
ಸುಬ್ರಮಣ್ಯದ ಕುಮಾರ ಪರ್ವತ ಚಾರಣ ಬೆಳಗ್ಗೆ 5.30 ಗಂಟೆಗೆ ಆರಂಭಿಸಬೇಕೆಂದು ಶಾಸಕಿ ಭಾಗೀರಥಿ ಮುರುಳ್ಯ ವಿಧಾನ ಸಭೆಯಲ್ಲಿ ಪ್ರಶ್ನೆ ಮಾಡಿದ್ದು ಅದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಪೂರಕವಾಗಿ ಸ್ಪಂದಿಸರುವುದಾಗಿ ತಿಳಿದು ಬಂದಿದೆ.
ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕಿ ಭಾಗೀರಥಿ ಮುರುಳ್ಯ, ಸುಬ್ರಹ್ಮಣ್ಯದಿಂದ, ಕುಮಾರ ಪರ್ವತಕ್ಕೆ ಚಾರಣ ಹೋಗಲು ವ್ಯವಸ್ಥೆ ಬದಲಾಗಿದೆ. ಬೆಳಗ್ಗೆ 5 ಗಂಟೆ ಬದಲಾಗಿ, ಬೆಳಗ್ಗೆ 6 ಗಂಟೆಗೆ ಚಾರಣಕ್ಕೆ ಹೋಗಲು ಬಿಡಲಾಗ್ತಿದೆ. ಇದರಿಂದ ಶಿಖರಕ್ಕೆ ತಲುಪಲು ಸಮಯ ವ್ಯತ್ಯಾಸ ಆಗುತ್ತಿದೆ. ಶೇಷಗಿರಿ ಪರ್ವತಕ್ಕೆ ಹೋಗಲು ಬಿಡುತ್ತಿಲ್ಲ. ಹಾಗಾಗಿ, ಮೊದಲಿನಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸಚಿವ ಈಶ್ವರ್ ಖಂಡ್ರೆ ಉತ್ತರಿಸುತ್ತಾ, ಸುಬ್ರಹ್ಮಣ್ಯದಿಂದ ಕುಮಾರ ಪರ್ವತ ಚಾರಣ ಮಾಡಿ ವಾಪಸಾಗಲು ಎರಡು ದಿನ ಬೇಕು. ಹೋದವರು ಅಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಅಲ್ಲಿ ಹೋಗುವ ಪ್ರವಾಸಿಗರ ರಕ್ಷಣೆಗೆ ಸಮಸ್ಯೆ ಇತ್ತು. ಕಾಡು ಪ್ರಾಣಿಗಳಿರುವುದರಿಂದ,
ಉಳಿದುಕೊಳ್ಳಲು ಅವಕಾಶ ಇಲ್ಲ.
ಸಮಯ ಬದಲಾವಣೆ ಮಾಡಲಾಗಿದೆ. 19 ಕಿ. ಮೀ. ಚಾರಣಕ್ಕೆ 10 ಗಂಟೆ ಬೇಕಿದೆ. ಒಟ್ಟು 24 ಕಿ.ಮೀ ದೂರ ಇದೆ. ಚಾರಣಿಗರು ಬೆಳಗ್ಗೆ ಹೊರಟವರು, ಸಂಜೆ ಆರು ಗಂಟೆಗೆ ವಾಪಸು ಬರಬೇಕು ಅಂತ ಬದಲಾವಣೆಗಳನ್ನು ಮಾಡಿದ್ದೇವೆ ಎಂದರು.
2-3 ಸಾವಿರ ಪ್ರಯಾಣಿಕರು ಒಂದೆಡೆ ಸೇರಿದ್ರೆ ಸಮಸ್ಯೆ ಆಗಲಿದೆ. ಬೇಸಿಗೆಯಲ್ಲಿ ಕಾಳ್ಗಿಚ್ಚು ಆಗುವ ಕಾರಣ ಬಿಟ್ಟಿಲ್ಲ. ಸಮಸ್ಯೆ ಆಗಬಾರದು ಅಂತ ಬೇಕು ಅಂತಲೇ ತಡೆದಿದ್ದೇವೆ. ಚಾರಣವನ್ನು ಬೆಳಗ್ಗೆ 5.30 ಗಂಟೆಗೆ ಆರಂಭಿಸುತ್ತೇವೆ. ಆದರೆ ಸಂಜೆ 6 ಗಂಟೆಯೊಳಗೆ ವಾಪಸ್ ಆಗಬೇಕು ಎಂದು ಇದೇ ವೇಳೆ ಪ್ರಕಟಿಸಿದರು.













































