ಲಕ್ನೋ: ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಸೂಚನೆ ಮೇರೆಗೆ ಉತ್ತರ ಪ್ರದೇಶದ ನೇಪಾಳ ಗಡಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಕಟ್ಟಡಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ (Bulldozers Actions) ನಡೆಸಲಾಗಿದೆ.
ಸ್ಥಳೀಯ ಜಿಲ್ಲಾ ಮತ್ತು ಪೊಲೀಸ್ ಆಡಳಿತವು ಶ್ರಾವಸ್ತಿ, ಬಲರಾಮ್‌ಪುರ, ಬಹ್ರೈಚ್, ಮಹಾರಾಜ್‌ಗಂಜ್ ಮತ್ತು ಲಖಿಂಪುರ ಜಿಲ್ಲೆಗಳಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿವಿಧೆಡೆ 28 ಮದರಸಾಗಳು (Madrasas), 9 ಮಸೀದಿಗಳು (Mosques), 6 ದೇವಾಲಯಗಳು, 1 ಈದ್ಗಾವನ್ನ ನೆಲಸಮಗೊಳಿಸಲಾಗಿದೆ.
ಅಕ್ರಮ ಮದರಸಾಗಳು ಧ್ವಂಸ
ರಾಜ್ಯದಲ್ಲಿ ನಡೆದ ಅತಿದೊಡ್ಡ ಬುಲ್ದೋಜರ್ ಕಾರ್ಯಾಚರಣೆ ಇದಾಗಿದ್ದು, ಶ್ರಾವಸ್ತಿ ಜಿಲ್ಲೆಯ ಭಗವಾನ್‌ಪುರ ಭೈಸಾಹಿ, ಮಹಾರಾಜ್‌ಗಂಜ್, ಪೋಖರ್ಭಿಂಡಾ, ತಹಸಿಲ್, ಸೀತಾಲಪುರ ಗ್ರಾಮಗಳು ಸೇರಿದಂತೆ ವಿವಿಧೆಡೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ 28 ಮದರಸಾಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೇ ಕೆಲ ಮದರಸಾಗಳಿಗೆ ಬೀಗ ಜಡಿಯಲಾಗಿದೆ. ಜೊತೆಗೆ ಬಲರಾಮ್‌ಪುರ, ಬಹ್ರೈಚ್, ಮಹಾರಾಜ್‌ಗಂಜ್ ಮತ್ತು ಲಖಿಂಪುರ ಖೇರಿಗಳಲ್ಲಿನ 9 ಮಸೀದಿಗಳು, 6 ದೇವಾಲಯಗಳು ಮತ್ತು 1 ಈದ್ಗಾ ವನ್ನ ತೆರವುಗೊಳಿಸಲಾಗಿದೆ ಎಂದು ಶ್ರಾವಸ್ತಿ ಜಿಲ್ಲಾಡಳಿತ ತಿಳಿಸಿದೆ.
ಕಳೆದ ಏ.22ರಂದು ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಗುಜರಾತ್‌ನಲ್ಲಿ (Gujarat) ಅಕ್ರಮ ವಲಸಿಗರ ವಿರುದ್ಧ ಬೃಹತ್ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗಿತ್ತು. ದೇಶದಲ್ಲೇ ನಡೆದ ಅತಿ ದೊಡ್ಡ ಬುಲ್ಡೋಜರ್ ಕಾರ್ಯಾಚರಣೆ ಇದಾಗಿತ್ತು. 74 ಬುಲ್ಡೋಜರ್‌ಗಳು, 200 ಟ್ರಕ್‌ಗಳು, 1,800 ಕಾರ್ಮಿಕರು, 3000 ಪೊಲೀಸ್ ಅಧಿಕಾರಿಗಳು ಆಪರೇಷನ್‌ನ ಭಾಗವಾಗಿದ್ದರು.













































