ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ ಆದೇಶವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಅತ್ಯಂತ ಖಡಕ್ ಆಗಿ ಸ್ಪಷ್ಟಪಡಿಸಿದ್ದಾರೆ.
ಶಾಸಕರು ಯಾರೋ ಏನೋ ಹೇಳಿದರು ಎಂದ ತಕ್ಷಣ ಸರ್ಕಾರ ತನ್ನ ನಿರ್ಧಾರ ಬದಲಿಸಲು ಸಾಧ್ಯವಿಲ್ಲ ಎಂದು ಗರಂ ಆಗಿರುವ ಸಚಿವರು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಸರ್ಕಾರ ಗುಟ್ಕಾ ಬ್ಯಾನ್ ಆದೇಶವನ್ನು ಹಿಂಪಡೆಯುತ್ತದೆ ಎಂದು ಯಾರು ಹೇಳಿದ್ದು? ಶಾಸಕರು ಬಂದು ಏನೋ ಮಾತನಾಡುತ್ತಾರೆ ಎಂದ ತಕ್ಷಣ ಅದನ್ನು ಕೇಳಲು ಸಾಧ್ಯವೇ ಎಂದು ನೇರವಾಗಿ ಪ್ರಶ್ನಿಸಿದರು. 2024 ರಲ್ಲಿಯೂ ನಾನೇ ಮೊದಲ ಬಾರಿಗೆ ಇದನ್ನು ಬ್ಯಾನ್ ಮಾಡಿದ್ದೆ. ಗುಟ್ಕಾ ಇರಲಿ, ಆದರೆ ಅದರಲ್ಲಿ ಯಾವುದೇ ಕಾರಣಕ್ಕೂ ಅಪಾಯಕಾರಿ ನಿಕೋಟಿನ್ ಮಿಶ್ರಣವಾಗಿ ಮಾರುಕಟ್ಟೆಗೆ ಬರಬಾರದು. ಈ ಕುರಿತು ನಾನು ಶೀಘ್ರದಲ್ಲೇ ಮುಖ್ಯಮಂತ್ರಿಗಳ ಜೊತೆಯೂ ಚರ್ಚೆ ನಡೆಸಲಿದ್ದೇನೆ ಎಂದು ತಿಳಿಸಿದರು.ಗುಟ್ಕಾ ಸೇವನೆಯಿಂದಾಗುವ ತೀವ್ರ ದುಷ್ಪರಿಣಾಮಗಳನ್ನು ಬಿಚ್ಚಿಟ್ಟ ಸಚಿವರು, ನಿಷೇಧವನ್ನು ವಿರೋಧಿಸುವವರು ಅಥವಾ ಹಗುರವಾಗಿ ಮಾತನಾಡುವವರು ಒಮ್ಮೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ನೋಡಲಿ. ಅಲ್ಲಿ ಸಾಯುತ್ತಿರುವ ರೋಗಿಗಳ ಸ್ಥಿತಿ ನೋಡಿದರೆ ನಿಮ್ಮ ಕಣ್ಣಲ್ಲಿ ನೀರಲ್ಲ, ರಕ್ತವೇ ಬರುತ್ತದೆ. ಪಾನ್ ಮಸಾಲಾದಲ್ಲಿ ನಿಕೋಟಿನ್ ಮಿಕ್ಸ್ ಮಾಡಿ ಜನರ ಜೀವದ ಜೊತೆ ಚೆಲ್ಲಾಟವಾಡುವುದನ್ನು ಸರ್ಕಾರ ಸಹಿಸುವುದಿಲ್ಲ. ಅಂತಹ ಅಕ್ರಮ ಉತ್ಪನ್ನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.













































