಕ್ರಮವಾಗಿ ಅರಣ್ಯ ಪ್ರವೇಶಿಸಿರುವ ಕುರಿತು ಹಿಂದಿನ ದಿನ ರಾತ್ರಿ 8 ಗಂಟೆಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ 10 ಸಿಬ್ಬಂದಿಯನ್ನೊಳಗೊಂಡ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಮುಂಜಾನೆ 5 ಗಂಟೆಯ ಸುಮಾರಿಗೆ ಅರಣ್ಯದ ಬಂಡೆಯೊಂದರ ಬಳಿ ಬ್ಯಾಟರಿ ಬೆಳಕು ಕ೦ಡುಬ೦ದಿದೆ. ಸಿಬ್ಬಂದಿ ಅವರನ್ನು ಶರಣಾಗುವಂತೆ ಮನವಿ ಮಾಡಿದ್ದಾರೆ.ಈ ವೇಳೆ ಬೇಟೆಗಾರರ ಕಡೆಯಿಂದ ಸಿಬ್ಬಂದಿಯತ್ತ ಗುಂಡಿನ ದಾಳಿ ನಡೆದಿದ್ದು, ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಮರುದಾಳಿ ನಡೆಸಿದ್ದಾರೆ. ಘಟನೆ ನಡೆದಾಗ ಎತ್ತರದ ಪ್ರದೇಶದಲ್ಲಿದ್ದ ಬೇಟೆಗಾರರು ಕತ್ತಲಿನಿಂದಾಗಿ ಅಸ್ಪಷ್ಟವಾಗಿ ಗೋಚರಿಸುತ್ತಿದ್ದರು. ಮರುದಾಳಿ ವೇಳೆ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗುಂಡಿನ ದಾಳಿ ನಿಂತ ಬಳಿಕ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಮೂವರಿಗೆ ಗುಂಡು ತಗುಲಿರುವುದು ಕಂಡುಬಂದಿದೆ. ಆಸ್ಪತ್ರೆಗೆ ಸ್ಥಳಾಂತರಿಸಿದಾಗ ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದು, ಮೃತದೇಹಗಳನ್ನು ಮೈಸೂರಿಗೆ ರವಾನಿಸಲಾಗಿದೆ.ಘಟನಾ ಸ್ಥಳದಲ್ಲಿದ್ದ ಬೇಟೆಗಾರರಿಂದ 2 ನಾಡಬ೦ದೂಕುಗಳು, ಕಾಡತೂಸುಗಳು, ಪಟಾಕಿ, ಮದ್ದಿನ ಬಾಕ್ಸ್ ಮೊಬೈಲ್‌ಗಳು, ಚಾರ್ಜರ್ ಬ್ಯಾಟರಿ ಹಾಗೂ ದಿನಸಿ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಅವರ ಬ್ಯಾಗ್‌ನಲ್ಲಿ ಸುಮಾರು 20 ರಿಂದ 35 ಕೆಜಿಯಷ್ಟು ಜಿಂಕೆ ಮಾಂಸ ಪತ್ತೆಯಾಗಿದೆ. ಇವರು ಕಾಡಿನಲ್ಲಿ 5 ರಿಂದ 8 ಕಿಲೋಮೀಟರ್ ಅಕ್ರಮವಾಗಿ ಸಂಚರಿಸಿದ್ದರು ಎಂದು ಸಚಿವರು ತಿಳಿಸಿದ್ದಾರೆ.
ಅರಣ್ಯವನ್ನು ಉಳಿಸುವುದು ಇಲಾಖೆಯ ಕರ್ತವ್ಯ. ಅರಣ್ಯ ಕಾಯ್ದೆಯಡಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಒಂದು ವೇಳೆ ತನಿಖೆಯ ನಂತರ ನಮ್ಮ ಸಿಬ್ಬಂದಿ ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ದರೆ ಅಥವಾ ಕಾಯ್ದೆ ಮೀರಿದ್ದರೆ ಅವರ ವಿರುದ್ದ ಖಂಡಿತ ಕಠಿಣ ಕ್ರಮ ಜರುಗಿಸುತ್ತೇವೆ,” ಎ೦ದು ಸಚಿವ ರಾಮಲಿಂಗಾರೆಡ್ಡಿ ಸದನಕ್ಕೆ ತಿಳಿಸಿದ್ದಾರೆ.ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತರಾದವರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಹಾಗೂ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲು ತಕ್ಷಣ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಒತ್ತಾಯಿಸಿದ್ದಾರೆ. ಜೊತೆಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.













































