ಲಖನೌ: ದೇಶಾದ್ಯಂತ ಯುಜಿಸಿ (UGC) ಹೊಸ ನಿಯಮಗಳ ವಿರುದ್ಧ ಸವರ್ಣೀಯ ಸಮುದಾಯಗಳು ಸಿಡಿದೆದ್ದಿರುವ ನಡುವೆಯೇ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath), ಗೋರಖ್‌ಪುರದಲ್ಲಿ ನೀಡಿದ ಭಾಷಣವು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ವಿಕಾಸದ ಹಾದಿಯಲ್ಲಿ ಅಡ್ಡಿಪಡಿಸುತ್ತಿರುವ ಪರಿವಾರವಾದಿ ಮತ್ತು ಜಾತಿವಾದಿ ಶಕ್ತಿಗಳ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಯೋಗಿ ನೀಡಿದ ಎಚ್ಚರಿಕೆ ಏನು..?
ಈ ಬಗ್ಗೆ ಗೋರಖ್‌ಪುರದಲ್ಲಿ ಫ್ಲೈಓವರ್ ಮತ್ತು ರೈಲ್ವೆ ಓವರ್‌ಬ್ರಿಡ್ಜ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಯೋಗಿ, ರಾಜ್ಯವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವಾಗ, ಕೆಲವು ಅದೃಶ್ಯ ಮಾಸ್ಟರ್‌ಗಳ ಬೆಂಬಲ ಹೊಂದಿರುವ ಶಕ್ತಿಗಳು ಗೊಂದಲ ಮೂಡಿಸಲು ಪ್ರಯತ್ನಿಸುತ್ತಿವೆ. ಜಾತಿ ಆಧಾರಿತ ರಾಜಕಾರಣ ಮಾಡುವವರು ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ. ಅಲ್ಲದೆ, 2017 ಕ್ಕಿಂತ ಮೊದಲು ಯುಪಿಯಲ್ಲಿ ನಡೆಯುತ್ತಿದ್ದ ದಂಗೆಗಳನ್ನು ಸ್ಮರಿಸಿದ ಯೋಗಿ, ಇಂದು ರಾಜ್ಯವು ದಂಗೆ ಮುಕ್ತ ಪ್ರದೇಶವಾಗಿದೆ ಎಂದಿದ್ದಾರೆ.
ಜಾತಿವಾದ ಮತ್ತು ಪರಿವಾರವಾದದ ವಿರುದ್ಧ ವಾಗ್ದಾಳಿ
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವಾಗ, ಕೆಲವು ಅದೃಶ್ಯ ಮಾಸ್ಟರ್‌ಗಳ ಕೈಗೊಂಬೆಗಳಾಗಿರುವ ಶಕ್ತಿಗಳು ಸಮಾಜದಲ್ಲಿ ಅಶಾಂತಿ ಮತ್ತು ಗೊಂದಲ ಮೂಡಿಸಲು ಪ್ರಯತ್ನಿಸುತ್ತಿವೆ. ಜಾತಿವಾದ ಮತ್ತು ಪರಿವಾರವಾದದ ರಾಜಕಾರಣ ಮಾಡುವವರು ಯಾವಾಗಲೂ ವಿಭಜನೆಯನ್ನೇ ಬಯಸುತ್ತಾರೆ. ಇವರು ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಅಭಿವೃದ್ಧಿಯ ಬದಲಿಗೆ ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುವುದೇ ಇವರ ಪರಮ ಗುರಿಯಾಗಿದೆ ಎಂದು ಯೋಗಿ ಕಿಡಿಕಾರಿದ್ದಾರೆ.
