ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಧಾನ ಬೆಳೆ ಅಡಿಕೆಯಾಗಿದ್ದು, ಅಡಿಕೆ ಕೃಷಿಕರ ಹಿತರಕ್ಷಣೆಗಾಗಿ, ಅಡಿಕೆ ದರ ಕೆ.ಜಿಗೆ ರೂ. 30 ರವರೆಗೆ ಕುಸಿದಿದ್ದ ಸಂದರ್ಭದಲ್ಲಿ ಉಭಯ ಜಿಲ್ಲೆಗಳ ಸಹಕಾರಿಗಳು ಮತ್ತು ಅಡಿಕೆ ಬೆಳೆಗಾರರು ಸೇರಿ, “ಸಹಕಾರ ರತ್ನ” ದಿವಂಗತ ವಾರಣಾಶಿ ಸುಬ್ರಾಯ ಭಟ್ಟರ ಹಾಗೂ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ “ಸಹಕಾರ ರತ್ನ” ಡಾ। ಎಂ. ಎನ್. ರಾಜೇಂದ್ರ ಕುಮಾರ್ ಇವರ ಮಾರ್ಗದರ್ಶನದೊಂದಿಗೆ “ಮಂಗಳೂರು ಕೃಷಿಕರ ಸಹಕಾರಿ ಸಂಘ, ನಿಯಮಿತ – ಮಾಸ್ ಲಿಮಿಟೆಡ್, 2011ರಲ್ಲಿ ಸ್ಥಾಪನೆಯಾಯಿತು.
ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯ ಸ್ಥಿರತೆಗಾಗಿ, ಕೃಷಿಕರ ಹಿತರಕ್ಷಣೆಗಾಗಿ ಇಂದಿನವರೆಗೂ ತನ್ನ ಸಾಧನೆಗಳನ್ನು ಮಾಡುತ್ತಾ ಬಂದಿದ್ದು, ಸಂಘವು ಪ್ರಕೃತ ರೂ. 2.16 ಕೋಟಿ ಪಾಲುಬಂಡವಾಳವನ್ನೂ, 5815 ಸದಸ್ಯರನ್ನೂ ಹೊಂದಿದ್ದು, ಬೈಕಂಪಾಡಿಯಲ್ಲಿ ಸ್ವಂತ ಕೇಂದ್ರ ಕಛೇರಿಯನ್ನೂ, ಸುಸಜ್ಜಿತವಾದ ಅಡಿಕೆ ಸಂಸ್ಕರಣೆಯ ಗೋದಾಮನ್ನೂ ಹೊಂದಿದೆ. 2024ರ ಮಾ. 13ರಿದ “ಸಹಕಾರ ರತ್ನ” ರೋ। ಶ್ರೀ ಕೆ. ಸೀತಾರಾಮ ರೈ ಸವಣೂರು, ಇವರು ಕೃಷಿಕ ಸದಸ್ಯರ ಹಿತರಕ್ಷಣೆಗೆ ಪಣ ತೊಟ್ಟು, ಸಂಸ್ಥೆಯ ಪ್ರಗತಿಗೂ ದೃಢ ಸಂಕಲ್ಪ ಮಾಡಿ, ಅಧ್ಯಕ್ಷರಾಗಿ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಕೆ. ಸೀತಾರಾಮ ರೈಯವರು ಅಧ್ಯಕ್ಷತೆ ವಹಿಸಿದ ನಂತರದ ಎರಡು ವರ್ಷಗಳ ಅವಧಿಯಲ್ಲೇ, ವ್ಯವಹಾರವನ್ನು ಹೆಚ್ಚಿಸುವುದರ ಮೂಲಕ ಮೊದಲೇ ಸಂಕಲ್ಪಿಸಿದಂತೆ ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಕೇಂದ್ರವನ್ನು ಪ್ರಾರಂಭಿಸಿದರು. ಅಲ್ಲದೇ ಕಾವು, ನಿಂತಿಕಲ್ ಮತ್ತು ಉಬರಡ್ಕ ಮಿತ್ತೂರು ಈ ಸ್ಥಳಗಳಲ್ಲಿ ಹೊಸತಾಗಿ ಅಡಿಕೆ ಖರೀದಿ ಶಾಖೆಗಳನ್ನೂ ಪ್ರಾರಂಭಿಸಿ ಕೃಷಿಕರಿಗೆ ಸ್ಥಳೀಯವಾಗಿ ಮಾರುಕಟ್ಟೆಯನ್ನು ಒದಗಿಸುತ್ತಾ ವ್ಯವಹಾರ ವೃದ್ಧಿಗೆ ತನ್ನ ಸಂಕಲ್ಪದಂತೆ ಕಾರ್ಯಪ್ರವೃತ್ತರಾದರು. ಈಗ ಒಟ್ಟು 12 ಶಾಖೆಗಳಿವೆ. ಅಡಿಕೆ ಖರೀದಿಗೆ ಅಧಿಕಾರಿಗಳನ್ನು ಮಾಡುವ ಬಗ್ಗೆ ಕೃಷಿಕ ಕುಟುಂಬ ಹಿನ್ನಲೆಯ ಪದವೀಧರ ಅಭ್ಯರ್ಥಿಗಳನ್ನು ಟ್ರೈನೀಗಳಾಗಿ ಸೇರಿಸಿಕೊಂಡು