ಲಕ್ನೋ: ನಮ್ಮ ಸಹೋದರಿಯರ ಗಂಡಂದಿರನ್ನು ಕೊಂದವರು, ಈಗ ಭಾರತದ ಕ್ಷಿಪಣಿ ದಾಳಿಯಲ್ಲಿ ತಮ್ಮ ಇಡೀ ಕುಟುಂಬವನ್ನು ಕಳೆದುಕೊಂಡಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ (Pahalgam Terror Attack) ದಾಳಿಗೆ ಪ್ರತೀಕಾರವಾಗಿ ಪಾಕ್ ಮತ್ತು ಪಿಒಕೆಯ ಉಗ್ರರ ಅಡಗು ತಾಣಗಳ ಮೇಲೆ ಭಾರತೀಯ ಸೇನಾ ಪಡೆ ನಡೆಸಿದ ದಾಳಿಗೆ ಯೋಗಿ ಆದಿತ್ಯನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಆಪರೇಷನ್ ಸಿಂಧೂರ’ (Operation Sindoor) ನಡೆಸಿದ್ದಕ್ಕೆ ಪ್ರಧಾನಿ ಮೋದಿ (PM Modi) ಮತ್ತು ಭಾರತೀಯ ಮೂರು ಸೇನಾ ಪಡೆಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡ ನಮ್ಮ ಸಹೋದರಿಯರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ನಮ್ಮ ಭದ್ರತಾ ಪಡೆಗಳ ಭಾವನೆ ಏನೆಂಬುದು ಈ ಕಾರ್ಯಾಚರಣೆಯಿಂದ ಗೊತ್ತಾಗಿದೆ. ನಮ್ಮ ಸಹೋದರಿಯರು ಮತ್ತು ತಾಯಂದಿರ ಗಂಡಂದಿರನ್ನು ಕೊಲ್ಲಲು ಧೈರ್ಯ ಮಾಡಿದವರು ಈಗ ಕ್ಷಿಪಣಿ ದಾಳಿಯಲ್ಲಿ ತಮ್ಮ ಇಡೀ ಕುಟುಂಬವನ್ನು ಕಳೆದುಕೊಂಡಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಏ.22 ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಅಸುನೀಗಿದ್ದರು. ಅದರ ಬೆನ್ನಲ್ಲೇ ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ತಲೆದೋರಿತು. ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಭಾರತ ಸರ್ಕಾರ ಫಣ ತೊಟ್ಟಿತು. ಅದರಂತೆ ಮಂಗಳವಾರ ತಡರಾತ್ರಿ ಪಾಕ್ ಮತ್ತು ಪಿಒಕೆ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿತು. ಪರಿಣಾಮವಾಗಿ 100 ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆಂದು ಮೂಲಗಳು ತಿಳಿಸಿವೆ.













































