ಪುತ್ತೂರು, ಸೆ.22: ಹಿಂದೂ ಜಾಗರಣ ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲ (27) ಅವರ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ ತಲಾ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇಬ್ಬರು ಆರೋಪಗಳಿಂದ ಸಂಗ್ರಹಿಸಿದ ದಂಡ ಮೊತ್ತದಲ್ಲಿ ರೂ 5 ಲಕ್ಷ 90 ಸಾವಿರ ವನ್ನು ಕಾರ್ತಿಕ್ ಮೆರ್ಲಾ ತಾಯಿ ಹೇಮಾವತಿಯವರಿಗೆ ನೀಡುವಂತೆನ್ಯಾಯಾಲಯ ಸೂಚಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಉಳ್ಳಾಲದ ಪ್ರೀತೇಶ್ ಶೆಟ್ಟಿ ಹಾಗೂ ಸಂಪ್ಯ ಪೊಲೀಸ್ ಠಾಣೆಯ ಹಿಂಭಾಗದ ನಿವಾಸಿ ಕಿರಣ್ ರೈ ಶಿಕ್ಷೆಗೊಳಗಾದವರು. ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು ಮಂಗಳವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.
ಮತ್ತೊಬ್ಬ ಆರೋಪಿ ಮಂಗಳೂರು ಅತ್ತಾವರದ ಸ್ಟೀವನ್ ಮೊಂತೆರೋ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ.
ಪ್ರಕರಣದಲ್ಲಿ ಕಿರಣ್ ರೈ ಅವರ ಸಹೋದರ ಚರಣ್ ರಾಜ್ ರೈ ಕೂಡ ಆರೋಪಿಯಾಗಿದ್ದು, ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಜಾಮೀನಿನಲ್ಲಿದ್ದ ಅವರು 2022ರಲ್ಲಿ ಹತ್ಯೆಯಾಗಿದ್ದರು. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಜಯಂತಿ ಸತೀಶ್ ಭಟ್ ವಾದಿಸಿದ್ದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ನಿವೃತ್ತ ಮ್ಯಾನೇಜರ್, ಆರ್ಯಾಪು ಮೇರ್ಲ ನಿವಾಸಿ ರಮೇಶ್ ಸುವರ್ಣ ಅವರ ಪುತ್ರ ಕಾರ್ತಿಕ್ ಅವರನ್ನು 2019ರ ಸೆ.3ರಂದು ರಾತ್ರಿ ಸಂಪ್ಯ ಪೊಲೀಸ್ ಠಾಣೆ ಮುಂಭಾಗದ ಗಣೇಶೋತ್ಸವ ಪೆಂಡಾಲ್‌ನಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು.…
ಗಣೇಶೋತ್ಸವದ ಶೋಭಾಯಾತ್ರೆ ಮುಗಿದ ಬಳಿಕ ಪೆಂಡಾಲ್‌ನಲ್ಲಿ ಯಕ್ಷಗಾನ ನಡೆಯುತ್ತಿತ್ತು. ಯಕ್ಷಗಾನ ವೀಕ್ಷಿಸುತ್ತಿದ್ದ ಕಾರ್ತಿಕ್ ಅವರೊಂದಿಗೆ ಆರೋಪಿಗಳಾದ ಚರಣ್ ರಾಜ್, ಕಿರಣ್ ರೈ ಮತ್ತು ಪ್ರೀತೇಶ್ ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಚರಣ್ ರಾಜ್ ಮತ್ತು ಕಿರಣ್ ಅವರು ಕಾರ್ತಿಕ್ ಅವರ ಕೈ ಹಿಡಿದಿದ್ದು. ಪ್ರೀತೇಶ್ ಹರಿತವಾದ ಆಯುಧದಿಂದ ಎದೆ ಕೆಳಭಾಗಕ್ಕೆ ಇರಿದಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. ಗಾಯಗೊಂಡ ಕಾರ್ತಿಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಮೃತಪಟ್ಟಿದ್ದರು.2018ರಲ್ಲಿ ನಡೆದಿದ್ದ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆಯ ಪೂರ್ವದ್ವೇಷವೇ ಕೊಲೆಗೆ ಕಾರಣವೆಂದು ತನಿಖೆಯಲ್ಲಿ ಆರೋಪಿಸಲಾಗಿತ್ತು. ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.
ಮೂರು ವರ್ಷ ಬಳಿಕ ಪ್ರತೀಕಾರದ ಕೊಲೆ
ಕಾರ್ತಿಕ್ ಕೊಲೆ ಪ್ರಕರಣದ ಪ್ರಮುಖ ಬೆಳವಣಿಗೆಯಾಗಿ, ಪ್ರಕರಣದ ಆರೋಪಿ ಚರಣ್ ರಾಜ್ ರೈ ಅವರು 2022ರ ಜೂ.4ರಂದು ಪೆರ್ಲಂಪಾಡಿಯಲ್ಲಿ ತಲಾರ್‌ನಿಂದ ಕಡಿದು ಹತ್ಯೆಗೀಡಾಗಿದ್ದರು. ಕಾರ್ತಿಕ್ ಕೊಲೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆದಿತ್ತು ಎಂಬ ಮಾತು ಆ ಸಂದರ್ಭದಲ್ಲಿ ಕೇಳಿಬಂದಿತ್ತು.
















































