ಪುತ್ತೂರು: ದರ್ಭೆಯಲ್ಲಿ ನಡೆದ ಗಲಾಟೆ ಪ್ರಕರಣವನ್ನು ಕೋಮು ಬಣ್ಣ ನೀಡುವ ಪ್ರಯತ್ನ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪ್ರಕರಣದ ತನಿಖೆಯನ್ನು ಸಂಪೂರ್ಣವಾಗಿ ಸಾಕ್ಷ್ಯಾಧಾರಗಳು ಹಾಗೂ ಕಾನೂನು ಪ್ರಕಾರ ಪಾರದರ್ಶಕವಾಗಿ ನಡೆಸಲಾಗುವುದು. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮನವಿ ಮಾಡಿದ್ದಾರೆ.
ದರ್ಭೆಯ ಅಂಗಡಿಯೊಂದರಲ್ಲಿ ಲ್ಯಾಮಿನೇಷನ್ ಯಂತ್ರದಲ್ಲಾದ ತಾಂತ್ರಿಕ ದೋಷದಿಂದ ದಾಖಲೆಯೊಂದು ಹಾನಿಗೊಳಗಾದ ಘಟನೆ ಬಳಿಕ ವಿವಾದ ಉಂಟಾಗಿದೆ. ಆರಂಭದಲ್ಲಿಯೇ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬಹುದಾಗಿತ್ತು. ಅಗತ್ಯವಿದ್ದಲ್ಲಿ ಪೊಲೀಸ್ ಠಾಣೆ ಅಥವಾ ಸೂಕ್ತ ಕಾನೂನು, ಗ್ರಾಹಕ ವೇದಿಕೆಯನ್ನು ಸಂಪರ್ಕಿಸುವುದು ಸೂಕ್ತ ಕ್ರಮವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಹಕರು ಅಂಗಡಿಯ ಕೆಲಸಗಾರನೊಂದಿಗೆ ಆಕ್ರೋಶದಿಂದ ವರ್ತಿಸಿರುವುದು ಹಾಗೂ ಅಂಗಡಿ ಮಾಲೀಕರಾದ ಅಂಜನಾ ಪೈ ಅವರು ಗಲಾಟೆಯಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಪರಿಶೀಲಿಸಲಾಗುತ್ತಿದೆ. ಈ ವೇಳೆ ಸುದರ್ಶನ್ ಪೈ ಎಂಬಾತ ಮಧ್ಯಪ್ರವೇಶಿಸಿ, ಘಟನೆಯನ್ನು ಚಿತ್ರೀಕರಿಸಲು ಯತ್ನಿಸುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವುದು ಕಂಡುಬಂದಿದೆ. ಲಭ್ಯವಿರುವ ವೀಡಿಯೊ ದೃಶ್ಯಾವಳಿಗಳು ಪ್ರಕರಣದ ತನಿಖೆಗೆ ಪ್ರಮುಖ ಸಾಕ್ಷ್ಯಾಧಾರಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದರ್ಶನ್ ಪೈ ಅವರನ್ನು ಪೊಲೀಸರು ವಶಕ್ಕೆ ಪಡೆದ ಬಳಿಕವೂ ಕೆಲವರು ಅತಿರೇಕದ ವರ್ತನೆ ತೋರಿದ್ದಾರೆ. ಈ ಪೈಕಿ ನೌಶಾದ್ ಎಂಬಾತ ಪೊಲೀಸ್ ವಾಹನದೊಳಗೆ ಇಣುಕಿ ಕೃತ್ಯವೆಸಗಿರುವುದು ಕಂಡುಬಂದಿದೆ. ಆ ಸಂದರ್ಭದಲ್ಲಿ ವಾಹನದಲ್ಲಿದ್ದ ಸುದರ್ಶನ್ ಪೈ ಅವರ ತಂದೆಯ ವಿಚಾರಣೆ ಸೇರಿದಂತೆ ಲಭ್ಯವಿರುವ ಇತರ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುದರ್ಶನ್ ಪೈ ವಿರುದ್ಧ ಕೊಲೆ ಯತ್ನ ಹಾಗೂ ಮಾದಕವಸ್ತು ದಂಧೆಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಹಿಂದಿನ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನೌಶಾದ್ ವಿರುದ್ಧವೂ ರಸ್ತೆ ಜಗಳಕ್ಕೆ ಸಂಬಂಧಿಸಿದ ಹಲ್ಲೆ ಪ್ರಕರಣವಿದ್ದು, ಸದಾಶಿವ ಪೈ ವಿರುದ್ಧವೂ ರಸ್ತೆ ಜಗಳದ ಹಳೆಯ ಪ್ರಕರಣವಿದೆ. ಗಲಾಟೆ ಸಂದರ್ಭದಲ್ಲಿ ಅಂಗಡಿಯ ಮುಂದೆ ಸೇರಿದ್ದ ಇತರ ಇಬ್ಬರ ಮೇಲೆಯೂ ತಲಾ ಒಂದೊಂದು ಹಳೆಯ ಪ್ರಕರಣಗಳಿವೆ ಎಂದು ಪೊಲೀಸರು ಹೇಳಿದ್ದಾರೆ.