ನಕಲಿ ಔಷಧ, ಕಳಪೆ ಆಹಾರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ತಾಲೂಕು ಮಟ್ಟದಲ್ಲಿ ‘ವಾಚ್ ಟೀಮ್’ ರಚನೆಗೆ ಸರ್ಕಾರದ ಚಿಂತನೆ

Picture of Savistara

Savistara

Bureau Report

ರಾಜ್ಯದಲ್ಲಿ ನಕಲಿ ಔಷಧ ಜಾಲ ಹಾಗೂ ಹೋಟೆಲ್‌ಗಳು ಮತ್ತು ರಸ್ತೆಬದಿಯ ತಿನಿಸು ಕೇಂದ್ರಗಳಲ್ಲಿ ಕಳಪೆ, ಅಸ್ವಚ್ಛ ಆಹಾರ ಮಾರಾಟಕ್ಕೆ ಕಡಿವಾಣ ಹಾಕಲು ಪ್ರತಿಯೊಂದು ತಾಲೂಕು ಮಟ್ಟದಲ್ಲೂ ನಿವೃತ್ತ ಹಿರಿಯ ನಾಗರಿಕರನ್ನೊಳಗೊಂಡ ವಿಶೇಷ ‘ವಾಚ್ ಟೀಮ್’ ರಚಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ​ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ ಅವರು ಈ ಮಾಹಿತಿ ನೀಡಿದರು. ​

ಏನಿದು ತಾಲೂಕು ಮಟ್ಟದ ‘ವಾಚ್ ಟೀಮ್’?: 60 ವರ್ಷ ಮೇಲ್ಪಟ್ಟ ನಿವೃತ್ತ ವೈದ್ಯರು, ಆಹಾರ ಮತ್ತು ಪೌಷ್ಟಿಕಾಂಶ ತಜ್ಞರು, ಪ್ರಾಧ್ಯಾಪಕರು ಹಾಗೂ ಸಾಮಾಜಿಕ ಕಾಳಜಿಯುಳ್ಳ ಹಿರಿಯ ನಾಗರಿಕರನ್ನು ಗುರುತಿಸಿ ತಾಲೂಕುವಾರು ‘ವಾಚ್ ಟೀಮ್’ ರಚಿಸಲಾಗುತ್ತದೆ. ಈ ಸಮಿತಿಗೆ ಹೋಟೆಲ್, ಬೇಕರಿ ಹಾಗೂ ಔಷಧ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸುವ ಮತ್ತು ಸ್ವಚ್ಛತೆ ಹಾಗೂ ಗುಣಮಟ್ಟದ ಕುರಿತು ಸರ್ಕಾರಕ್ಕೆ ವರದಿ ನೀಡುವ ಅಧಿಕಾರ ನೀಡಲು ಕಾನೂನು ಚೌಕಟ್ಟಿನಲ್ಲಿ ನಿಯಮ ರೂಪಿಸಲಾಗುತ್ತಿದೆ.​

ಕ್ಯೂಆರ್ ಕೋಡ್ (QR Code) ಮೂಲಕ ದೂರು ವ್ಯವಸ್ಥೆ: ಕಳಪೆ ಆಹಾರ ಅಥವಾ ಅವಧಿ ಮೀರಿದ ಔಷಧಗಳ ಬಗ್ಗೆ ದೂರು ನೀಡಲು ಸಾರ್ವಜನಿಕ ಸ್ಥಳಗಳು ಹಾಗೂ ಮಳಿಗೆಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಗ್ರಾಹಕರು ಸ್ಕ್ಯಾನ್ ಮಾಡಿ ದೂರು ಸಲ್ಲಿಸಿದ ತಕ್ಷಣ, ಅದು ನೇರವಾಗಿ ಆಹಾರ ಸುರಕ್ಷತೆ ಅಥವಾ ಔಷಧ ನಿಯಂತ್ರಣ ಇಲಾಖೆಗೆ ತಲುಪುತ್ತದೆ. ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕಾಗುತ್ತದೆ. ಕಳೆದ ಎರಡೇ ದಿನಗಳಲ್ಲಿ 400ಕ್ಕೂ ಅಧಿಕ ದೂರುಗಳು ದಾಖಲಾಗಿವೆ.​

