ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಶ್ರೀ ಸತ್ಯಸಾಯಿ ಪ್ರೇಮ ವಾಹಿನಿ ದಿವ್ಯ ರಥ ಯಾತ್ರೆಯ ಭವ್ಯ ರಥವು ಫೆ.8 ರಂದು ಸುಳ್ಯ ಜ್ಯೋತಿ ವೃತ್ತಕ್ಕೆ ಆಗಮನವಾಯಿತು.ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಅಧ್ಯಕ್ಷರಾದ ಡಾ ಕೆ ವಿ ಚಿದಾನಂದರವರು ರಥಕ್ಕೆ ಪುಷ್ಪ ಮಾಲೆ ಅರ್ಪಿಸುವ ಮೂಲಕ ಭವ್ಯ ಸ್ವಾಗತವನ್ನು ಮಾಡಿದರು.
ಈ ಸಂದರ್ಭದಲ್ಲಿ ಸುಳ್ಯ ಶ್ರೀ ಸತ್ಯಸಾಯಿ ಸೇವಾ ಸಂಘದ ಮುಖ್ಯಸ್ಥರುಗಳಾದ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಡಾ. ಹರಿಪ್ರಸಾದ್ ತುದಿಯಡ್ಕ, ಸತ್ಯಪ್ರಸಾದ್ ಕುರುಂಜಿ, ಡಾ. ಸವಿತಾ, ಡಾ.ಸಾಯಿ ಗೀತಾ, ಡಾ. ಎನ್ ಜ್ಞಾನೇಶ್, ಸಾಯಿ ಪ್ರಸನ್ನ ಸೇರಿದಂತೆ ವಿವಿಧ ಗಣ್ಯರುಗಳು ಉಪಸ್ಥಿತರಿದ್ದರು.
ಬಳಿಕ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ ಭವ್ಯ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಡಾ. ಕೆ ವಿ ಚಿದಾನಂದರವರು ಶ್ರೀ ಸತ್ಯ ಸಾಯಿಬಾಬಾ ಮೂರ್ತಿಯ ಪಾದಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಡಾ. ಸಾಯಿ ಪ್ರಸನ್ನ ಬಳಗದವರಿಂದ ಪ್ರಾರ್ಥನೆ ನಡೆಯಿತು.ಸತ್ಯಸಾಯಿ ಸೇವಾ ಸಂಸ್ಥೆಗಳ ದಕ್ಷಿಣ ಕನ್ನಡ ಜಿಲ್ಲಾ ಯುವ ಸಂಚಾಲಕ ಉಮೇಶ್ ಬಿ ಹೂಲಿ ಯವರು ಪ್ರಾಸ್ತವಿಕ ಮಾತನಾಡಿದರು.ಡಾ. ಕೆ ವಿ ಚಿದಾನಂದರವರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಸ್ಟರ್ ಕಿಶೋರ್ ಭಾರದ್ವಾಜ್ ರವರಿಂದ ಶಂಖನಾದ ನಡೆಯಿತು. ರಾಜ್ಯ ಸಂಪನ್ಮೂಲ ವ್ಯಕ್ತಿ ಜಗನ್ನಾಥ ನಾಡಿಗೆರ ರವರು ದಿಕ್ಕೂಚಿ ಭಾಷಣವನ್ನು ಮಾಡಿ ಶ್ರೀ ಸತ್ಯ ಸಾಯಿ ಬಾಬಾ ರವರ ಮಹಿಮೆಯ ಕುರಿತು ಮಾಹಿತಿ ನೀಡಿದರು. ಮನುಷ್ಯರಲ್ಲಿ ದೈವ ಪ್ರೇಮವನ್ನು ಜಾಗೃತಗೊಳಿಸುವುದು ಬಾಬಾರವರ ಮುಖ್ಯ ಗುರಿಯಾಗಿತ್ತು.ಸ್ವಾಮಿಯ ದಿವ್ಯ ಸಂದೇಶವನ್ನು ಅರಿತು ನಾವೆಲ್ಲರೂ ಬಾಳಬೇಕಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಹೊರದೇಶಗಳಲ್ಲಿ ಯುದ್ಧಗಳು ನಡೆಯುತ್ತಿದ್ದು ಇದಕ್ಕೆಲ್ಲ ಮನುಷ್ಯರ ಮನಸ್ಸಿನಾಳದಲ್ಲಿರುವ ಆಕ್ರೋಶ ಕೋಪಗಳೇ ಕಾರಣ. ಪ್ರೀತಿ ಪ್ರೇಮ ಮನಸ್ಸಿನಲ್ಲಿ ಬರಬೇಕು. ಆದ್ದರಿಂದ ಜಗತ್ತು ಶಾಂತಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಬಾಬಾರವರ ಸಂದೇಶವೇ
