ವೆನೆಜುವೆಲಾದ ಪ್ರಮುಖ ವಿಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾದೊ ಅವರಿಗೆ 2025ನೇ ಸಾಲಿನ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿ ಒಲಿದೆ. ಇದರಿಂದ ಸ್ವಯಂ ಘೋಷಿತ ಶಾಂತಿದೂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರಿ ನಿರಾಶೆಯಾಗಿದೆ. ಈ ಬಾರಿಯ ನೊಬೆಲ್ ಶಾಂತಿ ಗೌರವ ತಮಗೇ ಸಿಗಬೇಕೆಂದು ಟ್ರಂಪ್ ನಿರೀಕ್ಷಿಸಿದ್ದರು. ಆದರೆ, ನಿರೀಕ್ಷೆ ಹುಸಿಯಾಗಿದೆ.
ಐರನ್ ಲೇಡಿ ಎಂದೂ ಕರೆಯಲ್ಪಡುವ ಮಚಾದೊ, ಟೈಮ್ ಮ್ಯಾಗಜೀನ್‌ನ ‘2025 ರ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು’ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಘೋಷಣೆ ಮಾಡುವ ಸಮಯದಲ್ಲಿ ನೊಬೆಲ್ ಸಮಿತಿಯ ಅಧ್ಯಕ್ಷರು ಮಚಾದೊ ಅವರನ್ನು “ಬೆಳೆಯುತ್ತಿರುವ ಕತ್ತಲೆಯ ಸಮಯದಲ್ಲಿ ಪ್ರಜಾಪ್ರಭುತ್ವದ ಜ್ವಾಲೆಯನ್ನು ಉರಿಯುವಂತೆ ಮಾಡುವ “ಶಾಂತಿಯ ಧೈರ್ಯಶಾಲಿ ಮತ್ತು ಬದ್ಧತೆಯ ಪ್ರತಿಪಾದಕಿ” ಎಂದು ಶ್ಲಾಘಿಸಿದರು.ಕಳೆದ ವರ್ಷದ ಚುನಾವಣೆಯ ನಂತರ ಮಚಾದೊ ತಲೆಮರೆಸಿಕೊಂಡಿದ್ದಾರೆ. ಆ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ನಿಕೋಲಸ್ ಮಡುರೊ ನಡೆಸಿದ್ದ ಅಕ್ರಮದ ವಿರುದ್ಧ ಮಚಾದೊ ಹೋರಾಡಿದ್ದರು. ಅವರ ಜೀವಕ್ಕೆ ನಿರಂತರ ಬೆದರಿಕೆಗಳಿದ್ದರೂ ಅವರು ತಮ್ಮ ದೇಶದಲ್ಲೇ ಉಳಿದಿದ್ದಾರೆ. ನೊಬೆಲ್ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿರುವುದು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ.
ಯಾರು ಈ ಮರಿಯಾ ಕೊರಿನಾ ಮಚಾದೊ?
ಅಂದಹಾಗೆ, ಮರಿಯಾ ಕೊರಿನಾ ಮಚಾದೊ ವೆನೆಜುವೆಲಾದ ಪ್ರಮುಖ ವಿಪಕ್ಷದ ನಾಯಕಿ, ರಾಜಕಾರಣಿ ಮತ್ತು ಕೈಗಾರಿಕಾ ಇಂಜಿನಿಯರ್ ಆಗಿದ್ದು, ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳಿಗಾಗಿ ದಶಕಗಳ ಕಾಲ ಪ್ರತಿಪಾದಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಇದೇ ಕಾರಣಕ್ಕೆ ನೊಬೆಲ್ ಶಾಂತಿ ಗೌರವಕ್ಕೆ ಭಾಜನರಾಗಿದ್ದಾರೆ. ಮಚಾದೊ ಅವರು 1967, ಅಕ್ಟೋಬರ್ 7 ರಂದು ಕ್ಯಾರಕಾಸ್‌ನಲ್ಲಿ ಜನಿಸಿದರು. ಅವರು ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಕ್ಯಾಥೋಲಿಕ್ ವಿಶ್ವವಿದ್ಯಾಲಯದ ಅಮೆರಿಕದಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದರು ಮತ್ತು ನಂತರ ಮಿಚಿಗನ್ ವಿಶ್ವವಿದ್ಯಾಲಯದಿಂದ ಹಣಕಾಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ರಾಜಕೀಯ ಮತ್ತು ಹೋರಾಟಗಳಲ್ಲಿ ಭಾಗವಹಿಸುವ ಮುನ್ನ ಕೆಲ ವರ್ಷಗಳ ಕಾಲ ಉದ್ಯಮಿಯಾಗಿ ಕಾರ್ಯ ನಿರ್ವಹಿಸಿದರು.1992ರಲ್ಲಿ, ಮಚಾದೊ ಅವರು ಅಟೆನಿಯಾ ಫೌಂಡೇಶನ್ ಅನ್ನು ಸ್ಥಾಪಿಸಿದರು. ಇದು ಬೀದಿ ಮಕ್ಕಳಿಗೆ ಅಭಯ ನೀಡುವುದು ಮತ್ತು ಶಿಕ್ಷಣವನ್ನು ಉತ್ತೇಜಿಸುವತ್ತ ಗಮನಹರಿಸಿದ ಲಾಭರಹಿತ ಸಂಸ್ಥೆಯಾಗಿದೆ. 2000 ದಶಕದ ಆರಂಭದಲ್ಲಿ ಮಚಾದೊ ಅವರು ರಾಜಕೀಯವನ್ನು ಪ್ರವೇಶಿಸಿದರು. ಹೂಗೋ ಚಾವೆಜ್ ಮತ್ತು ನಿಕೋಲಸ್ ಮಡುರೊ ಸರ್ಕಾರಗಳ ವಿರುದ್ಧದ ವಿಪಕ್ಷದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡರು. 2010 ರಲ್ಲಿ ವೆನೆಜುವೆಲಾದ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾದರು.
