ಪುತ್ತೂರು:ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸುಮಾರು ರೂ.6.86 ಕೋಟಿ ಹಣಕಾಸು ಅವ್ಯವಹಾರ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಂಘದ ಕಾರ್ಯನಿರ್ವಹಣಾಧಿಕಾರಿ ಕೇಶವ ಗೌಡ ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಸಂಘದ ಅಧ್ಯಕ್ಷ ಪದ್ಮನಾಭ ಭಟ್ ಅವರು ನೀಡಿದ ಖಾಸಗಿ ದೂರಿನ ಮೇರೆಗೆ ಕೋರ್ಟ್ ಆದೇಶದಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೂರಿನಲ್ಲಿ ಏನಿದೆ? ಸಂಘದಲ್ಲಿ ಸಾರ್ವಜನಿಕರಿಂದ ವಿವಿಧ ಠೇವಣಿಗಳ ರೂಪದಲ್ಲಿ ಒಟ್ಟು ರೂ.31,21,84,821 ಸಂಗ್ರಹಿಸಲಾಗಿದೆ. 2025-26ನೇ ಸಾಲಿನ ವ್ಯವಹಾರಗಳನ್ನು ಪರಿಶೀಲಿಸಿದಾಗ ಸುಮಾರು ರೂ.6.86 ಕೋಟಿ ಮೊತ್ತದ ಅನುಮಾನಾಸ್ಪದ ಹಣ ವರ್ಗಾವಣೆ ನಡೆದಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಮಂಗಳೂರಿನ ಕದ್ರಿ ನಿವಾಸಿ ಸಮೀರಾ ರಿಯಾಝ್ ಅವರ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಲಾಗಿದೆ.


ಸಾಲದ ಅರ್ಜಿಗಳು, ಆಡಳಿತ ಮಂಡಳಿಯ ಸಭಾ ನಡಾವಳಿಗಳು ಹಾಗೂ ವಕೀಲರ ಕಾನೂನು ಅಭಿಪ್ರಾಯ ಪತ್ರಗಳನ್ನು ತಿದ್ದಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಸಂಘದ CoBank ಸಾಫ್ಟ್‌ವೇರ್ ಮೂಲಕ ನಡೆಯುವ ಖಾತೆಗಳ ವ್ಯವಹಾರದ ಜವಾಬ್ದಾರಿ ಕಾರ್ಯನಿರ್ವಹಣಾಧಿಕಾರಿ ಕೇಶವ ಗೌಡ ಅವರಿಗೆ ವಹಿಸಲಾಗಿತ್ತು.


ಅವರ ಮೂಲಕವೇ ಈ ಹಣ ವರ್ಗಾವಣೆಗಳು ನಡೆದಿವೆ ಎಂದು ಆರೋಪಿಸಲಾಗಿದೆ. ತನಿಖೆ ಮುಂದುವರಿದಿದೆ:ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಜಾಮೀನು ಸಿಕ್ಕಿದ್ದರೂ ತನಿಖೆಗೆ ಸಹಕರಿಸುವಂತೆ ನ್ಯಾಯಾಲಯ ಷರತ್ತು ವಿಧಿಸಿದೆ ಎಂದು ತಿಳಿದುಬಂದಿದೆ.











































