ಬೆಂಗಳೂರು: ಚಾಮರಾಜನಗರದಲ್ಲಿ 888 ಅಡಿ ಎತ್ತರದ ಬುದ್ಧನ ಪ್ರತಿಮೆ ಸ್ಥಾಪನೆ ಯೋಜನೆಗೆ ಸೋಮವಾರ ಚಾಲನೆ ನೀಡಲಾಗಿದ್ದು ಈ ಪ್ರತಿಮೆಯು ವಿಶ್ವದಲ್ಲೇ ಅತಿ ದೊಡ್ಡದು ಎಂಬ ದಾಖಲೆ ಬರೆಯಲಿದೆ.ವಿಶ್ವ ಬೌದ್ಧ ಮಹಾ ಸಮ್ಮೇಳನ ಸಮಿತಿ, ಉಪಾಸಿಕ ಆ್ಯಂಡ್ ಉಪಾಸಕ ಚಾರಿಟಬಲ್ ಟ್ರಸ್ಟ್ ಹಾಗೂ ಇಂಟರ್ ನ್ಯಾಷನಲ್ ಬುದ್ದಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ನಾಗಸೇನಾ ವಿಹಾರ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂಟರ್ ನ್ಯಾಷನಲ್ ಬುದ್ದಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಗಳಾದ ಭಂತೆ ಬೋಧಿದತ್ತ ತೇರಾ ಅವರು ಯೋಜನೆಗೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, 2007ರಲ್ಲಿ ನಳಂದ ವಿಶ್ವವಿದ್ಯಾಲಯದ ಸ್ಥಳಕ್ಕೆ ಭೇಟಿ ನೀಡಿದಾಗ, ವಿದೇಶಿ ದಾಳಿಕೋರರ ಕಾರಣದಿಂದ ನಾವು ಕಳೆದುಕೊಂಡದ್ದು ಎಷ್ಟು ಅಗಾಧ ಪ್ರಮಾಣದ ಜ್ಞಾನ ಭಂಡಾರ ಎಂಬ ಅರಿವಾಯಿತು. 1193ರಲ್ಲಿ ಅಲ್ಲಿನ ಗ್ರಂಥಾಲಯ ಧರ್ಮಸಾಗರಕ್ಕೆ ದಾಳಿಕೋರರು ಬೆಂಕಿ ಹಚ್ಚಿದರು. ಈ ಬೆಂಕಿ 6 ತಿಂಗಳು ಉರಿಯಿತು ಎಂದರೆ ಅದರ ಅಗಾಧತೆಯನ್ನು ಊಹಿಸಿಕೊಳ್ಳಬಹುದು. ಇದೇ ರೀತಿ ಕೇವಲ 1 ವರ್ಷದಲ್ಲಿ 5 ವಿಶ್ವವಿದ್ಯಾಲಯಗಳನ್ನು ನಾಶಪಡಿಸಿದ್ದರು. ಇಂತಹದ್ದೆಲ್ಲ ಇತಿಹಾಸವನ್ನು ನಾವು ಮರೆತಿದ್ದೇವೆ. ಹಾಗಾಗಿ ಇತಿಹಾಸವನ್ನು ನೆನಪಿಸುವ ಕೆಲಸ ಆಗಬೇಕೆಂದು ನಳಂದ ಬೌದ್ಧ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಗುಜರಾತ್‌ನಲ್ಲಿ ಸರ್ದಾರ್ ವಲ್ಲಭ ಭಾಯ್ ಪಟೇಲರ ಏಕತಾ ಪ್ರತಿಮೆ ನಿರ್ಮಿಸಿದ ಸಂಸ್ಥೆಯೇ ಚಾಮರಾಜನಗರದ ಉತ್ತವಳ್ಳಿಯ ಪಂಚಶೀಲ ಬೆಟ್ಟದಲ್ಲಿ 888 ಅಡಿ ಎತ್ತರದ ಬುದ್ಧ ಪ್ರತಿಮೆಯನ್ನೂ ನಿರ್ಮಿಸಲಿದೆ. ಈ ಕಾರ್ಯ ಅಷ್ಟು ಸುಲಭವಲ್ಲದಿದ್ದರೂ ಈಗಾಗಲೆ ವಿಶ್ವದ ಅನೇಕ ದೇಶಗಳು, ನಾಯಕರು ಬೆಂಬಲ ಸೂಚಿಸಿರುವುದರಿಂದ ಸುಸೂತ್ರವಾಗಿ ನಡೆಯುವ ವಿಶ್ವಾಸವಿದೆ.ಬುದ್ಧನ ಸಂದೇಶಗಳು ಹಾಗೂ ಧರ್ಮವನ್ನು ಪ್ರಸಾರ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.ಇದೇ ವೇಳೆ ಬೆಂಗಳೂರಿನಿಂದ ಚಾಮರಾಜನಗರದವರೆಗಿನ 11ನೇ ಪಂಚಶೀಲ ಪಾದಯಾತ್ರೆಗೆ ಚಾಲನೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಎಂ.ವೆಂಕಟಸ್ವಾಮಿ, ಮಾವಳ್ಳಿ ಶಂಕರ್, ಕರ್ನಾಟಕ ಎಸ್‌ಸಿ-ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಜಿ.ಪವಿತ್ರಾ., ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಮತ್ತಿತರರಿದ್ದರು.












