ನಕಲಿ ಔಷಧ ಜಾಲದ ವಿರುದ್ಧ ತನಿಖೆ: ಬೇರೆ ರಾಜ್ಯಗಳಿಂದ ಅನಧಿಕೃತವಾಗಿ ನಕಲಿ ಔಷಧಗಳನ್ನು ತಂದು, ದೊಡ್ಡ ಬ್ರ್ಯಾಂಡ್‌ಗಳ ಲೇಬಲ್ ಅಂಟಿಸಿ ಮಾರಾಟ ಮಾಡುವ ಮಾಫಿಯಾದ ಮೂಲವನ್ನು ಬೇರುಸಹಿತ ಕಿತ್ತೊಗೆಯಲು ಪೊಲೀಸ್ ಹಾಗೂ ಡ್ರಗ್ಸ್ ಇಲಾಖೆಯನ್ನೊಳಗೊಂಡ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ದುಬೈನಲ್ಲಿರುವ ಕಿಂಗ್‌ಪಿನ್‌ಗಳ ಪತ್ತೆಗೂ ಬಲೆ ಬೀಸಲಾಗಿದೆ.​

ಕಳಪೆ ಪನ್ನೀರ್ ಹಾಗೂ ಮರುಬಳಕೆಯ ಎಣ್ಣೆಗೆ ತಡೆ: ಕೃತಕ ಪನೀರ್ (ಪಾಮಾಯಿಲ್ ಬೆರೆಸಿದ ಪನೀರ್) ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಸ್ಟಾರ್ ಹೋಟೆಲ್‌ಗಳಲ್ಲಿ ಬಳಸಿದ ಎಣ್ಣೆಯನ್ನು ರಸ್ತೆಬದಿಯ ಅಂಗಡಿಗಳಿಗೆ ಮಾರಾಟ ಮಾಡುವುದನ್ನು ತಡೆಯಲು ನಿಯಮ ರೂಪಿಸಲಾಗುತ್ತಿದ್ದು, ಅದನ್ನು ಬಯೋ-ಡೀಸೆಲ್ ತಯಾರಿಕೆಗೆ ಬಳಸುವ ಕಂಪನಿಗಳಿಗೆ ನೀಡಲು ಪ್ರೋತ್ಸಾಹಿಸಲಾಗುವುದು.​

ಆಹಾರ ಉತ್ಪನ್ನಗಳಲ್ಲಿ ನಿಖರ ವಿವರ ಪ್ರದರ್ಶನ: ಫ್ರೋಜನ್ ಚಿಕನ್, ಬನ್‌ಗಳನ್ನು ಎಷ್ಟು ಸಮಯ ಶೀತಲೀಕರಣದಲ್ಲಿ ಇಡಲಾಗಿತ್ತು ಎಂಬ ವಿವರವನ್ನು ಹೋಟೆಲ್‌ಗಳು ಬೋರ್ಡ್‌ನಲ್ಲಿ ನಮೂದಿಸಬೇಕು. ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ನಿಗದಿಗಿಂತ ಹೆಚ್ಚು ಸಕ್ಕರೆ ಬಳಸುವುದನ್ನು ತಡೆಯಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.​

ಜನೌಷಧಿ ಕೇಂದ್ರಗಳ ತಪಾಸಣೆ: ಜನೌಷಧಿ ಕೇಂದ್ರಗಳಲ್ಲಿ ಕೊರತೆಯ ನೆಪವೊಡ್ಡಿ ಖಾಸಗಿ ಕಂಪನಿಗಳ ಜೆನರಿಕ್ ಔಷಧಗಳನ್ನು ಹೆಚ್ಚಿನ ಕಮಿಷನ್‌ಗಾಗಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಸಂಬಂಧ ಗುಣಮಟ್ಟ ಹಾಗೂ ಪೂರೈಕೆ ವ್ಯವಸ್ಥೆಯನ್ನು ಇಲಾಖೆ ತಪಾಸಣೆ ನಡೆಸುತ್ತಿದೆ.​

ಶಿಕ್ಷಕರ ನೇಮಕಾತಿ: ಉರ್ದು ಮತ್ತು ಹಿಂದಿ ಭಾಷಾ ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ 800 ಉರ್ದು ಹಾಗೂ 200 ಹಿಂದಿ ಶಿಕ್ಷಕರ ಹುದ್ದೆಗಳ ಹೆಚ್ಚುವರಿ ನೇಮಕಾತಿಗೆ ಕ್ರಮ ವಹಿಸಲಾಗಿದೆ.

[t4b-ticker]
error: Content is protected !!