ಸರ್ವಾಧಿಕಾರತ್ವ, ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ದುರುಪಯೋಗದ ಬಗ್ಗೆ ನಿರಂತರವಾಗಿ ಧ್ವನಿ ಎತ್ತಿದರು. ಅಲ್ಲದೆ, ಅಕ್ರಮಗಳ ವಿರುದ್ಧ ನಿಂತು, ಯಾರಿಗೂ ಅಂಜದೇ ತೀವ್ರ ಟೀಕೆಗಳನ್ನು ಮಾಡುತ್ತಾ ಬಂದಿದ್ದಾರೆ. 2014 ರಲ್ಲಿ ಸಾರ್ವಜನಿಕ ಹುದ್ದೆಯನ್ನು ಹೊಂದುವುದನ್ನು ನಿಷೇಧಿಸುವುದು ಸೇರಿದಂತೆ ಕೆಲ ಕಿರುಕುಳವನ್ನು ಮಚಾದೊ ಅವರು ಸರ್ಕಾರದಿಂದ ಎದುರಿಸಿದರು. 2012 ರಲ್ಲಿ, ಅವರು ಹೆನ್ರಿಕ್ ಕ್ಯಾಪ್ರಿಲ್ಸ್ ಅವರನ್ನು ಬೆಂಬಲಿಸುವಲ್ಲಿ ಹಿಂದೆ ಸರಿಯುವ ಮೊದಲು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರು.ಮಚಾದೊ ಅವರು 2013 ರಲ್ಲಿ ಸ್ಥಾಪನೆಯಾದ ವೆಂಟೆ ವೆನೆಜುವೆಲಾ ಎಂಬ ಉದಾರವಾದಿ ರಾಜಕೀಯ ಪಕ್ಷದ ಸ್ಥಾಪಕ ಮತ್ತು ರಾಷ್ಟ್ರೀಯ ಸಂಯೋಜಕರಾಗಿದ್ದಾರೆ. ಇದು ಸ್ವಾತಂತ್ರ್ಯ, ಕಾನೂನಿನ ನಿಯಮ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಒತ್ತು ನೀಡುತ್ತದೆ. 2023ರ ಅಧ್ಯಕ್ಷೀಯ ಪ್ರಾಥಮಿಕ ಚುನಾವಣೆಗಳು ಸೇರಿದಂತೆ ಪ್ರಮುಖ ವಿಪಕ್ಷದ ಪ್ರಯತ್ನಗಳನ್ನು ಮಚಾದೊ ಅವರು ಸಂಘಟಿಸಿದರು. ಅಲ್ಲದೆ, ಅದರಲ್ಲಿ ಗೆಲುವು ಕೂಡ ಸಾಧಿಸಿದ್ದಾರೆ. ಸರ್ಕಾರದ ದಬ್ಬಾಳಿಕೆಯ ಹೊರತಾಗಿಯೂ ಮಡುರೊ ಆಡಳಿತಕ್ಕೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಮಚಾದೊ ಅವರು ಗುರುತಿಸಿಕೊಂಡಿದ್ದಾರೆ.
ನೋಬೆಲ್ ಶಾಂತಿ ನೀಡಿದ್ದೇಕೆ?
ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಮತ್ತು ಸರ್ವಾಧಿಕಾರದ ವಿರುದ್ಧದ ಅಹಿಂಸಾತ್ಮಕ ಹೋರಾಟ”ಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಮಚಾದೊ ಅವರಿಗೆ ನೀಡಲಾಗಿದೆ. ಪ್ರಜಾಪ್ರಭುತ್ವಕ್ಕೆ ಶಾಂತಿಯುತ ಪರಿವರ್ತನೆಗಳನ್ನು ಉತ್ತೇಜಿಸುವಲ್ಲಿ ಮತ್ತು ದಮನದ ನಡುವೆ ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಅವರ ಪಾತ್ರವನ್ನು ಗುರುತಿಸಲಾಗಿದೆ.
