ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ ಪ್ರಕರಣದ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಜಟಾಪಟಿ ಮುಂದುವರೆದಿದೆ. ಭಾನುವಾರ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ‘ಕಾನೂನು ಮೀರಿ ನಾನು ಏನೂ ಮಾಡಿಲ್ಲ’ ಎಂದರು. ಪ್ರಿಯಾಂಕ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ‘ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವಿದ್ದರೂ, ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಿ ಎಂದು ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಗೆ ಪತ್ರ ಬರೆದ್ದಿದ್ದು ಏಕೆ’ ಎಂದು ತಿರುಗೇಟು ನೀಡಿದರು.
ಕಾನೂನು ಮೀರಿ ಆದೇಶ ನೀಡಿಲ್ಲ: ಎಚ್‌ಡಿಕೆ
“ಪ್ರಿಯಾಂಕ್ ಖರ್ಗೆ ನನ್ನ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಆರೋಪ ಇರುವುದು ಅವರ ಮೇಲೆ ನನ್ನ ಮೇಲಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಕಾನೂನು ಮೀರಿ ಆದೇಶ ನೀಡಿಲ್ಲ. 2006ರಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೆ. ನಮ್ಮ ಸಂಬಂಧಿಕರನ್ನೋ ಆಪ್ತರನ್ನೋ ತಂದು ಆ ಕುರ್ಚಿಯಲ್ಲಿ ಕೂರಿಸಿರಲಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಯಾವ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.’ರಾಜ್ಯ ಸರ್ಕಾರವು ಯೋಗ್ಯತೆ ಇಲ್ಲದವರಿಂದ ಪರೀಕ್ಷೆ ಬರೆಸಿ ಸರ್ಕಾರಿ ಕೆಲಸ ಕೊಟ್ಟಿದೆ. ನೇಮಕಾತಿ ಪರೀಕ್ಷೆಗಳಲ್ಲಿ ಶೇ 95ಕ್ಕಿಂತಲೂ ಹೆಚ್ಚು ಅಂಕಪಡೆದವರು ಆಯ್ಕೆ ಪಟ್ಟಿಯ ಕೊನೆಯಲ್ಲಿದ್ದಾರೆ. ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳಿಗೆ ರಾಜ್ಯದಲ್ಲಿ ಆಗಿರುವ ಈ ಅನ್ಯಾಯದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವಾಗ ಮಾತನಾಡುತ್ತಾರೆ? ಬೆಂಗಳೂರಿಗೆ ಬಂದು ಈ ವಿದ್ಯಾರ್ಥಿಗಳ ಜತೆಗೆ ಯಾವಾಗ ಸಂವಾದ ನಡೆಸುತ್ತಾರೆ?’ ಎಂದು ಪ್ರಶ್ನಿಸಿದರು. ‘ನಿಮ್ಮ ಸರ್ಕಾರದ ಅವಧಿಯಲ್ಲಿ ಕೆಪಿಎಸ್‌ಸಿಯ ಎಷ್ಟೆಲ್ಲಾ ಪರೀಕ್ಷಾ ಅಕ್ರಮಗಳು ನಡೆದಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ವಿಧಾನಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ನೀವು ಈ ಹಿಂದೆ ಸಚಿವರಾಗಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಇಇ ಹುದ್ದೆಗಳ ನೇಮಕಾತಿ ಅಕ್ರಮವೇ ಆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ’ ಎಂದು ಲೇವಡಿ ಮಾಡಿದರು. ‘ಹೈಕೋರ್ಟ್ನಲ್ಲಿ ಪ್ರಕರಣವಿದ್ದರೂ ಒಎಂಆರ್ ಶೀಟ್ ತಿರುಚಿದ್ದು ಸಾಬೀತಾಗಿದ್ದರೂ ಎಇಇಗಳ ನೇಮಕಾತಿ ಆದೇಶ ಏಕೆ ನೀಡಿದಿರಿ? ಕೆಪಿಎಸ್‌ಸಿಯನ್ನು ರದ್ದುಪಡಿಸುತ್ತೇನೆ ಎಂದೆಲ್ಲಾ ಈಗ ಮಾತನಾಡುವವರು ಅಂದು ನೇಮಕಾತಿಯನ್ನು ಏಕೆ ರದ್ದುಪಡಿಸಲಿಲ್ಲ. ಪ್ರತಿದಿನವೂ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ನೀವು ನಿಮ್ಮ ಇಲಾಖೆಯಲ್ಲಿ ಹೆಗ್ಗಣ ಸತ್ತುಬಿದ್ದಿದ್ದರೂ ಸುಮ್ಮನ್ನಿದ್ದೀರಿ. ಈಗ ಅಧಿಕಾರ ಸಿಕ್ಕಿದೆಯಲ್ಲಾ ಯಾವ ಸೋಪು ಮತ್ತು ಸರ್ಫ್ ಹಾಕಿ ಕೆಪಿಎಸ್‌ಸಿಯನ್ನು ತೊಳೆಯುತ್ತೀರಾ ಎಂಬುದನ್ನು ನೋಡುತ್ತೇನೆ’ ಎಂದು ಸವಾಲು ಹಾಕಿದರು.
