ರಾಜ್ಯದಲ್ಲಿ 1 ಲಕ್ಷ ಜನಸಂಖ್ಯೆಗೆ 165 ಮಂದಿ ಪೊಲೀಸ್​: ಉಳಿದ ರಾಜ್ಯಗಳಲ್ಲಿ ಎಷ್ಟಿದ್ದಾರೆ ಗೊತ್ತಾ?

Picture of Savistara

Savistara

Bureau Report

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಪಿಎಸ್ಐ, ಕಾನ್ಸ್​​ಟೇಬಲ್​​ಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ವಿಧಾನಪರಿಷತ್​ನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಬೆಂಗಳೂರು: ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್​​ಮೆಂಟ್ ಪ್ರಕಾರ 1 ಲಕ್ಷ ಜನಸಂಖ್ಯೆಗೆ ಸರಾಸರಿ 195 ಮಂದಿ ಪೊಲೀಸರು ಇರಬೇಕು. ಆದರೆ, ರಾಜ್ಯದಲ್ಲಿ ಕೇವಲ 165 ಮಂದಿ ಇದ್ದಾರೆ. ಮುಂದಿನ ದಿನಗಳಲ್ಲಿ ಪಿಎಸ್ಐ, ಕಾನ್ಸ್​​ಟೇಬಲ್​​ಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದು, ವ್ಯತ್ಯಾಸದ ಪ್ರಮಾಣ ಸರಿದೂಗಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.ವಿಧಾನಪರಿಷತ್​ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಚಟುವಟಿಕೆ ತಡೆಗಟ್ಟಲು ಪೊಲೀಸ್ ಸಿಬ್ಬಂದಿ ಸಂಖ್ಯೆ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರ ಮುಂದಿದೆಯಾ ಎಂಬ ಕಾಂಗ್ರೆಸ್​​ ಸದಸ್ಯ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದರು.ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ 1 ಲಕ್ಷ ಜನಸಂಖ್ಯೆಗೆ ರಾಜ್ಯದಲ್ಲಿ 165 ಮಂದಿ ಪೊಲೀಸರಿದ್ದು, ಬೇರೆ ರಾಜ್ಯಗಳಿಗೆ ತಾಳೆ ಹಾಕಿದರೆ ಸರಾಸರಿ ಪ್ರಮಾಣದಲ್ಲಿ ನಾವು ಸನಿಹದಲ್ಲಿದ್ದೇವೆ. ಒಂದು ಲಕ್ಷ ಜನಸಂಖ್ಯೆಗೆ ಮಧ್ಯಪ್ರದೇಶದಲ್ಲಿ 121, ಮಹಾರಾಷ್ಟ್ರ 136, ರಾಜಸ್ತಾನ 118, ತಮಿಳುನಾಡು 159 ಹಾಗೂ ಬಿಹಾರದಲ್ಲಿ 81 ಮಂದಿ ಪೊಲೀಸರಿದ್ದಾರೆ ಎಂದರು.ಇಲಾಖೆಯಲ್ಲಿ ಈಗಾಗಲೇ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿಯಲ್ಲಿ ಹಗರಣವಾಗಿದ್ದ 565 ಪಿಎಸ್ಐ ಹುದ್ದೆಗಳಿಗೆ ಮರುಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದ್ದು, ಅರ್ಹ ಪಿಎಸ್ಐಗಳು ಪೊಲೀಸ್ ತರಬೇತಿ ಪಡೆಯುತ್ತಿದ್ದಾರೆ. 402 ಮಂದಿ ಪಿಎಸ್ಐಗಳ ಸಿಂಧುತ್ವ ಪರಿಶೀಲನೆ ನಡೆಸಲಾಗುತ್ತಿದೆ. ಸಿವಿಲ್ ಹಾಗೂ ಸಶಸ್ತ್ರ ಮೀಸಲು ಪಡೆದ ಕಾನ್ಸ್​ಟೇಬಲ್​​ಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಕೂಡದು ಎಂದು 2017ರಲ್ಲಿಯೇ ಆದೇಶ ಹೊರಡಿಸಲಾಗಿದೆ. ರಿಯಲ್ ಎಸ್ಟೇಟ್ ದಂಧೆಯಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಮುಲಾಜಿಲ್ಲದೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಪೊಲೀಸರಿಂದ ಡಬಲ್ ಡ್ಯೂಟಿ ಮಾಡಿಸುತ್ತಿರುವುದಾಗಿ ಮಂಜುನಾಥ್ ಭಂಡಾರಿ ಅವರ ಉಪಪ್ರಶ್ನೆಗೆ ಉತ್ತರಿಸಿದ ಸಚಿವರು, ಪೊಲೀಸ್ ಸಿಬ್ಬಂದಿಯು ವಿವಿಐಪಿ ಭೇಟಿ ಸಂದರ್ಭ, ಸಾರ್ವತ್ರಿಕ ಚುನಾವಣೆ, ಗಲಭೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಸಂದರ್ಭಗಳಲ್ಲಿ ಕರ್ತವ್ಯ ಸಮಯಕ್ಕಿಂತ ಹೆಚ್ಚುವರಿ ಕೆಲಸ ಮಾಡಲಿದ್ಧಾರೆ. ಇದರ ಹೊರತು ಯಾವುದೇ ಸಿಬ್ಬಂದಿಗೆ ಡಬಲ್ ಡ್ಯೂಟಿ ನಿಯೋಜಿಸಿಲ್ಲ ಎಂದು ಪರಮೇಶ್ವರ್​​ ಸ್ಪಷ್ಟಪಡಿಸಿದರು.

[t4b-ticker]
error: Content is protected !!