ಸಿದ್ದರಾಮಯ್ಯ ಗಡುವಿಗೂ ಡೋಂಟ್‌ ಕೇರ್‌, ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ ಮುಸ್ಲಿಂ ಮುಖಂಡರು

Picture of Savistara

Savistara

Bureau Report

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಮತ್ತು ದ್ವೇಷ ಬಿತ್ತುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಕಾಂಗ್ರೆಸ್‌ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ, ಮುಸ್ಲಿಂ ಮುಖಂಡರು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಅಬ್ದುಲ್ ರಹೀಂ ಹತ್ಯೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಾಯಕರು ರಾಜೀನಾಮೆ ಘೋಷಿಸಿದ್ದಾರೆ. ಶಾಂತಿ ಕಾಪಾಡುವಲ್ಲಿ ಸರಕಾರ ವಿಫಲವಾಗಿದ್ದು, ಹುದ್ದೆ ತೊರೆಯುವುದಾಗಿ ಮುಖಂಡರು ತಿಳಿಸಿದ್ದಾರೆ.

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರವಿದ್ದರೂ, ಅಲ್ಪಸಂಖ್ಯಾತರ ರಕ್ಷಣೆ ಮತ್ತು ದ್ವೇಷ ಬಿತ್ತುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಪಕ್ಷದ ಮುಸ್ಲಿಂ ಮುಖಂಡರು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.

ಬಂಟ್ವಾಳ ಬಳಿ ಅಬ್ದುಲ್‌ ರಹೀಂ ಹತ್ಯೆ ನಡೆದ ಬೆನ್ನಿಗೇ ಬುಧವಾರ ರಾಜೀನಾಮೆ ಪರ್ವ ಆರಂಭಗೊಂಡಿತ್ತು. ಈ ಹಿನ್ನೆಲೆಯಲ್ಲಿ ನಿರ್ಧಾರ ಪ್ರಕಟಿಸಲು ನಗರದ ಶಾದಿ ಮಹಲ್‌ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಸಭೆಯು ಗೊಂದಲದ ಗೂಡಾಗಿ, ಕಾರ್ಯಕರ್ತರ ಒತ್ತಡಕ್ಕೆ ಮಣಿದ ನಾಯಕರು ರಾಜೀನಾಮೆ ನೀಡುವುದಾಗಿ ಘೋಷಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್‌ ಹಮೀದ್‌ ವಿಷಯ ಪ್ರಸ್ತಾಪ ಮಾಡಿ, ಕಾಂಗ್ರೆಸ್‌ ಜತೆಗಿನ ಮುಸ್ಲಿಮರ ಸಂಬಂಧ ಹಾಗೂ ಎರಡು ವರ್ಷಗಳಲ್ಲಿ ನಡೆದಿರುವ ಬೆಳವಣಿಗೆಗಳ ಮಾಹಿತಿ ನೀಡಿ, ಅಮಾಯಕರಾದ ಮಸೂದ್‌, ಫಾಝಿಲ್‌, ಅಶ್ರಫ್‌ ಬಳಿಕ ಇದೀಗ ಅಬ್ದುಲ್‌ ರಹೀಂ ಹತ್ಯೆ ನಡೆದಿದೆ. ಈ ಕೊಲೆಗಳಿಗೆ ಪ್ರಚೋದನೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಖೇದಕರ ಎಂದರು.

