ಶಿರೂರಿನಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿ; ಘೇರಿಯಲ್ ವಾಲ್ ನಿರ್ಮಾಣಕ್ಕೆ ಮುಂದಾದ ಜಿಲ್ಲಾಡಳಿತ

Picture of Savistara

Savistara

Bureau Report

ಶಿರೂರಿನಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಜಿಲ್ಲಾಡಳಿತ ಘೇರಿಯಲ್ ವಾಲ್ ನಿರ್ಮಾಣಕ್ಕೆ ಮುಂದಾಗಿದೆ.

ಕಾರವಾರ(ಉತ್ತರ ಕನ್ನಡ): ಜಿಲ್ಲೆಯಲ್ಲಿ ಈ ಬಾರಿಯೂ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾನ್ಸೂನ್ ಆರಂಭಕ್ಕೂ ಪೂರ್ವದಲ್ಲೇ ಅಬ್ಬರಿಸುವ ಮಳೆ ಮುಂದುವರಿದಿದ್ದು, ಕಳೆದೊಂದು ವಾರದ ಅವಧಿಯಲ್ಲಿ 221 ಮಿ.ಮೀ ಮಳೆಯಾಗಿದೆ.ಇಷ್ಟಾದರೂ ಕಳೆದ ಬಾರಿ ಗುಡ್ಡಕುಸಿತ ಸಂಭವಿಸಿದ ಅಂಕೋಲಾದ ಶಿರೂರಿನ ಗುಡ್ಡ ಕುಸಿದ ಪ್ರದೇಶದಲ್ಲಿ ಯಾವುದೇ ಪರಿಹಾರ ಕ್ರಮವಾಗದೇ ಇರುವುದು ಈ ಭಾಗದಲ್ಲಿ ಸಂಚರಿಸುವವರ ಆತಂಕ ಹೆಚ್ಚಿಸಿದೆ.

ಇನ್ನೂ ಸಿಕ್ಕಿಲ್ಲ ಇಬ್ಬರ ಮೃತದೇಹ:

“ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿ ಸುರಿದ ಮಳೆ ದೊಡ್ಡ ಅನಾಹುತ ಸೃಷ್ಟಿಸಿತ್ತು. ಅದರಲ್ಲಿಯೂ ಶಿರೂರಿನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ 11 ಮಂದಿ ಕಣ್ಮರೆಯಾಗಿದ್ದರು. ಇಂದಿಗೂ ಕೂಡ ಇಬ್ಬರ ಮೃತದೇಹ ಸಿಕ್ಕಿಲ್ಲ. ಅಲ್ಲದೆ ಜಿಲ್ಲೆಯ ವಿವಿಧೆಡೆ ಸಾಲು ಸಾಲು ಗುಡ್ಡ ಕುಸಿತಗಳು ಸಂಭವಿಸಿ ಪ್ರಮುಖ ಹೆದ್ದಾರಿಗಳು ಬಂದ್ ಆಗಿ ಜನರು ತಿಂಗಳುಗಟ್ಟಲೆ ಪರದಾಡಬೇಕಾಯಿತು” ಎಂದು ಸ್ಥಳೀಯರಾದ ದೀಪಕ್ ಶೆಣೈ ಹೇಳಿದರು.

ಗಂಗಾವಳಿಯಲ್ಲಿ ತೆರವಾಗದ ರಾಶಿ ರಾಶಿ ಮಣ್ಣು:

“ಇಷ್ಟೊಂದು ಭೀಕರ ಪರಿಸ್ಥಿತಿ ಇದ್ದರೂ ಗುಡ್ಡಕುಸಿತ ತಡೆಗೆ ಯಾವುದೇ ಪರಿಹಾರ ಕ್ರಮಗಳಾಗಿಲ್ಲ. ಶಿರೂರು ಗುಡ್ಡ ಕುಸಿತದ ಪ್ರದೇಶದಲ್ಲಿ ಈಗಲೂ ಗುಡ್ಡ ಬಾಯ್ತೆರೆದುಕೊಂಡಿದೆ. ಗಂಗಾವಳಿಯಲ್ಲಿ ಬಿದ್ದಿರುವ ರಾಶಿ ರಾಶಿ ಮಣ್ಣು ಹಾಗೆಯೇ ಉಳಿದಿದ್ದು, ತೆರವು ಮಾಡಬೇಕೆಂಬ ಬೇಡಿಕೆ ಇನ್ನೂ ಕೂಡ ಟೆಂಡರ್ ಹಂತದಲ್ಲೇ ಇದೆ” ಎಂದು ಅವರು ತಿಳಿಸಿದರು.

