ವಿತ್ತೀಯ ಶಿಸ್ತಿಲ್ಲದ, ರಾಜ್ಯವನ್ನು ಸಾಲದ ಬಿಕ್ಕಟ್ಟಿಗೆ ಸಿಲುಕಿಸಿದ ದೂರದೃಷ್ಟಿಹೀನ ಬಜೆಟ್ : ಸಂಸದ ಕ್ಯಾ.ಚೌಟ

Picture of Savistara

Savistara

Bureau Report

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಆಯವ್ಯಯವು ರಾಜ್ಯದ ಆರ್ಥಿಕ ಭವಿಷ್ಯವನ್ನು ಅಪಾಯಕ್ಕೆ ತಳ್ಳಿರುವುದು ಮಾತ್ರವಲ್ಲದೆ ಕರಾವಳಿ ಭಾಗದ ಆಶೋತ್ತರಗಳಿಗೂ ತಣ್ಣೀರೆರಚುವ ಕೆಲಸ ಮಾಡಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀವ್ರವಾಗಿ ಟೀಕಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಸಂಸದರು, ಬಜೆಟ್‌ನಲ್ಲಿ ದಾಖಲಾಗಿರುವ 22,000 ಕೋಟಿ ರೂ.ಗಳ ಬೃಹತ್ ರೆವೆನ್ಯೂ ಕೊರತೆಯು ಕಾಂಗ್ರೆಸ್ ಸರ್ಕಾರದ ದಿವಾಳಿತನ ತೋರಿಸುತ್ತಿದ್ದು, ದಿನನಿತ್ಯದ ಆಡಳಿತಾತ್ಮಕ ವೆಚ್ಚಗಳಿಗೂ ಸಾಲದ ಹಣವನ್ನೇ ಅವಲಂಬಿಸಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. 17 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳಿಗೆ ಬಂಡವಾಳ ಆದಾಯದ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಮಾತ್ರ ಬಳಸಬೇಕೆಂಬ ಸಾಮಾನ್ಯ ಜ್ಞಾನವಿದ್ದರೂ, ಇಷ್ಟು ದೊಡ್ಡ ಮಟ್ಟದ ಸಾಲದ ಮೊತ್ತವನ್ನು ದೈನಂದಿನ ಖರ್ಚಿಗೆ ವ್ಯಯಿಸುತ್ತಿರುವುದು ರಾಜ್ಯದ ಹಿತದೃಷ್ಟಿಯಿಂದ ಭೂಷಣವಲ್ಲ ಎಂದು ಹೇಳಿದ್ದಾರೆ.

ಕರಾವಳಿ ಭಾಗದ ಅಭಿವೃದ್ಧಿಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ದೊಡ್ಡ ಮಟ್ಟದ ಯೋಚನೆ ಇಲ್ಲದಿರುವುದು ಈ ಬಜೆಟ್‌ನಲ್ಲಿ ಎದ್ದು ಕಾಣುತ್ತಿದೆ. ಬೆಂಗಳೂರಿಗೆ ಪರ್ಯಾಯವಾಗಿ ಮಂಗಳೂರನ್ನು ಅಂತರಾಷ್ಟ್ರೀಯ ಐಟಿ ಹಬ್ ಆಗಿ ರೂಪಿಸಲು ಪೂರಕವಾದ ಬಂದರು, ವಿಮಾನ ನಿಲ್ದಾಣ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಂತಹ ಸಕಲ ಸೌಲಭ್ಯಗಳಿದ್ದರೂ ಸರ್ಕಾರ ಇದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದೆ. ಮಧ್ಯಪ್ರಾಚ್ಯ ದೇಶಗಳ ನಿಕಟ ಸಂಪರ್ಕವಿರುವ ಮಂಗಳೂರನ್ನು ಐಟಿ ಹಬ್ ಆಗಿ ಆಯ್ಕೆ ಮಾಡಿದ್ದರೆ ಅನಿವಾಸಿ ಭಾರತೀಯರ ಹೂಡಿಕೆಗೆ ಬಹಳ ದೊಡ್ಡ ಪ್ರೋತ್ಸಾಹ ಸಿಗುತ್ತಿತ್ತು. ಹೀಗಾಗಿ ಸರ್ಕಾರದ ಪ್ರಾದೇಶಿಕ ಅಸಮತೋಲನದ ನೀತಿಯನ್ನು ಎತ್ತಿ ತೋರಿಸುತ್ತಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಅಡಿಕೆ ಮತ್ತು ತೆಂಗಿನ ರೋಗ ನಿಯಂತ್ರಣಕ್ಕೆ 10 ಕೋಟಿ ರೂಪಾಯಿ ಮೀಸಲಿಟ್ಟಿರುವುದನ್ನು ಸ್ವಾಗತಿಸಿದ ಸಂಸದರು, ಕರಾವಳಿಯ ಬೆಳೆಗಾರರು ಸಂಕಷ್ಟದಲ್ಲಿರುವ ಈ ಸಂಧಿಕಾಲದಲ್ಲಿ ಸರ್ಕಾರ ಕೇವಲ ಘೋಷಣೆಗೆ ಸೀಮಿತವಾಗದೆ, ಕೂಡಲೇ ಕಾರ್ಯಯೋಜನೆ ಸಿದ್ಧಪಡಿಸಿ ಅದರ ಅನುಕೂಲ ರೈತರಿಗೆ ನೇರ ತಲುಪಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ರಾಜ್ಯದ ಜಿಎಸ್‌ಟಿ ಸಂಗ್ರಹದ ಗುರಿಯಲ್ಲಿ ಸುಮಾರು 14,000 ಕೋಟಿ ರೂ.ಗಳಷ್ಟು ಖೋತಾ ಕಂಡುಬಂದಿರುವುದು ರಾಜ್ಯದ ಆರ್ಥಿಕ ಚಟುವಟಿಕೆಯಲ್ಲಿ ಕುಸಿತ ಉಂಟಾಗಿರುವುದನ್ನು ಸೂಚಿಸುತ್ತದೆ. ಬಜೆಟ್ ಅಂದಾಜಿಗಿಂತ ಪರಿಷ್ಕೃತ ಲೆಕ್ಕಾಚಾರ ಇಷ್ಟು ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿರುವುದು ಸರ್ಕಾರದ ಆರ್ಥಿಕ ವೈಫಲ್ಯದ ಸಂಕೇತವಾಗಿದೆ. ಅಲ್ಲದೆ, ಜಿಲ್ಲೆಗೆ ಈ ಹಿಂದೆ ಘೋಷಣೆಯಾಗಿದ್ದ ಮೆಡಿಕಲ್ ಕಾಲೇಜಿನ ಬಗ್ಗೆ ಬಜೆಟ್‌ನಲ್ಲಿ ಅನುದಾನ ಬಿಡುಗಡೆಯ ಪ್ರಸ್ತಾಪ ಇಲ್ಲದಿರುವುದು ಕರಾವಳಿ ಜನತೆಗೆ ಮಾಡಿದ ವಂಚನೆಯಾಗಿದೆ ಎಂದು ಕ್ಯಾ. ಬ್ರಿಜೇಶ್ ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]
error: Content is protected !!