ಪ್ರೇಮ ಸಂದೇಶವಾಗಿತ್ತು. ಜಾತಿ ಮತ ಭೇದ ಭಾವವಿಲ್ಲದೆ ಸರ್ವವರನ್ನು ಪ್ರೀತಿಸುವ ಮತ್ತು ಸರ್ವರಿಗೂ ಸೇವೆಯನ್ನು ನೀಡುವ ಅದರಲ್ಲೂ ವಿಶೇಷವಾಗಿ ಸಮಾಜದಲ್ಲಿ ಆರೋಗ್ಯ ಶಿಕ್ಷಣ ಆಹಾರ ಆಧ್ಯಾತ್ಮಿಕ ಮುಂತಾದ ಮಹಾನ್ ಸೇವೆಗಳನ್ನು ನೀಡುವ ಮಹತ್ಕಾರ್ಯವನ್ನು ಸ್ವಾಮೀಜಿಗಳು ಮಾಡಿಕೊಂಡು ಬಂದಿದ್ದರು. ಆದ್ದರಿಂದ ಭಕ್ತಾದಿಗಳು ತಮ್ಮ ಎಲ್ಲಾ ಆರಾಧನೆಗಳಲ್ಲಿ ಸ್ವಾಮಿಯವರ ಪೂಜೆಯನ್ನು ಮಾಡುವ ಮೂಲಕ ಅವರನ್ನು ಸ್ಮರಿಸಿಕೊಳ್ಳಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಕರ್ನಾಟಕ ಉತ್ತರ ಭಾಗದ ರಾಜ್ಯಾಧ್ಯಕ್ಷರಾದ ಎಮ್ ಪದ್ಮನಾಭ ಪೈ, ಕರ್ನಾಟಕ ಉತ್ತರ ಭಾಗದ ಮಹಿಳಾ ಸೇವಾ ಸಂಯೋಜಕರಾದ ಶ್ರೀಮತಿ ಪ್ರಿಯ ಪಿ ಪೈ, ಶ್ರೀ ಚನ್ನಕೇಶವ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತಸರ ರಾದ ಹರಪ್ರಸಾದ್ ತುದಿಯಡ್ಕ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಪ್ರಸನ್ನ ಎನ್ ಭಟ್, ಭಗವಾನ್ ಸತ್ಯಸಾಯಿ ಟ್ರಸ್ಟಿನ ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀನಾರಾಯಣ ಕೋಟೆ, ಮುಖ್ಯಸ್ಥರಾದ ಡಾ. ಎನ್ ಎ ಜ್ಞಾನೇಶ್ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಸ್ವಾಮಿಯ ದಿವ್ಯ ವಾಣಿ ಬಗ್ಗೆ ದಿವ್ಯ ಉಪನ್ಯಾಸ, ಮಹಾ ಮಂಗಳಾರತಿ, ಪ್ರಸಾದ ಭೋಜನೆ ಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.ಪುರೋಹಿತ ಬ್ರಹ್ಮಶ್ರೀ ನಾಗರಾಜ್ ಭಟ್ ಮತ್ತು ಅವರ ಬಳಗದಿಂದ ಮಂಗಳ ಘೋಷ ನಡೆಯಿತು.ಡಾ. ಸಾಯಿ ಗೀತಾ ಜ್ಞಾನೇಶ್ ರವರು ಸರ್ವರನ್ನು ಸ್ವಾಗತಿಸಿ ಉಪನ್ಯಾಸಕರಾದ ಬೇಬಿ ವಿದ್ಯಾ ಬಿ ಬಿ ಕಾರ್ಯಕ್ರಮ ನಿರೂಪಿಸಿ ಪ್ರಕಾಶ್ ಬಿಬಿ ವಂದಿಸಿದರು.ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.ಶ್ರೀ ಸತ್ಯಸಾಯಿ ವಿದ್ಯಾಜ್ಯೋತಿ ಶಾಲೆಯ ಹಾಗೂ ಇತರ ಶಾಲೆಗಳ ಮಕ್ಕಳಿಂದ ಭಜನೆ ನಡೆಯಿತು.













