ದಂಗೆ ಮುಕ್ತ ಉತ್ತರ ಪ್ರದೇಶ
ನಿಮಗೆ ನೆನಪಿರಲಿ, 2017 ಕ್ಕಿಂತ ಮೊದಲು ಉತ್ತರ ಪ್ರದೇಶ ಹೇಗಿತ್ತು? ದಿನಬೆಳಗಾದರೆ ದಂಗೆಗಳು, ಗಲಭೆಗಳು ಮತ್ತು ಅರಾಜಕತೆ ತಾಂಡವವಾಡುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ನಾವು ಕಳೆದ ಏಳು ವರ್ಷಗಳಲ್ಲಿ ಉತ್ತರ ಪ್ರದೇಶವನ್ನು ದಂಗೆ ಮುಕ್ತ ರಾಜ್ಯವನ್ನಾಗಿ ಮಾಡಿದ್ದೇವೆ. ಇಂದು ನಮ್ಮ ರಾಜ್ಯದಲ್ಲಿ ಹಬ್ಬಗಳು ಶಾಂತಿಯುತವಾಗಿ ನಡೆಯುತ್ತವೆ, ಹೆಣ್ಣುಮಕ್ಕಳು ಭಯವಿಲ್ಲದೆ ಸಂಚರಿಸುತ್ತಾರೆ ಎಂದು ಸರ್ಕಾರದ ಸಾಧನೆಗಳ ಬಗ್ಗೆ ಯೋಗಿ ಮಾತನಾಡಿದ್ದಾರೆ.
ಅರಾಜಕತೆ ಸೃಷ್ಟಿಸುವವರಿಗೆ ಎಚ್ಚರಿಕೆ
ಯುಜಿಸಿ ನಿಯಮಗಳೋ ಅಥವಾ ಯಾವುದೇ ಆಡಳಿತಾತ್ಮಕ ಬದಲಾವಣೆಗಳನ್ನೋ ನೆಪವಾಗಿಟ್ಟುಕೊಂಡು ಯಾರು ಸಮಾಜದಲ್ಲಿ ಬೆಂಕಿ ಹಚ್ಚಲು ಪ್ರಯತ್ನಿಸುತ್ತಾರೋ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಅರಾಜಕತಾವಾದಿಗಳ ಬಗ್ಗೆ ನಮಗೆ ಮರುಕವಿಲ್ಲ. ಸಮಾಜವನ್ನು ಪ್ರಚೋದಿಸುವವರು ಅಭಿವೃದ್ಧಿಯ ವಿರೋಧಿಗಳು. ವಿಕಾಸ ಎಲ್ಲಿರುತ್ತದೆಯೋ ಅಲ್ಲಿ ಶಾಂತಿ ಇರಲೇಬೇಕು ಎಂದು ಯುಪಿ ಸಿಎಂ ಎಚ್ಚರಿಕೆ ನೀಡಿದ್ದಾರೆ.
ಅಭಿವೃದ್ಧಿಯೇ ನಮ್ಮ ಮಂತ್ರನಮ್ಮ ಸರ್ಕಾರಕ್ಕೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದು ಕೇವಲ ಘೋಷಣೆಯಲ್ಲ, ಅದು ನಮ್ಮ ಸಂಕಲ್ಪ. ನಾವು ಜಾತಿ ನೋಡಿ ರಸ್ತೆ ಮಾಡುವುದಿಲ್ಲ, ಧರ್ಮ ನೋಡಿ ವಿದ್ಯುತ್ ನೀಡುವುದಿಲ್ಲ. ಎಲ್ಲರಿಗೂ ಸಮಾನ ಅವಕಾಶ ಮತ್ತು ಸುರಕ್ಷತೆ ನೀಡುವುದೇ ನಮ್ಮ ಧರ್ಮ. ಈ ವಿಭಜಕ ಶಕ್ತಿಗಳ ಮಾತುಗಳಿಗೆ ಮರುಳಾಗದೆ, ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಸಾಗೋಣ ಎಂದು ಯೋಗಿ ಹೇಳಿದ್ದಾರೆ.ಯುಜಿಸಿ ನಿಯಮಗಳು ಮತ್ತು ಸವರ್ಣೀಯರ ಆಕ್ರೋಶಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯ ತಡೆಯಲು ಜಾರಿಗೆ ತಂದಿರುವ ಯುಜಿಸಿ ಇಕ್ವಿಟಿ ರೆಗ್ಯುಲೇಶನ್ಸ್ 2026 ಈಗ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ನಿಯಮಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಗುರಿಯಾಗಿಸುತ್ತಿವೆ ಎಂದು ಆರೋಪಿಸಿ ಉತ್ತರ ಪ್ರದೇಶದಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಬರೇಲಿ ಸಿಟಿ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ ಅವರು ಈ ನಿಯಮಗಳನ್ನು ಪ್ರತಿಭಟಿಸಿ ರಾಜೀನಾಮೆ ನೀಡಿರುವುದು ಮತ್ತು ಹಲವು ಬಿಜೆಪಿ ನಾಯಕರು ಪಕ್ಷ ತೊರೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.