ಕಾಂಗ್ರೆಸ್‌ ಪಕ್ಷ ನಮ್ಮ ಉಸಿರು. ನಾವೆಲ್ಲಅದನ್ನೇ ನಂಬಿಕೊಂಡಿದ್ದೇವೆ. ಆದರೂ ಕ್ರಮ ಕೈಗೊಳ್ಳುವಲ್ಲಿ ತಾರತಮ್ಯ ಮಾಡಲಾಗುತ್ತದೆ. ಬಹಿರಂಗವಾಗಿ ಮುಸ್ಲಿಮರ ಬಹಿಷ್ಕಾರಕ್ಕೆ, ಹತ್ಯೆಗೆ ಪ್ರಚೋದನೆ ನೀಡಿದರೂ, ರೌಡಿ ಕೊಲೆಗೆ ಪ್ರತೀಕಾರ ಮಾಡುತ್ತೇವೆ ಎಂದು ಹೇಳಿಕೆ ನೀಡಿದರೂ ಬಂಧಿಸುತ್ತಿಲ್ಲ. ಫಾಝಿಲ್‌ನನ್ನು ನಾವೇ ಕೊಂದದ್ದು ಎಂದು ಹೇಳಿದವರನ್ನೂ ಬಂಧಿಸಿಲ್ಲ. ಹೀಗಿರುವಾಗ ನಾವು ಪಕ್ಷದಲ್ಲಿದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಜಿಲ್ಲೆಯ ಮಾನ ಹರಾಜಾಗುತ್ತಿದೆ. ರಾತ್ರಿ ಎಂಟು ಗಂಟೆಗೆ ಜಿಲ್ಲೆ ಬಂದ್‌ ಆಗುತ್ತಿದೆ. ಸುಪ್ರೀಂ ಕೋರ್ಟ್‌ ಆದೇಶವಿದ್ದರೂ, ಬಂದ್‌ಗೆ ಕರೆ ಕೊಟ್ಟವರನ್ನು ತಿಂಗಳಾದರೂ ಬಂಧಿಸುವುದಿಲ್ಲ. ನಿಷೇಧಾಜ್ಞೆ ಇದ್ದರೂ, ಆರು ಮಂದಿಗೆ ಇರಿತವಾಗುತ್ತದೆ. ಮೆರವಣಿಗೆ ನಡೆಸಲಾಗುತ್ತದೆ. ಹಿಂದು- ಮುಸ್ಲಿಮರ ಮಧ್ಯೆ ಅಪನಂಬಿಕೆ ಸೃಷ್ಟಿಯಾಗುತ್ತಿದೆ. ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹತ್ಯೆ ನಡೆಯುವುದನ್ನು ಪೊಲೀಸರು ಕಾಯುವಂತಿದೆ. ಈ ಹಿನ್ನೆಲೆಯಲ್ಲಿ ನಾವು ರಾಜೀನಾಮೆ ಪತ್ರ ಹಿಡಿದುಕೊಂಡು ಬಂದಿದ್ದೇವೆ ಎಂದರು.

ಈ ಮಧ್ಯೆ, ಗುರುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಜಿಲ್ಲೆಯ ಬೆಳವಣಿಗೆಗಳ ಬಗ್ಗೆ ಮಹತ್ವ ಸಭೆಗಳು ನಡೆದಿವೆ. ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್‌ ಅಹ್ಮದ್‌, ಸಿಎಂ ರಾಜಕೀಯ ಕಾರ್ಯದರ್ಶಿ ನಾಸೀರ್‌ ಅಹ್ಮದ್‌ ಮತ್ತು ಖುದ್ದು ಸಿಎಂ ಸಿದ್ದರಾಮಯ್ಯ ಕರೆ ಮಾಡಿ, ಗುರುವಾರ ರಾತ್ರಿಯಿಂದಲೇ ಸೂಕ್ತ ಕ್ರಮದ ಭರವಸೆ ನೀಡಿ, ಒಂದು ವಾರದ ಗಡುವು ಕೇಳಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು.

ವೇದಿಕೆ ಏರಿದ ಕಾರ್ಯಕರ್ತರು

ಶಾಹುಲ್‌ ಹಮೀದ್‌ ಅವರ ಮಾತಿನ ಶೈಲಿ ಬದಲಾಗುತ್ತಲೇ, ಬೇಕೇ ಬೇಕು, ನ್ಯಾಯ ಬೇಕು. ರಾಜೀನಾಮೆ ಕೊಡಲೇಬೇಕು ಎಂಬ ಘೋಷಣೆ ಕೂಗುತ್ತಾ ವೇದಿಕೆ ಏರಿದರು. ಸಭಾಂಗಣದಲ್ಲಿದ್ದ ಎಲ್ಲರೂ ಎದ್ದು ಘೋಷಣೆ ಕೂಗುವ ಮೂಲಕ ಸಭೆ ಗೊಂದಲದ ಗೂಡಾಯಿತು.

