ಐವರ್ನಾಡು: ಕೃಷಿಕ ಹಿತರಕ್ಷಣಾ ಸಮಿತಿ ಐವರ್ನಾಡು ವತಿಯಿಂದ ಕಾಡು ಪ್ರಾಣಿಗಳ ಉಪಟಳ ತಡೆಗಟ್ಟುವಿಕೆ ಮತ್ತು ಪರಿಹಾರೋಪಾಯಗಳ ಕುರಿತು ಮಾಹಿತಿ ಕಾರ್ಯಾಗಾರವು ಸೆ.22 ರಂದು ಗ್ರಾಮ ಪಂಚಾಯತ್ ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು. ಸುಳ್ಯ ತಹಶೀಲ್ದಾರ್ ಮಂಜುಳಾ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಸಂಚಾಲಕ ಕೃಷ್ಣ ಪ್ರಸಾದ್ ಮಡ್ತಿಲ, ಐವರ್ನಾಡು ಹಾಗೂ ಸುತ್ತಮುತ್ತಲಿನ ಪರಿಸರದ ಕೃಷಿಕರು ಎದುರಿಸುತ್ತಿರುವ ಕಾಡಾನೆ, ಕಾಡುಹಂದಿ ಮತ್ತು ಕೋತಿಗಳ ಹಾವಳಿ ಹಾಗೂ ಬೆಳೆ ಹಾನಿಯ ಬಗ್ಗೆ ವಿವರಿಸಿದರು. ಇದೇ ವೇಳೆ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾಗಕ್ಕೆ ಸಂಬಂಧಿಸಿದ ಕಂದಾಯ ದಾಖಲೆಗಳನ್ನು ದೇವಸ್ಥಾನದ ಹೆಸರಿಗೆ ಬದಲಾಯಿಸುವುದು, ಕೆ.ಎಫ್.ಡಿ.ಸಿ ವ್ಯಾಪ್ತಿಯಲ್ಲಿ ಗಿಡಗಂಟಿ ತೆರವು, ಗಡಿಭಾಗದಲ್ಲಿ ಬೆಳಕಿನ ವ್ಯವಸ್ಥೆ ಹಾಗೂ ಕೋವಿ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಮಂಜುಳಾ, “ದೇವಸ್ಥಾನದ ಜಾಗದ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಜಂಟಿ ಸರ್ವೆ ನಡೆದ ಬಳಿಕವಷ್ಟೇ ಹೆಸರಿಗೆ ವರ್ಗಾವಣೆಯಾಗಲು ಸಾಧ್ಯ” ಎಂದು ಸ್ಪಷ್ಟಪಡಿಸಿದರು. ಬಳಿಕ ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಅವರು ಮಾತನಾಡಿ, ಆನೆಗಳ ನಿಯಂತ್ರಣ, ಸೋಲಾರ್ ಬೇಲಿ, ಆನೆ ಕಂದಕ, ಟೆಂಪರರಿ ಬ್ಯಾರಿಕೇಡ್ ಹಾಗೂ ಎಲಿಫೆಂಟ್ ಟಾಸ್ಕ್ ಫೋರ್ಸ್ ಕುರಿತು ಮಾಹಿತಿ ನೀಡಿ, ತೋಟಗಳಿಗೆ ನೀರುಾಯಿಸುವಾಗ ಪ್ರಖರ ಬೆಳಕು ಬಳಸುವಂತೆ ಸೂಚಿಸಿದರು.ಸಂವಾದ ಕಾರ್ಯಕ್ರಮದಲ್ಲಿ ರೈತರು ಸೋಲಾರ್ ಬೇಲಿ ಧನಸಹಾಯ ಮತ್ತು ಬೆಳೆಹಾನಿ ಪರಿಹಾರ ಹೆಚ್ಚಿಸುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿಗಳು, ಪರಿಹಾರ ಹೆಚ್ಚಳದ ಕುರಿತು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾಪ ಕಳುಹಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಗ್ರಾಮ ಲೆಕ್ಕಾಧಿಕಾರಿ ಸುಜು, ಗ್ರಾ.ಪಂ ಕಾರ್ಯದರ್ಶಿ ತಿರುಮಲೇಶ್ವರ್, ಸಹಸಂಚಾಲಕರಾದ ಗಣೇಶ್ ಕೊಚ್ಚಿ, ಸಾತ್ವಿಕ್ ಕುದುಂಗು, ನಿವೃತ್ತ ಕಚೇರಿ ಅಧೀಕ್ಷಕ ರಾಮಚಂದ್ರ ಪಲ್ಲತ್ತಡ್ಕ, ನ್ಯಾಯವಾದಿ ಸುಮಾ ಕೆ.ಎಸ್., ಕಿಶನ್ ಜಬಳೆ, ಅಜಿತ್ ಐವರ್ನಾಡು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕೃಷಿಕರು ಭಾಗವಹಿಸಿದ್ದರು.
















