ದಿಲ್ಲಿ vs ಲಕ್ನೋ: ಬಿಜೆಪಿಯಲ್ಲಿ ಭಿನ್ನಮತದ ಮುನ್ಸೂಚನೆ..?ಯೋಗಿ ಆದಿತ್ಯನಾಥ್ ಅವರ ಈ ಭಾಷಣವು ಕೇವಲ ವಿರೋಧ ಪಕ್ಷಗಳಿಗಲ್ಲ, ಬದಲಾಗಿ ಕೇಂದ್ರದ ಕೆಲವು ನಿರ್ಧಾರಗಳಿಗೆ ನೀಡಿದ ಪರೋಕ್ಷ ಎಚ್ಚರಿಕೆಯೇ ಎಂಬ ಪ್ರಶ್ನೆ ಮೂಡಿದೆ. ಮೋದಿ-ಷಾ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರಗಳಿಂದ ಸವರ್ಣೀಯ ವೋಟ್ ಬ್ಯಾಂಕ್ ಕೈತಪ್ಪುತ್ತಿರುವುದು ಯೋಗಿ ಅವರಿಗೆ ಆತಂಕ ತಂದಿದೆ ಎನ್ನಲಾಗುತ್ತಿದೆ. ಜಾತಿವಾದಿ ಶಕ್ತಿಗಳು ಅರಾಜಕತೆ ಸೃಷ್ಟಿಸುತ್ತಿವೆ ಎಂದು ಹೇಳುವ ಮೂಲಕ, ಅವರು ತಮ್ಮ ಆಡಳಿತದ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆಯೇ ಅಥವಾ ಕೇಂದ್ರದ ಹಸ್ತಕ್ಷೇಪದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ.
ವಿದ್ಯಾರ್ಥಿಗಳ ಕಿಚ್ಚಿಗೆ ಕಾರಣವೇನು..?
ತಾರತಮ್ಯದ ಸಂಕೇಚಿತ ವ್ಯಾಖ್ಯಾನ
ಹೊಸ ನಿಯಮದ ಪ್ರಕಾರ, ಜಾತಿ ಆಧಾರಿತ ತಾರತಮ್ಯ ಎಂದರೆ ಕೇವಲ SC, ST ಮತ್ತು OBC ಸಮುದಾಯಗಳ ವಿರುದ್ಧ ನಡೆಯುವ ತಾರತಮ್ಯ ಮಾತ್ರ ಎಂದು ವ್ಯಾಖ್ಯಾನಿಸಲಾಗಿದೆ. ಇದು ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಈ ರಕ್ಷಣಾ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಸಾಮಾನ್ಯ ವರ್ಗದವರೂ ಕೂಡ ತಾರತಮ್ಯಕ್ಕೆ ಒಳಗಾಗಬಹುದು, ಆದರೆ ಅವರಿಗೆ ಈ ಕಾಯ್ದೆಯಡಿ ದೂರು ನೀಡಲು ಅವಕಾಶವಿಲ್ಲ ಎನ್ನುವುದು ಪ್ರತಿಭಟನಾಕಾರರ ಪ್ರಮುಖ ಆಕ್ಷೇಪವಾಗಿದೆ.
ಸುಳ್ಳು ದೂರುಗಳ ಭಯ ಮತ್ತು ಪುರಾವೆಯ ಹೊರೆ
ಈ ನಿಯಮಗಳು ದೂರುದಾರರಿಗೆ ಹೆಚ್ಚಿನ ಒತ್ತು ನೀಡುತ್ತವೆ ಮತ್ತು ಆರೋಪಿತರ ಮೇಲೆ ತಪ್ಪಿತಸ್ಥ ಎಂಬ ಹಣೆಪಟ್ಟಿಯನ್ನು ಬೇಗನೆ ಹಚ್ಚುತ್ತವೆ ಎಂದು ಪ್ರತಿಭಟನಾಕಾರರು ವಾದಿಸುತ್ತಿದ್ದಾರೆ. ಸುಳ್ಳು ಅಥವಾ ದುರುದ್ದೇಶಪೂರಿತ ದೂರುಗಳನ್ನು ನೀಡುವವರ ವಿರುದ್ಧ ಯಾವುದೇ ದಂಡದ ನಿಬಂಧನೆಗಳು ಇಲ್ಲದಿರುವುದು ಶೈಕ್ಷಣಿಕ ಸಂಸ್ಥೆಗಳಲ್ಲಿ ಭಯದ ವಾತಾವರಣ ನಿರ್ಮಿಸಬಹುದು ಎಂಬ ಆತಂಕವಿದೆ.