ಗಂಗ್ವಾರ್‌ನ ದೆಹಲಿಗೆ ಕಳುಹಿಸಿದವರು ಯಾರು?’
‘ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಇ.ಡಿ ದಾಳಿ ಮಾಡುತ್ತಿದ್ದಂತೆಯೇ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಫ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ದೆಹಲಿಗೆ ಕಳುಹಿಸಿದವರು ಯಾರು? ಅಲ್ಲಿ ಅವರು ಯಾವ ಮಹಿಳೆಯನ್ನು ಭೇಟಿ ಮಾಡಿದ್ದರು ಎಂಬುದನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಬೇಕು’ ಎಂದು ಕುಮಾರಸ್ವಾಮಿ ಆಗ್ರಹಿಸಿದರು. ‘ಗಂಗ್ವಾರ್ ಅವರನ್ನು ದೆಹಲಿಯಿಂದ ಚೆನ್ನೈಗೆ ಕರೆದುಕೊಂಡು ಬಂದು ಬಿಟ್ಟು ಹೋದವರು ಯಾರು? ಚೆನ್ನೈನಿಂದ ಬಂದ ಆ ವ್ಯಕ್ತಿಯನ್ನು ದೇವನಹಳ್ಳಿ ಬಳಿಯ ರೆಸಾರ್ಟ್‌ನಲ್ಲಿ ಇರಿಸಿದವರು ಯಾರು? ರಾಜ್ಯದ ಪೊಲೀಸರಿಗೆ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇಲ್ಲವೇ’ ಎಂದರು.
ದೇವೇಗೌಡರು ಶಿಫಾರಸು ಮಾಡಿದ್ದೇಕೆ: ಪ್ರಿಯಾಂಕ್
‘2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಆಯ್ಕೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಹೈಕೋರ್ಟ್ ನೇಮಕಾತಿಯನ್ನು ರದ್ದುಗೊಳಿಸಿ ತೀರ್ಪು ನೀಡಿತ್ತು. ರಾಜ್ಯ ಸರ್ಕಾರದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಆದರೂ 326 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸಿ ಎಂದು ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು 2021ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದದ್ದು ಏಕೆ’ ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.
“ಆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಆಗಿದ್ದರೂ ನೀವೂ ಮತ್ತು ನಿಮ್ಮ ತಂದೆ ದೇವೇಗೌಡರು ಅಕ್ರಮಕ್ಕೆ ಕ್ಲೀನ್‌ಚಿಟ್ ನೀಡಿದ್ದು ಏಕೆ? ಅಂತಹ ಶಿಫಾರಸು ಲಾಬಿ ಮಾಡುವುದರ ಹಿಂದೆ ನಿಮಗಿದ್ದ ಹಿತಾಸಕ್ತಿ ಯಾವುದು? ಕುಮಾರಸ್ವಾಮಿ ಅವರೇ ನೀವೊಬ್ಬರು ಕೇಂದ್ರ ಸಚಿವ. ತೂಕವಿಲ್ಲದ ಮಾತುಗಳನ್ನಾಡಿ ತೂಕ ಕಳೆದುಕೊಳ್ಳಬೇಡಿ. ಕೆಪಿಎಸ್‌ಸಿ ಅಕ್ರಮಗಳ ವಿಷಯವಾಗಿ ನಿಮ್ಮ ವಿರುದ್ಧದ ಆರೋಪಗಳಿಗೆ ತಾರ್ಕಿಕ ಉತ್ತರ ನೀಡುವ ಬದಲಿಗೆ ಪಲಾಯನದ ಸುದ್ದಿಗೋಷ್ಠಿ ನಡೆಸಿದ್ದೀರಿ’ ಎಂದು ತಿವಿದಿದ್ದಾರೆ.’