ಡೊನಾಲ್ಡ್ ಟ್ರಂಪ್‌ಗೆ ನಿರಾಸೆ
ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನು ತಮಗೆ ನೀಡಬೇಕೆಂದು ಟ್ರಂಪ್ ಬಯಸಿದ್ದರು. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ವಿಶ್ವದಲ್ಲಿ ಪ್ರಸ್ತುತ ಅನೇಕ ದೇಶಗಳಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಅದನ್ನು ತಿಳಿಗೊಳಿಸುವ ಪ್ರಯತ್ನವನ್ನು ಟ್ರಂಪ್ ಮಾಡುತ್ತಿದ್ದಾರೆ. ಈ ಹಾದಿಯಲ್ಲಿ ಅವರು ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವನ್ನು ನಾನೇ ನಿಲ್ಲಿಸಿದೇ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಇಸ್ರೇಲ್ ಮತ್ತು ಗಾಜಾ ನಡುವೆ ವರ್ಷಗಳಿಂದ ನಡೆಯುತ್ತಿರುವ ಸಂಘರ್ಷ ಕೆಲವು ದಿನಗಳ ಹಿಂದಷ್ಟೇ ಕೊನೆಗೊಂಡಿದ್ದು, ಇದಕ್ಕೂ ನಾನೇ ಕಾರಣ ಅನ್ನೋದು ಟ್ರಂಪ್ ಅವರ ವಾದ. ಇದಿಷ್ಟೇ ಅಲ್ಲದೆ, ಭಾರತದಲ್ಲಿ ಕಾಶ್ಮೀರದ ಪಹಲ್ಲಾಮ್‌ನಲ್ಲಿ ಈ ವರ್ಷ ಏಪ್ರಿಲ್ 22ರಂದು ಉಗ್ರರು ದಾಳಿ ನಡೆಸಿದರು. ಇದರಲ್ಲಿ 26 ಪ್ರವಾಸಿಗರು ಪ್ರಾಣ ಕಳೆದುಕೊಂಡರು.
ಬಳಿಕ ಇದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ನೂರಾರು ಉಗ್ರರನ್ನು ಸೆದೆಬಡಿಯಿತು. ಈ ವೇಳೆ ಪಾಕ್ ನೆಲದಲ್ಲಿದ್ದ ಉಗ್ರರ ತಾಣಗಳನ್ನು ತನ್ನ ನೆಲದಿಂದಲೇ ನಿಖರ ದಾಳಿಯ ಮೂಲಕ ಭಾರತೀಯ ಸೇನೆ ಉಡಾಯಿಸಿತು. ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣ ಉಂಟಾಯಿತು. ಕೆಲ ದಿನಗಳವರೆಗೆ ಉಭಯ ದೇಶಗಳು ಪರಸ್ಪರ ದಾಳಿಯಲ್ಲಿ ತೊಡಗಿದವು. ಬಳಿಕ ಕದನ ವಿರಾಮ ಘೋಷಣೆ ಮಾಡಿದವು. ಇದಕ್ಕೂ ನಾನೇ ಕಾರಣ ಎಂದು ಟ್ರಂಪ್ ಪ್ರತಿಪಾದಿಸಿದ್ದರು. ಇದು ಕೂಡ ಬಹಳ ಚರ್ಚೆಯಾಗಿತ್ತು. ಆದರೆ, ಟ್ರಂಪ್ ವಾದವನ್ನು ಭಾರತ ತಿರಸ್ಕರಿಸಿದೆ. ಈ ಕಾರಣಕ್ಕೆ ಟ್ರಂಪ್ ಭಾರತದ ವಿರುದ್ಧ ಸುಂಕ ಸಮರವನ್ನು ಸಾರಿದ್ದಾರೆ. ಇದಿಷ್ಟೇ
ಅಲ್ಲದೆ, ಟ್ರಂಪ್ ಅವರು ರಷ್ಯಾ ಮತ್ತು ಯೂಕ್ರೇನ್ ನಡುವೆ ತುಂಬಾ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಯುದ್ಧವನ್ನು ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದರ ಭಾಗವಾಗಿ ಉಭಯ ದೇಶಗಳ ನಾಯಕರ ಜೊತೆ ಈಗಾಗಲೇ ಮಾತುಕತೆಯನ್ನು ಸಹ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಕಾರಣದಿಂದ ತನಗೆ ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕೆಂದು ಟ್ರಂಪ್ ಬಯಸಿದ್ದರು. ತಮ್ಮನ್ನು ತಾವು ಶಾಂತಿದೂತ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದರು. ಆದರೆ, ಆ ನಿರೀಕ್ಷೆ ಇಂದು ಹುಸಿಯಾಗಿದೆ.












