ಇಕ್ವಿಟಿ ಸ್ಕ್ವಾಡ್ ಮತ್ತು ನಿರಂತರ ಕಣ್ಗಾವಲು
ಕ್ಯಾಂಪಸ್‌ಗಳಲ್ಲಿ ತಾರತಮ್ಯ ತಡೆಯಲು ಇಕ್ವಿಟಿ ಸ್ಕ್ವಾಡ್‌ಗಳನ್ನು ರಚಿಸಬೇಕು ಎಂದು ನಿಯಮ ಹೇಳುತ್ತದೆ. ಇದು ವಿದ್ಯಾರ್ಥಿಗಳ ಮೇಲೆ ಸದಾ ಕಣ್ಗಾವಲು ಇರಿಸಿದಂತೆ ಇರುತ್ತದೆ ಮತ್ತು ಕ್ಯಾಂಪಸ್‌ನ ಮುಕ್ತ ವಾತಾವರಣಕ್ಕೆ ಧಕ್ಕೆ ತರುತ್ತದೆ ಎಂಬುದು ವಿದ್ಯಾರ್ಥಿ ಸಂಘಟನೆಗಳ ಆರೋಪವಾಗಿದೆ.
ಕಠಿಣ ಶಿಕ್ಷೆ ಮತ್ತು ಕಾಲಮಿತಿ
ಯಾವುದೇ ದೂರು ದಾಖಲಾದ 24 ಗಂಟೆಗಳೊಳಗೆ ಸಮಿತಿ ಸಭೆ ಸೇರಬೇಕು ಮತ್ತು 15 ದಿನಗಳಲ್ಲಿ ತನಿಖೆ ಮುಗಿಸಬೇಕು ಎಂಬ ಕಠಿಣ ನಿಯಮವಿದೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅಮಾನತು, ಉಚ್ಚಾಟನೆ ಅಥವಾ ಪೊಲೀಸ್ ಕ್ರಮದಂತಹ ಶಿಕ್ಷೆಗಳಿವೆ. ಸಮರ್ಪಕ ತನಿಖೆಯಿಲ್ಲದೆ ಅವಸರದ ನಿರ್ಧಾರಗಳು ಅಮಾಯಕರ ಬದುಕನ್ನು ಹಾಳುಮಾಡಬಹುದು ಎಂಬುದು ಟೀಕಾಕಾರರ ವಾದವಾಗಿದೆ.
ಸಮಿತಿಯಲ್ಲಿ ಪ್ರಾತಿನಿಧ್ಯದ ಕೊರತೆ
ದೂರುಗಳನ್ನು ವಿಚಾರಣೆ ನಡೆಸುವ ಇಕ್ವಿಟಿ ಸಮಿತಿಯಲ್ಲಿ ಸಾಮಾನ್ಯ ವರ್ಗದ ಪ್ರತಿನಿಧಿಗಳಿಗೆ ಕಡ್ಡಾಯ ಸ್ಥಾನವಿಲ್ಲ. ಕೇವಲ ಮೀಸಲಾತಿ ವರ್ಗದವರು ಮತ್ತು ಮಹಿಳೆಯರಿಗೆ ಮಾತ್ರ ಪ್ರಾತಿನಿಧ್ಯ ನೀಡಲಾಗಿದೆ, ಇದು ಏಕಪಕ್ಷೀಯ ತೀರ್ಪಿಗೆ ದಾರಿ ಮಾಡಿಕೊಡಬಹುದು ಎಂಬ ಅಸಮಾಧಾನವಿದೆ.
ಯುಜಿಸಿ ಹೊಸ ನಿಯಮದಲ್ಲಿ ಏನಿದೆ..?
ಒಬಿಸಿ (OBC) ವರ್ಗದ ಸೇರ್ಪಡೆ: ಈ ಬಾರಿಯ ಅತ್ಯಂತ ದೊಡ್ಡ ಬದಲಾವಣೆ ಎಂದರೆ, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳ ಜೊತೆಗೆ ಈಗ ಇತರೆ ಹಿಂದುಳಿದ ವರ್ಗಗಳ (OBC) ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಕೂಡ ತಾರತಮ್ಯದ ವಿರುದ್ಧದ ರಕ್ಷಣಾ ವ್ಯಾಪ್ತಿಗೆ ತರಲಾಗಿದೆ.
