ಅಜಿತ್ ಪವಾರ್ ಸಾವು ಪಿತೂರಿ ಆರೋಪ; ಕೊಳಕು ರಾಜಕೀಯ ಬೇಡ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಸಿಎಂ ಫಡ್ನವೀಸ್ ಕಿಡಿ

Picture of Savistara

Savistara

Bureau Report

ಮುಂಬೈ: ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಡಿಸಿಎಂ ಅಜಿತ್ ಪವಾರ್ ಸಾವು ಪಿತೂರಿಯಿಂದ ಕೂಡಿದ್ದು, ಈ ಕುರಿತು ಸುಪ್ರೀಂಕೋರ್ಟ್​ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕೊಳಕು ರಾಜಕೀಯ ಮಾಡಬೇಡಿ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ಎಎನ್​ಐ ಜೊತೆ ಮಾತನಾಡಿರುವ ಸಿಎಂ ಫಡ್ನವೀಸ್, ಹಿರಿಯ ನಾಯಕ ಶರದ್ ಪವಾರ್ ಕೂಡ ಘಟನೆಯನ್ನು ಆಕಸ್ಮಿಕ ಎಂದು ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರ ಹೇಳಿಕೆಗಳು ದುರದೃಷ್ಟಕರ, ವೈಯಕ್ತಿಕ ದುರಂತವನ್ನು ರಾಜಕೀಯಗೊಳಿಸುವುದಕ್ಕೆ ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ.ಇಂತಹ ಮಾತುಗಳಿಂದ ಸಾವಿನ ಮೇಲೂ ಕೊಳಕು ಮತ್ತು ಹೇಯ ರಾಜಕೀಯ ಮಾಡುವ ಯಾವ ಹಂತವನ್ನು ನಾವು ತಲುಪಿದ್ದೇವೆ. ನನಗೆ ತುಂಬಾ ದುಃಖವಾಗಿದೆ. ಅತ್ಯಂತ ಆಪ್ತ ಮತ್ತು ಪ್ರೀತಿಯ ನಾಯಕನ ಸಾವನ್ನು ರಾಜಕೀಯಗೊಳಿಸುವ ಮೂಲಕ ಅವಮಾನಿಸುವುದು ಸಂಪೂರ್ಣವಾಗಿ ತಪ್ಪು ಎಂದು ಹೇಳಿದ್ದಾರೆ.

ಅಜಿತ್ ಪವಾರ್ ದೊಡ್ಡಪ್ಪ ಶರದ್ ಪವಾರ್ ಸಹ, ಪಿತೂರಿ ಕೋನವನ್ನು ಸ್ಪಷ್ಟವಾಗಿ ತಿರಸ್ಕರಿಸಿ, ಇದು ಆಕಸ್ಮಿಕ ಅಪಘಾತ ಎಂದು ಹೇಳಿದ್ದಾರೆ. ಈ ನಷ್ಟವನ್ನು ಸರಿಪಡಿಸಲಾಗದು. ಆದರೆ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ಇದಕ್ಕೆ ರಾಜಕೀಯ ಬಣ್ಣ ನೀಡದಂತೆ ಒತ್ತಾಯಿಸಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದೇನು?

ಡಿಸಿಎಂ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಬಗ್ಗೆ ಸಂತಾಪ ಸೂಚಿಸಿದ್ದ ಸಿಎಂ ಮಮತಾ ಬ್ಯಾನರ್ಜಿ, ಇದೇ ವೇಳೆ ಅವರ ಸಾವಿರ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದರು. ಅವರು ಎನ್​ಡಿಎದಿಂದ ಹೊರಬರಲು ಯೋಚಿಸಿದ್ದರು ಎಂದು ಹೇಳಿ, ಅವರ ಸಾವಿನ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.

ಲಾಲು ಪ್ರಸಾದ್ ಯಾದವ್, ಅಖಿಲೇಶ್ ಯಾದವ್ ಹಾಗೂ ಪ್ರಕಾಶ್ ಅಂಬೇಡ್ಕರ್ ಸೇರಿ ಹಲವಾರು ವಿರೋಧ ಪಕ್ಷದ ನಾಯಕರು ಸಮಗ್ರ ತನಿಖೆ ನಡೆಸಬೇಕೆಂಬ ಮಮತಾ ಅವರ ಹೇಳಿಕೆಯನ್ನು ಬೆಂಬಲಿಸಿದ್ದರು.

[t4b-ticker]
error: Content is protected !!