ದಸರಾ ಉದ್ಘಾಟನೆಗೆ ದೀಪಾ ಭಸ್ತಿ ಅವರನ್ನೇಕೆ ಕರೆದಿಲ್ಲ?: ಬಿ.ವೈ.ವಿಜಯೇಂದ್ರ

Picture of Savistara

Savistara

Bureau Report

ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಸರ್ಕಾರ ಆಯ್ಕೆ ಮಾಡಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ‌ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ”ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಕರೆಯುತ್ತಾರೆ. ದೀಪಾ ಭಸ್ತಿ ಅವರನ್ನು ಯಾಕೆ ಕರೆದಿಲ್ಲ?” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ‌ ಪ್ರಶ್ನಿಸಿದರು.ಬೆಂಗಳೂರಲ್ಲಿಂದು ಮಾತನಾಡಿದ ಅವರು, ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರಿಂದ ಈ ಬಾರಿಯ ದಸರಾ ಉದ್ಘಾಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ”ಸಿಎಂ ಅವರು ದಸರಾ ಉದ್ಘಾಟನೆ ವಿಚಾರದಲ್ಲಿ ಸ್ಪಷ್ಟನೆ ನೀಡಬೇಕು. ಯಾಕೆ ಬಾನು ಅವರನ್ನು ಮಾತ್ರ ದಸರಾಕ್ಕೆ ಕರೆದರು?. ಲೇಖಕಿ ದೀಪಾ ಭಸ್ತಿ ಅವರನ್ನೇಕೆ ಕರೆದಿಲ್ಲ. ಇದರ ಬಗ್ಗೆ ಸ್ಪಷ್ಟನೆ ನೀಡಬೇಕು. ನಿಸಾರ್ ಅಹಮದ್ ಅವರು ಉದ್ಘಾಟನೆ ಮಾಡಿರುವುದು ಬೇರೆ. ನಮ್ಮ ವಿಚಾರ ಒಪ್ಪಿ ಬರೋದಾದರೆ ಸ್ವಾಗತ, ಯಾರೇ ಉದ್ಘಾಟನೆ ಮಾಡಿದರೂ, ನಮ್ಮ ಸಂಸ್ಕೃತಿಯನ್ನು ಒಪ್ಪಿ ಬರುವುದಾದರೆ ಸ್ವಾಗತ” ಎಂದು ತಿಳಿಸಿದರು.

ಡಿಕೆಶಿ ಹೇಳಿಕೆಯನ್ನು ಭಗವಂತನೂ ಮೆಚ್ಚುವುದಿಲ್ಲ: ಚಾಮುಂಡಿ ಬೆಟ್ಟ ಕೇವಲ ಹಿಂದೂಗಳದ್ದಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ‌, ”ನಿಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಇದು ಯಾರನ್ನು ಖುಷಿಪಡಿಸಲು ಕೊಟ್ಟ ಹೇಳಿಕೆ?. ಇದು ಅಕ್ಷಮ್ಯ ಅಪರಾಧ. ಗಾಂಧಿ‌ ಕುಟುಂಬಕ್ಕೆ ಖುಷಿಪಡಿಸಲು ಹೇಳಿದ ಹೇಳಿಕೆಯಿದು. ರಾಮನಗರದಲ್ಲಿ‌ ಏಸು ಕ್ರಿಸ್ತನ ಪ್ರತಿಮೆ‌ ಮಾಡಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದರು. ಹೇಗಾದರೂ ಮಾಡಿ‌ ಗಾಂಧಿ‌ ಕುಟುಂಬವನ್ನು ಖುಷಿಪಡಿಸಲು ಯತ್ನ ಮಾಡುತ್ತಿದ್ದಾರೆ. ಈ ಹೇಳಿಕೆಯನ್ನು ಭಗವಂತ ಸಹ ಮೆಚ್ಚುವುದಿಲ್ಲ. ಸದನದಲ್ಲಿ ಸದಾ ವತ್ಸಲೇ.. ಆರ್​ಎಸ್​ಎಸ್​ ಗೀತೆ ಎಂದು ಹೇಳಿದರು. ನಂತರ ಅದರ ಬಗ್ಗೆ ಕ್ಷಮೆ ಕೇಳಿದರು. ಇದು ಒಡೆದು ಆಳುವ ನೀತಿ” ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದ ಎಸ್​​ಐಟಿ ಮೇಲೆ ನಂಬಿಕೆ ಇಲ್ಲ: ”ಧರ್ಮಸ್ಥಳದ ವಿಚಾರದಲ್ಲಿ ಕ್ಷೇತ್ರದ ಹೆಸರು ಹಾಳು ಮಾಡುವ ಯತ್ನ ನಡೆದರೂ, ಸರ್ಕಾರಕ್ಕೆ ಬಾಯಿ ಮುಚ್ಚಿಸುವ ಕೆಲಸ ಆಗಲೇ ಇಲ್ಲ. ಅಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಗೆ ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿದಾಗ ನಾವು ಸ್ವಾಗತ ಮಾಡಿದ್ದೇವೆ. ಆದರೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿದಾಗ ಒಂದು ಕೇಸ್ ಸಹ ಹಾಕಲಿಲ್ಲ. ಧರ್ಮಸ್ಥಳದ ವಿಚಾರದಲ್ಲಿ ಸರ್ಕಾರದ ಎಸ್​​ಐಟಿ ಮೇಲೆ ನಂಬಿಕೆ ಇಲ್ಲ. ಹೀಗಾಗಿ, ಈ ಪ್ರಕರಣವನ್ನು ಎನ್​ಐಎ ಅಥವಾ ಸಿಬಿಐ ಮೂಲಕ ತನಿಖೆ ಮಾಡಿಬೇಕು” ಎಂದು ಬಿ.ವೈ.ವಿಜಯೇಂದ್ರ‌ ಒತ್ತಾಯಿಸಿದರು.