ಸಮಾನ ಅವಕಾಶ ಕೇಂದ್ರ: ಪ್ರತಿಯೊಂದು ಕಾಲೇಜು ಮತ್ತು ವಿಶ್ವವಿದ್ಯಾಲಯವು ಕಡ್ಡಾಯವಾಗಿ ಈ ಕೇಂದ್ರವನ್ನು ಸ್ಥಾಪಿಸಬೇಕು. ಇದು ತಾರತಮ್ಯದ ದೂರುಗಳನ್ನು ಸ್ವೀಕರಿಸುವುದು ಮಾತ್ರವಲ್ಲದೆ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಆರ್ಥಿಕ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ಈಕ್ವಿಟಿ ಸಮಿತಿ: ಪ್ರತಿ ಸಂಸ್ಥೆಯಲ್ಲಿ ಸಂಸ್ಥೆಯ ಮುಖ್ಯಸ್ಥರ ನೇತೃತ್ವದಲ್ಲಿ 10 ಸದಸ್ಯರ ಸಮಿತಿ ಇರಬೇಕು. ಇದರಲ್ಲಿ SC, ST, OBC, ಮಹಿಳೆಯರು ಮತ್ತು ಅಂಗವಿಕಲರಿಗೆ ಕಡ್ಡಾಯ ಪ್ರಾತಿನಿಧ್ಯ ಇರಬೇಕು.
ಈಕ್ವಿಟಿ ಸ್ಕ್ವಾಡ್‌ಗಳು: ಕ್ಯಾಂಪಸ್‌ಗಳಲ್ಲಿ ತಾರತಮ್ಯ ನಡೆಯದಂತೆ ನಿಗಾ ಇಡಲು ಮತ್ತು ತಕ್ಷಣದ ಪ್ರತಿಕ್ರಿಯೆ ನೀಡಲು ಈ ತಂಡಗಳು ಸದಾ ಕಾರ್ಯನಿರ್ವಹಿಸುತ್ತಿರಬೇಕು.
ಸಮಯ ಮಿತಿ ಮತ್ತು ಕಟ್ಟುನಿಟ್ಟಿನ ಕ್ರಮ:ದೂರು ಬಂದ 24 ಗಂಟೆಗಳೊಳಗೆ ಈಕ್ವಿಟಿ ಸಮಿತಿ ಸಭೆ ಸೇರಬೇಕು.ದೂರಿನ ತನಿಖಾ ವರದಿಯನ್ನು 15 ಕೆಲಸದ ದಿನಗಳೊಳಗೆ ಸಲ್ಲಿಸಬೇಕು.ಸಂಸ್ಥೆಯ ಮುಖ್ಯಸ್ಥರು 7 ದಿನಗಳೊಳಗೆ ಕ್ರಮ ಕೈಗೊಳ್ಳಬೇಕು.
24/7 ಸಹಾಯವಾಣಿ: ವಿದ್ಯಾರ್ಥಿಗಳು ಯಾವುದೇ ಸಮಯದಲ್ಲಿ ದೂರು ನೀಡಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಹೆಲ್ಪ್‌ಲೈನ್ ಮತ್ತು ಆನ್‌ಲೈನ್ ಪೋರ್ಟಲ್ ಇರಬೇಕು.
ಸಂಸ್ಥೆಗಳ ಮೇಲೆ ದಂಡ: ನಿಯಮ ಉಲ್ಲಂಘಿಸುವ ಕಾಲೇಜುಗಳಿಗೆ ಯುಜಿಸಿ ಅನುದಾನ ಕಡಿತ, ಮಾನ್ಯತೆ ರದ್ದು ಅಥವಾ ಕೋರ್ಸ್‌ಗಳನ್ನು ನಡೆಸದಂತೆ ನಿಷೇಧ ಹೇರುವ ಅಧಿಕಾರವನ್ನು ಯುಜಿಸಿ ಹೊಂದಿದೆ,












