ಈಗಾಗಲೇ ಅವರಿಗೆ ತರಬೇತಿ ನೀಡಿ ಖರೀದಿ ಅಧಿಕಾರಿಗಳನ್ನಾಗಿಸಿದೆ. ಮುಂದಿನ ದಿನಗಳಲ್ಲಿ ಸಂಘದ ವಿಸ್ತರಣೆಗೋಸ್ಕರ, ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸುವ ಬಗ್ಗೆ ಇನ್ನೂ ಕೆಲವು ಪದವೀಧರ ಅಭ್ಯರ್ಥಿಗಳನ್ನು ಸ್ಟೈಪೆಂಡ್ ಸಹಿತ ಟ್ರೈನೀಗಳಾಗಿ ಸೇರಿಸಿ ಅಡಿಕೆಯಲ್ಲಿ ತರಬೇತಿ ನೀಡಿ ಅಧಿಕಾರಿಗಳನ್ನಾಗಿಸುವ ಯೋಜನೆ ಇದ್ದು ಪ್ರಕ್ರಿಯೆಗಳು ಪ್ರಾರಂಭಗೊಂಡಿವೆ.
ಸಂಸ್ಥೆಯು ಕೃಷಿಕರ ಅಡಿಕೆಯನ್ನು ಉತ್ತಮ ಬೆಲೆಗೆ ಖರೀದಿಸಿ, ಅಡಿಕೆಯನ್ನು ಸಂಸ್ಕರಿಸಿ, ಉತ್ತರ ಭಾರತಕ್ಕೆ ಮಾರಾಟ ಮಾಡುವ ಮೂಲಕ ಅಡಿಕೆ ಬೆಲೆಯಲ್ಲಿ ಸ್ಥಿರತೆ ಹಾಗೂ ವರ್ಷವಿಡೀ ಕೃಷಿಕರ ಅಡಿಕೆ ಖರೀದಿಗೆ ಸ್ಥಳೀಯವಾಗಿ ಮಾರುಕಟ್ಟೆಯನ್ನು ಒದಗಿಸುತ್ತಾ ಇದೆ. ಸಂಸ್ಥೆಯು ಮಾರಾಟ ಮಾಡುವ ಗುಣಮಟ್ಟಕ್ಕೋಸ್ಕರ ಪ್ರತ್ಯೇಕ ಮಾರ್ಕ್ ಹೊಂದಿದ್ದು, ತನ್ನ ಅಡಿಕೆಯ ಗುಣಮಟ್ಟದಿಂದ ಜನಪ್ರಿಯತೆ ಗಳಿಸಿಕೊಂಡಿದೆ. ಗ್ರಾಹಕರ ಅನುಕೂಲತೆಗೋಸ್ಕರ ಅಡಿಕೆಯನ್ನು 1 ಕೆ.ಜಿ ಪ್ಯಾಕೆಟ್ ಮೂಲಕವೂ ಮಾರಾಟ ಮಾಡುತ್ತಿದ್ದು, ಈ ಪ್ಯಾಕೆಟ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ.ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ, ಮಂಗಳೂರು ಮಾಸ್ ಲಿಮಿಟೆಡ್ ಇವರಿಂದ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ರ ಸಹಕಾರದೊಂದಿಗೆಅಡಿಕೆ ಖರೀದಿ ಕೇಂದ್ರದಉದ್ಘಾಟನಾ ಸಮಾರಂಭ ಫೆ. 16ರಂದು ಬೆಳಿಗ್ಗೆ ಗಂಟೆ 10:00ಕ್ಕೆ ‘ಸಮೃದ್ಧಿ ಸಭಾಭವನ’ ನಡೆಯಲಿದೆ.ಶಾಸಕಿ ಕು. ಭಾಗೀರಥಿ ಮುರುಳ್ಯ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಸ್ ಲಿ. ಅಧ್ಯಕ್ಷ ಸಹಕಾರ ರತ್ನ ರೋ ಕೆ. ಸೀತಾರಾಮ ರೈ ಸವಣೂರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ ರೈ ಬಾಲೊಟ್ಟು, ಹೊಸಮಠ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ ಸನಿಲ, ಪುತ್ತೂರು ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ರಘು ಎಸ್.ಎಂ ಮತ್ತು ಕುಟ್ರುಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಮನ ಭಾಗವಹಿಸಲಿದ್ದಾರೆ.












