ಡಿ.ಕೆ.ಶಿವಕುಮಾರ್ ಸ್ಪಷ್ಟನೆ ಏನು?: ಚಾಮುಂಡಿ ಬೆಟ್ಟದ ಕುರಿತು ತಾವು ನೀಡಿದ್ದ ಹೇಳಿಕೆ ಕುರಿತಂತೆ ಬುಧವಾರ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, “ಇದು ಸರ್ಕಾರದ ಆಸ್ತಿ. ಎಲ್ಲೂ ಹಿಂದೂ ಧರ್ಮದ್ದು ಅಂತ ಹೇಳಿಲ್ಲ” ಎಂದು ಹೇಳಿದ್ದರು. ಬೆಂಗಳೂರಿನಲ್ಲಿ ಮಾತನಾಡಿದ್ದ ಅವರು, “ಚಾಮುಂಡಿಯನ್ನು ನಾಡದೇವತೆ ಅಂತ ಕರೆಯುತ್ತೇವೆ. ರಾಜವಂಶಸ್ಥರು, ಸರ್ಕಾರ ಇಬ್ಬರೂ ಕರೆಯೋದು ಹಾಗೆ. ಇದು ಸರ್ಕಾರದ ಆಸ್ತಿ. ಎಲ್ಲೂ ಹಿಂದೂ ಧರ್ಮದ್ದು ಅಂತ ಹೇಳಿಲ್ಲ. ಹಿಂದೂಗಳು ಮಾತ್ರ ಬರಬೇಕು ಅಂತ ಇಲ್ಲ. ಎಲ್ಲಾ ಧರ್ಮದವರನ್ನೂ ಆಶೀರ್ವದಿಸುವ ದೇವತೆ. ನಾಡಹಬ್ಬಕ್ಕೆ ವಿದೇಶಿಗರೂ ಬರುತ್ತಾರೆ. ಬೇರೆ ಧರ್ಮದವರೂ ಬರುತ್ತಾರೆ” ಎಂದು ತಿಳಿಸಿದ್ದರು.

“ಮಹಾರಾಜರು ವಿದೇಶಿಯರನ್ನು ಆಹ್ವಾನಿಸುತ್ತಿದ್ದರು. ಅವರೆಲ್ಲ ಯಾವ ಸಮುದಾಯಕ್ಕೆ ಸೇರಿದವರು?. ಬಾನು ಮುಷ್ತಾಕ್ ಬೆಟ್ಟ ಹತ್ತಬಾರದು ಅಂದ್ರೆ ಹೇಗೆ?. ನೀರು, ಸೂರ್ಯ, ದೇವರಿಗೆ ಧರ್ಮವಿಲ್ಲ. ಕ್ರಿಶ್ಚಿಯನ್ನರ​ ಚರ್ಚ್, ಮುಸ್ಲಿಮರ ಮಸೀದಿಗೆ ನಮ್ಮನ್ನು ಬಿಡಲ್ವೇ?. ಗೊಮ್ಮಟಗಿರಿಗೆ ನಮ್ಮನ್ನು ಬಿಡುವುದಿಲ್ಲವೇ?. ಅವರು ನಮ್ಮನ್ನು ಬರಬಾರದು ಅಂತ ಹೇಳುತ್ತಾರಾ” ಎಂದು ಪ್ರಶ್ನಿಸಿದ್ದರು.ಅಲ್ಲದೆ, “ಯದುವೀರ್ ಅವರು ಬಿಜೆಪಿ ಸೇರಿದ ಬಳಿಕ ಇತಿಹಾಸವನ್ನು ಮರೆತಿದ್ದಾರೆ. ನಾವು ಗೃಹಲಕ್ಷ್ಮಿ‌ ಹಣವನ್ನು ಚಾಮುಂಡಿ ಮುಂದಿಟ್ಟು ಪೂಜಿಸಿದ್ದೆವು. ಎಲ್ಲಾ ಧರ್ಮದವರಿಗೆ ಗ್ಯಾರಂಟಿ ಹಣ ಕೊಡುತ್ತಿದ್ದೇವೆ. ಹೀಗಾಗಿ ಜಾತಿ, ಧರ್ಮದ ಬಣ್ಣ ಕಟ್ಟಬಾರದು” ಎಂದಿದ್ದರು.

[t4b-ticker]
error: Content is protected !!