ಲಖನೌ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಕಳವು ಪ್ರಕರಣದ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡವು (ಎಸ್‌ಐಟಿ) ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ನಿರ್ದೋಷಿ ಎಂದಿದೆ.
‘ಎಸ್‌ಐಟಿಯು ಸೋಮವಾರ ರಾತ್ರಿ ರಾಜ್ಯ ಸರ್ಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದೆ. ದೇಗುಲದಲ್ಲಿ ಕಾಣಿಕೆ ಎಣಿಸುತ್ತಿದ್ದ, ಸದ್ಯ ಜೈಲಿನಲ್ಲಿರುವ ಎಂಟು ಮಂದಿ ಆರೋಪಿಗಳ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.ಎಸ್‌ಐಟಿ ವರದಿಯಲ್ಲಿ ಟ್ರಸ್ಟ್‌ನ ಮಾಜಿ ಸದಸ್ಯ ಅನಿಲ್ ಮಿಶ್ರಾ ಅವರ ಹೆಸರನ್ನು ಉಲ್ಲೇಖಿಸಲಾಗಿದೆಯೇ ಎಂಬುದು ಸದ್ಯಕ್ಕೆ ತಿಳಿದಿಲ್ಲ. ದೇಣಿಗೆ ಕಳವು ಪ್ರಕರಣದ ವಿವಾದದ ಬಳಿಕ ರಾಯ್ ಮತ್ತು ಮಿಶ್ರಾ ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜ್ಯ ಸರ್ಕಾರವು ಜೂನ್ 13ರಂದು ಮೂವರು ಸದಸ್ಯರನ್ನು ಒಳಗೊಂಡ ಎಸ್‌ಐಟಿ ರಚನೆ ಮಾಡಿತ್ತು. ವರದಿಯು ಸಾರ್ವಜನಿಕವಾಗಿ ಲಭ್ಯವಿಲ್ಲ. ಆದರೆ ನಗದು ಸಂಗ್ರಹ, ಎಣಿಕೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯ ವಿವರಗಳನ್ನು ಒಳಗೊಂಡಿದೆ.
ರಾಯ್ ಸಂವಾದ
ಅಯೋಧ್ಯೆ (ಪಿಟಿಐ): ರಾಮಮಂದಿರದ ದೇಣಿಗೆ ಕಳವು ಪ್ರಕರಣದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಅವರು ಮತ್ತೆ ಅಯೋಧ್ಯೆಯಲ್ಲಿ ಸಕ್ರಿಯರಾಗಿದ್ದಾರೆ.
ಸಾಧು-ಸಂತರೊಂದಿಗೆ ಸಭೆ ನಡೆಸಿ ಸಂವಾದ ನಡೆಸುತ್ತಿದ್ದಾರೆ.ವಿವಾದದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ರಾಯ್ ಅವರು ಇತ್ತೀಚೆಗೆ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 25ರಂದು ಎಫ್‌ಐಆರ್ ದಾಖಲಾಗಿದ್ದು, ಎಂಟು ಮಂದಿಯನ್ನು ಬಂಧಿಸಲಾಗಿದೆ.













