“ಇದೀಗ ಎಡಬಿಡದೆ ಮಳೆಯಾಗುತ್ತಿರುವುದು ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಮಳೆ ಹೀಗೆಯೇ ಮುಂದುವರಿದಲ್ಲಿ ಈ ಭಾಗದ ಜನ‌ ಪ್ರವಾಹಕ್ಕೆ ಸಿಲುಕುವ ಭೀತಿಯಿದೆ. ಅರ್ಧ ಗುಡ್ಡ ಕುಸಿದ ಹೆದ್ದಾರಿಯಲ್ಲಿಯೂ ಮತ್ತೆ ಅರ್ಧ ಗುಡ್ಡ ಕುಸಿಯುವ ಭೀತಿ ಎದುರಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಗುಡ್ಡ ಕುಸಿತದಿಂದ ಮನೆ ಕಳೆದುಕೊಂಡ ಉಳುವರೆಯ ಗ್ರಾಮದವರಿಗೆ ನಿವೇಶನದ ಭರವಸೆ ನೀಡಿದ್ದರೂ ಕೇವಲ ಜಾಗ ಗುರುತಿಸುವ ಕೆಲಸ ಮಾತ್ರ ಆಗಿದೆ. ಅವರಿಗೆ ಮನೆ ಕಟ್ಟಿಕೊಡುವ ಕೆಲಸವಾಗಿಲ್ಲ. ಘಟನೆ ನಡೆದು ಇನ್ನೊಂದು‌ ತಿಂಗಳು ಕಳೆದರೆ ವರ್ಷ ತುಂಬುತ್ತದೆ. ಸ್ಥಳಕ್ಕೆ ಸ್ವತಃ ಮುಖ್ಯಮಂತ್ರಿಯೇ ಭೇಟಿ ನೀಡಿ ಪರಿಶೀಲಿಸಿದರೂ ಈ ಪ್ರದೇಶದಲ್ಲಿ ಯಾವುದೇ ಕ್ರಮವಾಗಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದರು.

ಸರ್ಕಾರ ಕೈಗೊಂಡ ಕ್ರಮಗಳೇನು?:

ರಾಜ್ಯ ಸರ್ಕಾರ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ತಡೆಗೆ 200 ಕೋಟಿ ರೂ ಘೋಷಣೆ ಮಾಡಿದ್ದರೂ ಈವರೆಗೂ ಆ ಹಣ ಬಳಕೆಯಾಗಿಲ್ಲ. ಆದರೆ ಕಳೆದ ಹಲವು ವರ್ಷಗಳಿಂದ 600ಕ್ಕೂ ಹೆಚ್ಚು ಕಡೆ ಭೂ ಕುಸಿತ ಸಂಭವಿಸಿದೆ. ಅಲ್ಲದೆ, ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯ ಯಾಣ ಸಮೀಪದಲ್ಲಿ ಭೂ ಕಂಪನ ಸಂಭವಿಸಿದ ಪರಿಣಾಮ ಜಿಲ್ಲೆಯ ವಿವಿಧೆಡೆ ಇದರ ಅನುಭವವಾಗಿ ಜನ ಆತಂಕಕ್ಕೊಳಗಾಗಿದ್ದರು. ಇಷ್ಟಾದರೂ ಗುಡ್ಡ ಕುಸಿತದ ಪ್ರದೇಶಗಳಲ್ಲಿ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಮಾತ್ರವಲ್ಲ, ರಾಜ್ಯದಲ್ಲಿಯೇ ಭೀಕರ ದುರಂತಕ್ಕೆ ಕಾರಣವಾಗಿದ್ದ ಅಂಕೋಲಾದ ಶಿರೂರಿನಲ್ಲಿಯೂ ಮತ್ತೆ ಗುಡ್ಡ ಕುಸಿತ ತಡೆಗೆ ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.

