ದಸರಾ ವಿಚಾರದಲ್ಲಿ ಸುಳ್ಳು ಸುದ್ದಿ ಪ್ರಕಟ: ಕೊಪ್ಪಳದಲ್ಲಿ ಎಫ್ ಐ ಆರ್ ದಾಖಲು

Picture of Savistara

Savistara

Bureau Report

ಕೊಪ್ಪಳ: ಇಲ್ಲಿನ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಯನ್ನು ತಿರಸ್ಕರಿಸಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಕಟ ಮಾಡಿದ ಜನತಾ ನ್ಯೂಸ್ ಡಿಜಿಟಲ್2 ಎನ್ನುವ ಖಾತೆದಾರನ ಮೇಲೆ ಇಲ್ಲಿನ ನಗರ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಸ್ವಾಮೀಜಿಯನ್ನು ದಸರಾ ಉದ್ಘಾಟನೆಗೆ ಖುದ್ದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಹ್ವಾನಿಸಿ ಇದನ್ನು ಸದನದಲ್ಲಿಯೂ ಘೋಷಿಸಿದ್ದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ‘ಸ್ವಾಮೀಜಿ ಆಹ್ವಾನ ತಿರಸ್ಕರಿಸಿದ್ದಾರೆ’ ಎಂದು ಸುದ್ದಿ ಪ್ರಕಟವಾಗಿತ್ತು. ಇದನ್ನು ಮಠದ ಉನ್ನತ ಮೂಲಗಳು ಹಾಗೂ ಸರ್ಕಾರ ಸುಳ್ಳು ಎಂದು ಸ್ಪಷ್ಟವಾಗಿ ಹೇಳಿದೆ.ಕೊಪ್ಪಳ ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ ಡಿ., ಅವರು ದೂರು ನೀಡಿದ್ದು ‘ಇನ್‌ಸ್ಟಾಗ್ರಾಂನಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಸ್ವಾಮೀಜಿ ಇರುವ ಫೋಟೊ ಬಳಿಸಿ ಸುದ್ದಿ ಪ್ರಕಟಿಸಲಾಗಿದೆ’ ಎಂದು ಹೇಳಿದ್ದಾರೆ.’ಕೊಪ್ಪಳದಲ್ಲಿ ನಡೆಯುತ್ತಿರುವ ಬಲ್ಲೋಟ ಕಾರ್ಖಾನೆ ವಿರುದ್ಧದ ಹೋರಾಟಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿಯನ್ನು ಗುರಿಯಾಗಿರಿಸಿಕೊಂಡು ಸೆ. 26ರಂದು ಸಾಮಾಜಿಕ ತಾಣದಲ್ಲಿ ಸುದ್ದಿ ಪ್ರಕಟಿಸಲಾಗಿದೆ. ಈ ಸುಳ್ಳು ಸುದ್ದಿ ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡುತ್ತಿದೆ. ಆದ್ದರಿಂದ ಸುಳ್ಳು ಸುದ್ದಿ ಪ್ರಕಟಿಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ‘ಗವಿಸಿದ್ದೇಶ್ವರ ಸ್ವಾಮೀಜಿಯೇ ದಸರಾ ಉದ್ಘಾಟಿಸಲಿದ್ದು ಇದರಲ್ಲಿ ಯಾವುದೇ ಅನುಮಾನ ಬೇಡ. ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದರು.ಸಾರ್ವಜನಿಕರು ಯಾವುದು ಸುಳ್ಳು ಸುದ್ದಿ, ತಪ್ಪು ಮಾಹಿತಿ ಎಂದು ಅರಿತುಕೊಂಡೇ ಮತ್ತೊಬ್ಬರಿಗೆ ಹಂಚಿಕೊಳ್ಳಬೇಕು. ಇಲ್ಲವಾದರ ಸುಳ್ಳು ಮಾಹಿತಿ ಹಂಚಿಕೊಳ್ಳುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಹೇಳಿದ್ದಾರೆ.

[t4b-ticker]
error: Content is protected !!