ವಿಟ್ಲ ಸಮೀಪದ ಪ್ರತಿಷ್ಟಿತ ಸಹಕಾರಿ ಸಂಘದಲ್ಲಿ ನಿಯಮ ಮೀರಿ ಕೋಟ್ಯಾಂತರ ರೂಪಾಯಿ ಸಾಲ ಆರೋಪ ; ನಿನ್ನೆ ಮುಂದುವರಿದ ತನಿಖೆ – ಶಾಖಾ ಕಛೇರಿಗೂ ವಿಸ್ತರಣೆ

Picture of Savistara

Savistara

Bureau Report

ಪುತ್ತೂರು: ವಿಟ್ಲ ಹೋಬಳಿಯ ಪ್ರತಿಷ್ಠಿತ ಸಹಕಾರಿ ಸಂಘವೊಂದರಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಚಿನ್ನಾಭರಣ ಅಡಮಾನ ಸಾಲ ನೀಡಿದ ಆರೋಪದ ಕುರಿತು ತನಿಖೆ ತೀವ್ರಗೊಂಡಿದೆ. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ತನಿಖೆ ಇನ್ನೆರಡು ದಿನಗಳ ಕಾಲ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಆರೋಪ?

ಸಂಘದ ‘ಸಿ’ ಗ್ರೇಡ್ ಸದಸ್ಯತ್ವ ಹೊಂದಿರುವ ಯುವತಿಯೊಬ್ಬರಿಗೆ ನಿಯಮಬಾಹಿರವಾಗಿ 7.5 ಕೋಟಿ ರೂಪಾಯಿ ಮೊತ್ತದ ಚಿನ್ನಾಭರಣ ಅಡಮಾನ ಸಾಲ ನೀಡಲಾಗಿದೆ ಎಂದು ಸಂಘದ ಸದಸ್ಯರೊಬ್ಬರು ಮೈಸೂರು ಉಪ ವಿಭಾಗದ ಸಹಾಯಕ ರಿಜಿಸ್ಟ್ರಾ‌ರ್ ಮತ್ತು ಕರ್ನಾಟಕ ಲೋಕಾಯುಕ್ತಕ್ಕೆ ನೀಡಿದ್ದಾರೆ ಎನ್ನಲಾದ ದೂರಿನ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ತನಿಖಾ ಪ್ರಕ್ರಿಯೆ ಆರಂಭಗೊಂಡಿದೆ.

ತನಿಖೆಯ ಪ್ರಗತಿ

ಜಿಲ್ಲಾ ಕೇಂದ್ರ ಸಹಕಾರಿಯ ಅಧಿಕಾರಿಗಳ ತಂಡ ಬುಧವಾರ ಆರೋಪಕ್ಕೊಳಗಾದ ಸಂಘದ ಕೇಂದ್ರ ಕಚೇರಿಯಲ್ಲಿ ತನಿಖೆ ನಡೆಸಿತ್ತು. ಈ ವೇಳೆ, ಆರೋಪವನ್ನು ಮೇಲ್ನೋಟಕ್ಕೆ ಪುಷ್ಟಿಕರಿಸುವ ಕೆಲವೊಂದು ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಸಂಘದ ಕಬಕ ಶಾಖೆಯ ವ್ಯವಹಾರಗಳ ಮಾಹಿತಿಯನ್ನೂ ಸಂಗ್ರಹಿಸುವ ಕಾರ್ಯ ನಡೆದಿದೆ. ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶಾಖಾ ಮುಖ್ಯಸ್ಥ ಹಾಗೂ ಸಂಘದ ಅಧ್ಯಕ್ಷರು ಹಾಜರಿದ್ದರು.

ಅನುಮಾನಗಳಿಗೆ ಕಾರಣವಾದ ಅಂಶಗಳು

ಶಾಖಾ ಕಚೇರಿಯಲ್ಲಿ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಲ್ಲದ ಕೆಲವು ಉದ್ಯಮಿಗಳು ಹಾಜರಿದ್ದುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆರೋಪಿತ ಯುವತಿಗೆ ಮಾತ್ರವಲ್ಲದೆ, ಇನ್ನು ಹಲವು ಉದ್ಯಮಿಗಳಿಗೂ ನಿಯಮ ಮೀರಿ ಬೃಹತ್‌ ಮೊತ್ತದ ಸಾಲ ನೀಡಲಾಗಿದೆ ಎಂಬ ಅನುಮಾನಗಳು ಈ ಹಿಂದೆಯೇ ವ್ಯಕ್ತವಾಗಿದ್ದವು.ಸಂಘದಲ್ಲಿ ನಿಯಮ ಮೀರಿ ಸಾಲ ನೀಡಲು ವಿರೋಧ ವ್ಯಕ್ತಪಡಿಸಿದ ಕೆಲವರನ್ನು ಕಳೆದ ಕೆಲವು ತಿಂಗಳುಗಳಿಂದ ಸಂಘದ ಚಟುವಟಿಕೆಯಿಂದ ದೂರ ಇಡುವ ಪ್ರಯತ್ನ ನಡೆದಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ತನಿಖೆಯ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು ಹಾಜರಿಲ್ಲದಿರುವುದು ಅನುಮಾನಗಳನ್ನು ಇನ್ನಷ್ಟು ಹೆಚ್ಚಿಸಿದೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!