ಒತ್ತಡಕ್ಕೆ ಮಣಿದು ಬಂಧನವಿಲ್ಲನೌಶಾದ್, ನಿಯಾಜ್, ಅಂಜನಾ ಪೈ, ಸದಾಶಿವ ಪೈ ಸೇರಿದಂತೆ ಇತರರ ಬಂಧನಕ್ಕೆ ಒತ್ತಾಯಿಸಲಾಗುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಯಾವುದೇ ವ್ಯಕ್ತಿ ಅಪರಾಧ ಎಸಗಿರುವುದು ದೃಢಪಟ್ಟಲ್ಲಿ ಆತನ ಧರ್ಮ, ಸಮುದಾಯ ಅಥವಾ ಸಾಮಾಜಿಕ ಗುರುತನ್ನು ಪರಿಗಣಿಸದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.ಬಂಧನ ಸೇರಿದಂತೆ ಯಾವುದೇ ಕಾನೂನು ಕ್ರಮವು ಘಟನೆಯ ಸತ್ಯಾಸತ್ಯತೆ, ಲಭ್ಯವಿರುವ ಸಾಕ್ಷ್ಯಾಧಾರಗಳು ಹಾಗೂ ಕಾನೂನುಬದ್ಧ ಅಗತ್ಯತೆಗಳನ್ನು ಆಧರಿಸಿರುತ್ತದೆ. ಸಾರ್ವಜನಿಕ ಅಥವಾ ಕೋಮು ಒತ್ತಡಕ್ಕೆ ಮಣಿದು ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣದ ತನಿಖೆಯ ಕುರಿತು ಯಾರಿಗಾದರೂ ಸಂದೇಹಗಳಿದ್ದರೆ, ತಮ್ಮಲ್ಲಿರುವ ಸತ್ಯಾಂಶ ಹಾಗೂ ಸಾಕ್ಷ್ಯಾಧಾರಗಳೊಂದಿಗೆ ಪೊಲೀಸರನ್ನು ಸಂಪರ್ಕಿಸಿ ಚರ್ಚಿಸಲು ಅವಕಾಶವಿದೆ. ಗೊಂದಲ ನಿವಾರಣೆಗೆ ಅಗತ್ಯವಿರುವ ಎಲ್ಲ ಸತ್ಯಾಂಶ ಹಾಗೂ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲು ಪೊಲೀಸರು ಸಿದ್ಧವಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆಯನ್ನು ಕೋಮು ವೈಷಮ್ಯದ ದೃಷ್ಟಿಕೋನದಲ್ಲಿ ಬಿಂಬಿಸಿ ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿರುವಂತೆ ಕಂಡುಬರುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರಚೋದನಕಾರಿ ಅಥವಾ ದಾರಿತಪ್ಪಿಸುವ ಹೇಳಿಕೆಗಳನ್ನು ಪರಿಶೀಲಿಸದೆ ನಂಬಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.ಇಂದು ಶಾಂತಿ ಸಭೆಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆ.23ರಂದು ಸಂಜೆ 5 ಗಂಟೆಗೆ ಪುತ್ತೂರು ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿದೆ. ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ತಮ್ಮ ವಿನಂತಿ ಹಾಗೂ ಕಳವಳಗಳನ್ನು ಶಾಂತಿಯುತ ಮತ್ತು ರಚನಾತ್ಮಕ ರೀತಿಯಲ್ಲಿ ವ್ಯಕ್ತಪಡಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.













































