ಡಿಕೆ ಶಿವಕುಮಾರ್ ಬೆಂಬಲಕ್ಕೆ ಕೆಲವು ಶಾಸಕರಿದ್ದಾರೆ; ಹೆಚ್ಚೇನು ಇಲ್ಲ..
ಹೊಸದಿಲ್ಲಿ/ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆಬಗ್ಗೆ ಊಹಾಪೋಹಗಳು, ಹೇಳಿಕೆಗಳು ಹೆಚ್ಚುತ್ತಿರುವ ನಡುವೆ ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಐದು ವರ್ಷ ನನ್ನದೇ ಸರ್ಕಾರ’ ಎಂದು ಘೋಷಣೆ ಮಾಡಿದ್ದಾರೆ.ದೆಹಲಿಯಲ್ಲಿ ಇಂಡಿಯಾ ಟುಡೇಗೆ ಸಂದರ್ಶನ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ನಾಯಕತ್ವ ಬದಲಾವಣೆ ಬಗ್ಗೆ ವದಂತಿಗಳನ್ನು ತಳ್ಳಿ ಹಾಕಿದರು. ಐದು ವರ್ಷ ಅಧಿಕಾರ ಪೂರೈಸುವುದಾಗಿ ಹೇಳಿದ ಅವರು, ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಲು ತನಗೆ ಪಟ್ಟ ಬಿಡಲು ಹೈಕಮಾಂಡ್ ಸೂಚಿಸಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದರು.“ನಾನು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತೇನೆ” ಎಂದು ಅವರು ಹೇಳಿದರು. “ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಜುಲೈ 2 ರಂದು ನಾನು ಈ ಹೇಳಿಕೆಯನ್ನು ನೀಡಿದ್ದೇನೆ. ಆ ದಿನ ಡಿಕೆ ಶಿವಕುಮಾರ್ ಕೂಡ ಅಲ್ಲಿದ್ದರು” ಎಂದರು. ಮಧ್ಯಂತರ ನಿರ್ಗಮನದ ವದಂತಿಗಳನ್ನು ತಳ್ಳಿಹಾಕಿದರು.
ಡಿಕೆ ಶಿವಕುಮಾರ್ ಅವರ ರಾಜಕೀಯದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, “ಅವರು ಕೂಡಾ ಆಕಾಂಂಕ್ಷಿಯೇ, ಅದರಲ್ಲಿ ತಪ್ಪೇನಿಲ್ಲ. ‘ಈಗ ಕುರ್ಚಿ ಖಾಲಿ ಇಲ್ಲ’ ಎಂದು ಸ್ವತಃ ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ” ಎಂದರು.ನಾಯಕತ್ವ ಬದಲಾವಣೆಗೆ ಹೈಕಮಾಂಡ್ ನಿರ್ಧರಿಸಿದ ಆಂತರಿಕ ಸೂಚನೆಗಳು ಅಥವಾ ಸಮಯದ ಮಿತಿಯ ಪ್ರತಿಪಾದನೆಯನ್ನು ತಿರಸ್ಕರಿಸಿದ ಸಿದ್ದರಾಮಯ್ಯ, “ಎರಡೂವರೆ ವರ್ಷಗಳ ಅವಧಿಯನ್ನು ಎಂದಿಗೂ ನಿರ್ಧರಿಸಲಾಗಿಲ್ಲ. ಅದು ಸರಿಯಲ್ಲ. ಹೈಕಮಾಂಡ್ ನಮಗೆ ಹೇಳಿದ್ದು ಏನೆಂದರೆ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ, ನಾವು ಅದನ್ನು ಅನುಸರಿಸಬೇಕು. ನಮ್ಮದು ಹೈಕಮಾಂಡ್ ಪಕ್ಷ ಎಂದು ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಹೇಳಿದ್ದಾರೆ. ಅವರು ಏನು ಹೇಳಿದರೂ, ನಾವು ಅನುಸರಿಸಬೇಕು. ನಾನು ಮಾಡುತ್ತೇನೆ, ಮತ್ತು ಡಿಕೆ ಶಿವಕುಮಾರ್ ಕೂಡ ಮಾಡುತ್ತಾರೆ” ಎಂದು ಹೇಳಿದರು.ರಾಜ್ಯದಲ್ಲಿ ನಾಯಕತ್ವ ಕುರಿತಾಗಿ ಸುರ್ಜೇವಾಲಾ ಪ್ರಶ್ನೆ ಮಾಡಿದ್ದಾರೆ ಎಂಬ ಸುದ್ದಿಯನ್ನು ತಳ್ಳಿ ಹಾಕಿದ ಸಿಎಂ, “ನಾಯಕತ್ವ ವಿಚಾರವಾಗಿ ಸುರ್ಜೇವಾಲಾ ಯಾವದೇ ಪ್ರಶ್ನೆ ಎತ್ತಿಲ್ಲ. ಡಿಕೆ ಶಿವಕುಮಾರ್ ಅವರಿಗೆ ಬೆಂಬಲ ನೀಡುವ ಕೆಲವು ಶಾಸಕರು ಹಿಂದಿನಿಂದಲೂ ಇದ್ದಾರೆ, ಹೆಚ್ಚು ಮಂದಿ ಏನಿಲ್ಲ” ಎಂದರು.
ರಾಜ್ಯದ ಹಣಕಾಸು ವಿಚಾರದ ಬಗ್ಗೆಯೂ ಮಾತನಾಡಿದ ಸಿಎಂ, “ರಾಜ್ಯದಲ್ಲಿ ಹಣದ ಕೊರತೆಯಿಲ್ಲ. ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ, ನಾವು ಸಾಕಷ್ಟು ಹಣ ಹೊಂದಿದ್ದೇವೆ” ಎಂದರು.“2028 ರ ಚುನಾವಣೆಯಲ್ಲಿ ನಾನು ಕಾಂಗ್ರೆಸನ್ನು ಮುನ್ನಡೆಸುತ್ತೇನೆ. ಕರ್ನಾಟಕದಲ್ಲಿ, ರಾಜ್ಯದ ಜನರು ಸರ್ಕಾರದ ವಿರುದ್ಧ ಇಲ್ಲ. ಯಾವುದೇ ಆಡಳಿತ ವಿರೋಧಿ ಅಲೆ ಇಲ್ಲ. 2028 ರಲ್ಲಿಯೂ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ” ಎಂದು ಹೇಳುವ ಮೂಲಕ ಸಿದ್ದರಾಮಯ್ಯ ತಮ್ಮ ರಾಜಕೀಯ ಭವಿಷ್ಯವನ್ನು ಒತ್ತಿ ಹೇಳಿದರು.














































