ನವದೆಹಲಿ: ದೇಶದ ಪತ್ರಿಕೋದ್ಯಮ ರಂಗದ ಭೀಷ್ಮ ಎಂದೇಕರೆಯಲ್ಪಡುತ್ತಿದ್ದ ಹಿರಿಯ ಪತ್ರಕರ್ತ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ. ದುವಾ (88) ಅವರು ಬುಧವಾರ (ಮಾ. 4) ನಿಧನ ಹೊಂದಿದರು.ಕಳೆದ ಮೂರು ವಾರಗಳಿಂದ ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.ಮೃತರ ಅಂತ್ಯಕ್ರಿಯೆಯು ಗುರುವಾರ (ಮಾ. 5) ನವದೆಹಲಿಯ ಲೋಧಿ ರಸ್ತೆ ಚಿತಾಗಾರದಲ್ಲಿ ನಡೆಯಲಿದೆ.
ಅಪ್ರತಿಮ ವೃತ್ತಿಜೀವನ
1937ರ ಜುಲೈ 1ರಂದು ಜನಿಸಿದ ದುವಾ ಅವರು ಭಾರತದ ಪತ್ರಿಕೋದ್ಯಮದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದರು. ದೇಶದ ಪ್ರಮುಖ ಮೂರು ರಾಷ್ಟ್ರೀಯ ದಿನಪತ್ರಿಕೆಗಳಾದ ‘ದಿ ಹಿಂದೂಸ್ತಾನ್ ಟೈಮ್ಸ್’, ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಮತ್ತು ‘ದಿ ಟ್ರಿಬ್ಯೂನ್’ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಅಪರೂಪದ ಹೆಗ್ಗಳಿಕೆ ಇವರದ್ದಾಗಿತ್ತು. ಸಂಪಾದಕೀಯ ಸ್ವಾತಂತ್ರ್ಯ ಮತ್ತು ರಾಜಕೀಯ ವಿಶ್ಲೇಷಣೆಗಳಲ್ಲಿ ಅವರು ಎಂದಿಗೂ ರಾಜಿ ಮಾಡಿಕೊಂಡವರಲ್ಲ.
ಪ್ರಧಾನಿಗಳ ಸಲಹೆಗಾರ:
ಮಾಜಿ ಪ್ರಧಾನಿಗಳಾದ ಅಟಲ್ಬಿಹಾರಿ ವಾಜಪೇಯಿ ಹಾಗೂ ಎಚ್.ಡಿ. ದೇವೇಗೌಡ ಅವರಿಗೆ ಮಾಧ್ಯಮ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.2001 ರಿಂದ 2003ರವರೆಗೆ ಡೆನ್ಮಾರ್ಕ್‌ನಲ್ಲಿ ಭಾರತದ ರಾಯಭಾರಿಯಾಗಿದ್ದರು.2009 ರಿಂದ 2015ರವರೆಗೆ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿ ವಿದೇಶಾಂಗ ವ್ಯವಹಾರ ಮತ್ತು ರಾಷ್ಟ್ರೀಯ ಭದ್ರತಾ ಸಮಿತಿಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದರು.
ಗೌರವ-ಪುರಸ್ಕಾರಗಳು:
ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಸೇವೆಗಾಗಿ ಕೇಂದ್ರ ಸರ್ಕಾರ ಇವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಭೂಷಣ’ ನೀಡಿ ಗೌರವಿಸಿತ್ತು. ಇದರೊಂದಿಗೆ ಪಂಜಾಬ್ ಮತ್ತು ಕುರುಕ್ಷೇತ್ರ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ (D.Litt) ಪದವಿಗೂ ಭಾಜನರಾಗಿದ್ದರು.ದುವಾ ಅವರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ರಾಜಕೀಯ ಮತ್ತು ಮಾಧ್ಯಮ ರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.













