ನಿಮ್ಮ ಸಂಬಂಧಿಕರ ನೇಮಕಾತಿಯನ್ನು ರದ್ದುಪಡಿಸಿದ್ದರೂ ತಡೆಯಾಜ್ಞೆ ತಂದು ಐಎಎಸ್‌ಗೆ ಬಡ್ತಿ ಕೊಡಿಸಿದ್ದು ಯಾರ ಚಿತಾವಣೆಯಿಂದ ಎಂಬುದು ಜಗತ್ತಿಗೇ ಗೊತ್ತಿದೆ. ಅಕ್ರಮ ಎಸಗಿ ಜೈಲಿಗೆ ಹೋಗಿದ್ದ ಕೆಪಿಎಸ್‌ಸಿ ಅಧ್ಯಕ್ಷರನ್ನು ಪರಪ್ಪನ ಅಗ್ರಹಾರದಲ್ಲಿ ಭೇಟಿ ಮಾಡಲು ನೀವು ಹೋಗಿದ್ದು ಯಾರಿಗೂ ಗೊತ್ತಿಲ್ಲ ಎಂದುಕೊಂಡಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ.
‘ಜೈಲಿಗೆ ಹೋಗಿ ಆರೋಪಿ ಒಬ್ಬರನ್ನು ಭೇಟಿಯಾಗುವಂತಹ ಅನಿವಾರ್ಯ ನಿಮಗೇನಿತ್ತು? ತನಿಖೆಯಲ್ಲಿ ನಿಮ್ಮ ಹೆಸರು ಬರಬಾರದು ಎಂದು ಮನವಿ ಮಾಡುವುದಕ್ಕಾ ಅಥವಾ ಬೆದರಿಕೆ ಹಾಕುವುದಕ್ಕಾ? ಕೆಪಿಎಸ್‌ಸಿ ಅಕ್ರಮದ ಜಾತಕ ಜಾಲಾಡಿದರೆ ಎಲ್ಲೆಲ್ಲೂ ನಿಮ್ಮ ಕುಂಡಲಿ ಮತ್ತು ನಕ್ಷತ್ರಗಳೇ ಕಾಣಸಿಗುತ್ತವೆ’ ಎಂದಿದ್ದಾರೆ..
ಪತ್ರ ಬಿಡುಗಡೆ…
ಎಚ್.ಡಿ. ದೇವೇಗೌಡ ಅವರು 2021ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಶಿಫಾರಸು ಪತ್ರ ಮತ್ತು ಅದರ ಆಧಾರದಲ್ಲಿ ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಅವರ ಟಿಪ್ಪಣಿಯನ್ನು ಪ್ರಿಯಾಂಕ್ ‘ಎಕ್ಸ್’ ಪೋಸ್ಟ್‌ನಲ್ಲಿ ಲಗತ್ತಿಸಿದ್ದಾರೆ. ದೇವೇಗೌಡ ಅವರ ಶಿಫಾರಸು ಪತ್ರದ ಮೇಲೆ ಬಸವರಾಜ ಬೊಮ್ಮಾಯಿ ಅವರು ‘ಸನ್ಮಾನ್ಯ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರ ಟಿಪ್ಪಣಿ ಆಧರಿಸಿ ಕ್ರಮ ತೆಗೆದುಕೊಳ್ಳಲು ಕಡತ ಮಂಡಿಸಿ’ ಎಂದು ಬರೆದು ಸಹಿ ಮಾಡಿದ್ದಾರೆ. ಅದರ ಆಧಾರದಲ್ಲಿ ಕಡತ ಮಂಡಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಟಿಪ್ಪಣಿ ಕಳುಹಿಸಿದ್ದಾರೆ.
















































