‘ಅನಂತ’ ಹೆಸರಿನ ದೈತ್ಯ ಕ್ಯಾಂಪಸ್‌ ಆರಂಭಿಸಿದ ಗೂಗಲ್‌

Picture of Savistara

Savistara

Bureau Report

ಬೆಂಗಳೂರು: ಅಮೆರಿಕ ಮೂಲದ ದೈತ್ಯ ಟೆಕ್‌ ಕಂಪನಿ ಗೂಗಲ್‌ ಬೆಂಗಳೂರಿನಲ್ಲಿ ತನ್ನ ಬೃಹತ್‌ ಕ್ಯಾಂಪಸ್‌ ಅನ್ನು ಆರಂಭಿಸಿದೆ. ‘ಅನಂತ’ ಹೆಸರಿನ ಈ ಕ್ಯಾಂಪಸ್‌ ಅನ್ನು ಅನಾವರಣಗೊಳಿಸಿದೆ. ಇದು ಬೆಂಗಳೂರಿನಲ್ಲಿ ಕಂಪನಿಯ ನಾಲ್ಕನೇ ಕಚೇರಿಯಾಗಿದ್ದು, ವಿಶ್ವಾದ್ಯಂತ ಇರುವ ಬೃಹತ್‌ ಕ್ಯಾಂಪಸ್‌ಗಳಲ್ಲಿ ಒಂದಾಗಿದೆ.

‘ಪೂರ್ವ ಬೆಂಗಳೂರಿನ ಮಹಾದೇವಪುರದಲ್ಲಿ ಗೂಗಲ್‌ನ ಈ ನೂತನ ಕ್ಯಾಂಪಸ್‌ ಇದೆ. ಭಾರತದಲ್ಲಿ ಕಂಪನಿ ಬಿಲಿಯನ್‌ ಡಾಲರ್‌ಗಟ್ಟಲೆ ಹೂಡಿಕೆ ಮಾಡಿದ್ದು, ಗೂಗಲ್ ದೃಷ್ಟಿಯಿಂದ ಈ ಕಚೇರಿ ಪ್ರಮುಖ ಮೈಲುಗಲ್ಲಾಗಿದೆ.ಕ್ಯಾಂಪಸ್‌ಗೆ ಸಂಸ್ಕೃತ ಶಬ್ದ ‘ಅನಂತ’ ಎಂದು ಹೆಸರಿಟ್ಟಿದ್ದು, ಮಿತಿಯಿಲ್ಲದ (ಅನಂತ ಸಾಧ್ಯತೆಗಳು) ಇದರ ಅರ್ಥವಾಗಿದೆ. ಬರೋಬ್ಬರಿ 16 ಲಕ್ಷ ಚದರ ಅಡಿ ಸ್ಥಳಾವಕಾಶವನ್ನು ಇದು ಹೊಂದಿದೆ.ಏಕಕಾಲದಲ್ಲಿ 5,000 ಉದ್ಯೋಗಿಗಳು ಈ ಕಚೇರಿಯಿಂದ ಕಾರ್ಯ ನಿರ್ವಹಿಸಬಹುದಾಗಿದೆ.

ಗೂಗಲ್‌ನ ವಿವಿಧ ವಿಭಾಗಗಳಾದ ಆಂಡ್ರಾಯ್ಡ್‌, ಸರ್ಚ್‌, ಪೇ, ಕ್ಲೌಡ್‌, ಮ್ಯಾಪ್ಸ್‌, ಪ್ಲೇ ಮತ್ತು ಗೂಗಲ್‌ ಡೀಪ್‌ಮೈಂಡ್‌ ತಂಡಗಳು ಇಲ್ಲಿಂದ ಕಾರ್ಯ ನಿರ್ವಹಿಸಲಿವೆ.ಭಾರತದಲ್ಲಿ ಕಂಪನಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸುತ್ತಿದ್ದು, 2024ರಲ್ಲಿ ಹಲವು ತಾಂತ್ರಿಕ ಹಾಗೂ ಇಂಜಿನಿಯರಿಂಗ್‌ ಹುದ್ದೆಗಳನ್ನು ಅಮೆರಿಕದಿಂದ ಭಾರತಕ್ಕೆ ವರ್ಗಾಯಿಸಿತ್ತು. ಕಂಪನಿಯೊಳಗಿನ ಮರು ವಿನ್ಯಾಸದ ಹೆಸರಿನಲ್ಲಿ ಈ ಬದಲಾವಣೆಗಳನ್ನು ಮಾಡಿತ್ತು. ಇದೀಗ ಬೃಹತ್‌ ಕ್ಯಾಂಪಸ್‌ ಅನ್ನು ಬೆಂಗಳೂರಿನಲ್ಲಿ ತೆರೆದಿದ್ದು, ಭಾರತದತ್ತ ಮತ್ತಷ್ಟು ಕಣ್ಣು ನೆಟ್ಟಿದೆ.ಭಾರತದಲ್ಲಿ ಗೂಗಲ್‌ 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಅಮೆರಿಕದ ಹೊರಗೆ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ದೇಶವಾಗಿದೆ. ಬೆಂಗಳೂರು ಅಲ್ಲದೆ ಕಂಪನಿಯು ಗುರುಗ್ರಾಮ, ಹೈದರಾಬಾದ್‌, ಮುಂಬೈ ಮತ್ತು ಪುಣೆಯಲ್ಲೂ ಕಚೇರಿಗಳನ್ನು ಹೊಂದಿದೆ.

[t4b-ticker]
error: Content is protected !!