ಇನ್ನೊಂದು ತಿಂಗಳಲ್ಲಿ ಗುಡ್ಡ ಕುಸಿತ ಪ್ರದೇಶದಲ್ಲಿ ಗೋಡೆ ನಿರ್ಮಾಣ- ಡಿಸಿ:

ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯಾ ಮಾತನಾಡಿ, “ಗುಡ್ಡ ಕುಸಿತ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನಿರಂತರವಾಗಿ ಸಭೆ ನಡೆದಿದೆ. ಶಿರೂರು ಭಾಗದಲ್ಲಿ ಎನ್‌ಎಚ್‌ಎಐದಿಂದ ಘೇರಿಯಲ್ ವಾಲ್ ನಿರ್ಮಾಣ ಮಾಡಲಾಗುತ್ತಿದೆ. ಇನ್ನೊಂದು ತಿಂಗಳಿನಲ್ಲಿ ಗುಡ್ಡ ಕುಸಿತ ಪ್ರದೇಶದಲ್ಲಿ ಗೋಡೆ ನಿರ್ಮಾಣ ಮಾಡಲಾಗುವುದು. ಸದ್ಯ ಸ್ಥಳ ಅಪಾಯಕಾರಿಯಾಗಿರುವುದರಿಂದ ಇಲ್ಲಿ ವಾಹನಗಳ ನಿಲುಗಡೆ, ಫೋಟೋ ತೆಗೆಯುವುದು ನಿರ್ಬಂಧಿಸಲಾಗಿದೆ. ಇದರ ಜೊತೆಗೆ ಗುಡ್ಡ ಕುಸಿತ ಸಂಭವಿಸಬಹುದಾದ ರಾಷ್ಟ್ರೀಯ ಹೆದ್ದಾರಿ 19 ಸ್ಥಳಗಳಲ್ಲಿಯೂ ವಾಹನ ನಿಲ್ಲಿಸದಂತೆ ನಿರ್ಬಂಧ ಹೇರಲಾಗುವುದು” ಎಂದರು.”2019ರಲ್ಲಿ ಜಿಎಸ್‌ಐಯಿಂದ ಜಿಲ್ಲೆಯಲ್ಲಿ 439 ಸ್ಥಳಗಳಲ್ಲಿ ಭೂಕುಸಿತವಾಗುವ ಬಗ್ಗೆ ವರದಿ ಸಲ್ಲಿಸಿದ್ದರು. ಕಳೆದ ಬಾರಿ ಈ ಪ್ರದೇಶಗಳಲ್ಲಿ ಅದೇ ಗ್ರಾಮ ಪಂಚಾಯಿತಿಯವರನ್ನು ಸ್ಪಾಟರ್ಸ್​ಗಳನ್ನಾಗಿ ನೇಮಿಸಲಾಗಿತ್ತು. ಈ ಬಾರಿಯೂ ಇಲ್ಲಿ ಸ್ಪಾಟರ್ಸ್​ಗಳಿಗೆ ತರಬೇತಿ ನೀಡಿ ನೇಮಕ ಮಾಡಲಾಗಿದೆ. ಈ ಭಾಗದಲ್ಲಿ ಏನಾದರು ಗುಡ್ಡ ಕುಸಿಯುವ ಸಾಧ್ಯತೆಗಳ ಬಗ್ಗೆ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡಿದಲ್ಲಿ ಆ ಭಾಗದಲ್ಲಿ ಜನ ಹಾಗೂ ವಾಹನ ಸಂಚಾರವನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಆದರೆ, ಕಳೆದ ಬಾರಿಯ ಭೀಕರ ಗುಡ್ಡ ಕುಸಿತದಿಂದ ಪಾಠ ಕಲಿಯಬೇಕಿದ್ದ ಆಡಳಿತ ವ್ಯವಸ್ಥೆ ಪುನಃ ಮಳೆಗಾಲ ಬಂದರೂ ಈಗ ಸಿದ್ಧತೆಗೆ ತಡಕಾಡುತ್ತಿದೆ. ಇನ್ನಾದರೂ ಆದಷ್ಟು ಬೇಗ ಗುಡ್ಡಕುಸಿತ ಪ್ರದೇಶಗಳಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕಿದೆ.

[t4b-ticker]
error: Content is protected !!