ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಒ ಅಮಾನತಿಗೆ ಕೆಎಸ್‌ಎಟಿ ತಡೆ, ಸರ್ಕಾರಕ್ಕೆ ಮತ್ತೊಂದು ಮುಖಭಂಗ

Picture of Savistara

Savistara

Bureau Report

ರಾಯಚೂರು: ಲಿಂಗಸುಗೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಅಮಾನತುಗೊಂಡಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರವೀಣ್ ಕುಮಾರ್ ಅವರ ಅಮಾನತು ಆದೇಶಕ್ಕೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್‌ಎಟಿ) ಗುರುವಾರ ತಡೆಯಾಜ್ಞೆ ನೀಡಿದೆ.

ರಾಜಕೀಯ ಒತ್ತಡದಿಂದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್‌ ಕುಮಾರ್‌ ಅವರನ್ನು ಏಕಪಕ್ಷೀಯವಾಗಿ ಅಮಾನತು ಮಾಡಲಾಗಿದೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯ ಕಾನೂನು ತಂಡವು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ಈ ಕ್ರಮವನ್ನು ಪ್ರಶ್ನಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿಯು, ರಾಜ್ಯ ಸರ್ಕಾರದ ಅಮಾನತು ಆದೇಶಕ್ಕೆ ಅಕ್ಟೋಬರ್‌ 30ರಂದು ತಡೆ ನೀಡಿದೆ.

ಈ ಬೆಳವಣಿಗೆಯ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮಾಹಿತಿ ನೀಡಿದ್ದು, “ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಅವರ ಮೇಲೆ ಹೇರಲಾಗಿದ್ದ ಏಕಪಕ್ಷೀಯ ಅಮಾನತು ಆದೇಶವನ್ನು ನಮ್ಮ ಕಚೇರಿಯ ಕಾನೂನು ತಂಡ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಮುಂದೆ ಪ್ರಶ್ನಿಸಿದ ಫಲವಾಗಿ, ರಾಜಕೀಯ ಒತ್ತಡದಿಂದ ಮಾಡಲಾಗಿದ್ದ ಅಮಾನತು ಆದೇಶಕ್ಕೆ ಇಂದು ಕೆಎಸ್‌ಎಟಿ ತಡೆ ನೀಡಿದೆ,” ಎಂದು ತಿಳಿಸಿದ್ದಾರೆ.

ಈ ಆದೇಶವು ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ ಎಚ್ಚರಿಕೆಯಾಗಿದ್ದು, ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ ಎಂದು ಅವರು ಬಣ್ಣಿಸಿದ್ದಾರೆ. “ಯಾವುದೇ ರೀತಿಯ ಬೆದರಿಕೆಯು, ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರ ನಿರ್ಮಾಣದ ಆದರ್ಶಗಳನ್ನು ತಡೆಯಲು ಸಾಧ್ಯವಿಲ್ಲ,” ಎಂದು ಅವರು ಹೇಳಿದ್ದಾರೆ.

ಈ ಕಾನೂನು ಹೋರಾಟದಲ್ಲಿ ಸಹಕಾರ ನೀಡಿದ ಹಿರಿಯ ವಕೀಲರಾದ ಪ್ರಭುಲಿಂಗ ನಾವದಗಿ ಅವರಿಗೆ ತೇಜಸ್ವಿ ಸೂರ್ಯ ಅವರು ಇದೇ ವೇಳೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಏನಿದು ಘಟನೆ?

ಅಕ್ಟೋಬರ್ ತಿಂಗಳಿನಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಆರ್‌ಎಸ್‌ಎಸ್‌ ಪಥಸಂಚಲನವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಖಾಕಿ ಪ್ಯಾಂಟ್‌, ಬಿಳಿ ಅಂಗಿ, ಟೋಪಿ ಧರಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಅವರು ಪಾಲ್ಗೊಂಡಿದ್ದರು.ಸರ್ಕಾರಿ ನೌಕರರಾಗಿ ಒಂದು ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಕಾರಣವಾಗಿಟ್ಟುಕೊಂಡು, ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಿ ಆದೇಶವನ್ನು ಹೊರಡಿಸಿದ್ದರು. ಇದು ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತಲ್ಲದೆ, ರಾಜಕೀಯ ವಾಕ್ಸಮರಕ್ಕೂ ಗುರಿಯಾಗಿತ್ತು.

[t4b-ticker]
error: Content is protected !!