ತಾನು ನಿರ್ಧಾರ ಹೇಳುತ್ತೇನೆ ಎಂದು ಶಾಹುಲ್‌ ಹಮೀದ್‌ ಹೇಳಿದರೂ, ಮಾತನಾಡಲು ಬಿಡಲಿಲ್ಲ. ಈ ಮಧ್ಯೆ, ಎಂ.ಎಸ್‌. ಮೊಹಮ್ಮದ್‌, ಜಿ.ಎ. ಬಾವ, ಕೆ. ಅಶ್ರಫ್‌, ಸುಹೈಲ್‌ ಕಂದಕ್‌ ಮತ್ತಿತರರು ಸಮಾಧಾನಪಡಿಸಲು ಪ್ರಯತ್ನ ಮಾಡಿದರೂ ಆಕ್ರೋಶಿತ ಕಾರ್ಯಕರ್ತರು ಕೇಳುವ ಸ್ಥಿತಿ ಇರಲಿಲ್ಲ.

ಮಾಜಿ ಉಪಮೇಯರ್‌ ಅಬ್ದುಲ್‌ ರವೂಫ್‌ ಮಧ್ಯಪ್ರವೇಶಿಸಿ, ನಮ್ಮ ರಾಜೀನಾಮೆ ನಿರ್ಧಾರ ಅಚಲ. ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕಾರ್ಯಕರ್ತರಿಲ್ಲದೆ ಪಕ್ಷ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದು, ಕಾರ್ಯಕರ್ತರು ಘೋಷಣೆ ಮೂಲಕ ಅನುಮೋದಿಸಿದರು. ರಾಜೀನಾಮೆ ಮಾತಿನಿಂದ ಹೇಳಿದರೆ ಸಾಲದು, ನಮ್ಮ ಬೇಡಿಕೆ ಈಡೇರುವ ತನಕ ಕಾಂಗ್ರೆಸ್‌ ಕಚೇರಿಗೆ ಕಾಲಿಡಬಾರದು ಎಂದು ಕಾರ್ಯಕರ್ತರು ತಾಕೀತು ಮಾಡಿದರು.

ಕಾಂಗ್ರೆಸ್‌ ನಮ್ಮ ಉಸಿರು. ಅದನ್ನು ಬಿಡುವ ಪ್ರಶ್ನೆ ಇಲ್ಲ. ನಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿ, ಅದನ್ನು ಸಭೆಯಲ್ಲಿ ಪ್ರಕಟಿಸಿದ್ದೇವೆ. ಎಲ್ಲರ ರಾಜೀನಾಮೆ ಪತ್ರ ಸಂಗ್ರಹಿಸಿಟ್ಟಿದ್ದೇವೆ. ಸಿಎಂ ಕೆಲವು ಭರವಸೆ ನೀಡಿದ್ದು, ಅದನ್ನು ಈಡೇರಿಸುವ ಆಶಾಭಾವನೆ ಇದೆ. ಇಡೀ ಜಿಲ್ಲೆಯಲ್ಲಿ ಶಾಂತಿ ನೆಲೆಸುವ ವಿಷಯದಲ್ಲಿ ರಾಜಿ ಮಾಡುವುದಿಲ್ಲ ಎಂದು ಶಾಹುಲ್‌ ಹಮೀದ್‌ ಘೋಷಿಸಿದರು.

ಕಾಂಗ್ರೆಸ್‌ಗೆ ಬೇಡಿಕೆಗಳು

  • ಎಲ್ಲ ಮತೀಯರು ಪ್ರೀತಿ- ವಿಶ್ವಾಸದಿಂದ ಬದುಕುವಂತಹ ವಾತಾವರಣ ಸೃಷ್ಟಿಸಬೇಕು.
  • ಪೊಲೀಸ್‌ ಇಲಾಖೆಗೆ ತಳಮಟ್ಟದಿಂದ ಸರ್ಜರಿ ಮಾಡಬೇಕು.
  • ಪ್ರಚೋದನಕಾರಿ ಭಾಷಣ ಮಾಡಿ, ಅಶಾಂತಿ ಸೃಷ್ಟಿಸುವವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು.
  • ರೌಡಿಗಳ ಅಟ್ಟಹಾಸ, ಸರಣಿ ಕೊಲೆಗಳು, ಅಮಾಯಕರ ಜೀವ ಬಲಿ ಕೊನೆಗಾಣಿಸಬೇಕು.
[t4b-ticker]
error: Content is protected !!