ಪಾಟ್ನಾ: ರಾಜ್ಯಸಭೆ ಚುನಾವಣೆಯಲ್ಲಿ ವಿಪಕ್ಷಗಳ ಇಂಡಿಯಾ ಕೂಟಕ್ಕೆ ಭಾರೀ ಹಿನ್ನಡೆಯಾಗಿದ್ದು, 2 ರಾಜ್ಯಗಳಲ್ಲಿ ಒಕ್ಕೂಟದ ನಿಲುವಿಗೆ ತದ್ವಿರುದ್ಧವಾಗಿ ಮತದಾನ ನಡೆದಿದೆ. ಬಿಹಾರದಲ್ಲಿ ನಾಲ್ವರು ಶಾಸಕರು ಮತದಾನದಿಂದ ದೂರ ಉಳಿದರೆ, ಒಡಿಶಾದಲ್ಲಿ ಐವರು ಶಾಸಕರು ಅಡ್ಡಮತದಾನ ಮಾಡಿದ್ದಾರೆ.ಬಿಹಾರದಲ್ಲಿ 3 ಕಾಂಗ್ರೆಸ್ ಶಾಸಕರು ಹಾಗೂ ಓರ್ವ ಆರ್‌ಜೆಡಿ ಶಾಸಕರು ಮತದಾನದಿಂದ ದೂರ ಉಳಿದಿದ್ದಾರೆ. ಹೀಗಾಗಿ ಬಿಹಾರದಲ್ಲಿ ಎಲ್ಲಾ 5 ಸ್ಥಾನಗಳು ಎನ್‌ಡಿಎ ಪಾಲಾಗಿವೆ. ನಾಲ್ವರು ಶಾಸಕರು ಮತದಾನದಿಂದ ದೂರ ಉಳಿದ ಪರಿಣಾಮ ವಿಪಕ್ಷದ ಅಭ್ಯರ್ಥಿ ಗೆಲುವು ಅಸಾಧ್ಯವಾಗಿದ್ದು, 5ನೇ ಸ್ಥಾನ ಎನ್‌ಡಿಎ ತೆಕ್ಕೆಗೆ ಸೇರಿದೆ.ಬಿಹಾರದಲ್ಲಿ ಜೆಡಿಯುನಿಂದ ನಿತೀಶ್ ಕುಮಾರ್, ರಾಮ್‌ನಾಥ್ ಠಾಕೂರ್, ಬಿಜೆಪಿಯಿಂದ ನಿತಿನ್ ನವೀನ್, ಉಪೇಂದ್ರ ಕುಶ್ವಾಹ, ಶಿವೇಶ್ ರಾಮ್ ಗೆದ್ದಿದ್ದಾರೆ. ಇದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಬಹುದೊಡ್ಡ ಹಿನ್ನಡೆಯನ್ನು ತಂದೊಡ್ಡಿದೆ. ನಮ್ಮ ಪಕ್ಷದವರೇ ಎಸಗಿದ ದ್ರೋಹದಿಂದಾಗಿ ರಾಜ್ಯಸಭಾ ಸ್ಥಾನವನ್ನು ನಾವು ಕಳೆದುಕೊಂಡೆವು ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ಒಡಿಶಾದಲ್ಲಿ ಅಡ್ಡ ಮತದಾನ: ಒಡಿಶಾದ 4 ರಾಜ್ಯಸಭಾ ಸ್ಥಾನಗಳಿಗೆ 5 ಮಂದಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ರಮೇಶ್ ಜೇನಾ, ದಶರತಿ ಗೊಮಾಂಗೋ, ಸೋಫಿಯಾ ಫಿರ್ದೋಸ್ ಬಿಜೆಪಿಯ ಪರವಾಗಿ ಮತ ಹಾಕಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಹೇಳಿದ್ದಾರೆ. ಅಲ್ಲದೇ ಬಿಜೆಡಿಯ ಇಬ್ಬರು ಶಾಸಕರು ಸಹ ಬಿಜೆಪಿ ಪರವಾಗಿ ಮತದಾನ ಮಾಡಿದ್ದಾರೆ. ಇಲ್ಲಿ ಓರ್ವ ಅಭ್ಯರ್ಥಿಯನ್ನು ಗೆಲ್ಲಿಸಲು 30 ಮತಗಳ ಅವಶ್ಯಕತೆ ಇದ್ದು, ಬಿಜೆಪಿ 82 ಮತಗಳನ್ನು ಹೊಂದಿದೆ.ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿದ ಬಳಿಕವೂ ಬಿಜೆಪಿ ಬಳಿ 22 ಮತ ಉಳಿಯಲಿದ್ದು, ಮತ್ತೋರ್ವನನ್ನು ಗೆಲ್ಲಿಸಲು 8 ಮತಗಳ ಅವಶ್ಯಕತೆ ಇದೆ. ಮೂವರು ಪಕ್ಷೇತರ ಅಭ್ಯರ್ಥಿಗಳು ಈಗಾಗಲೇ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹೀಗಾಗಿ 4ರಲ್ಲಿ 3 ಸ್ಥಾನ ಎನ್‌ಡಿಎ ಪಾಲಾಗುವ ಸಂಭವವಿದೆ. ಒಟ್ಟು 37 ರಾಜ್ಯಸಭಾ ಸ್ಥಾನಗಳು ಖಾಲಿಯಾಗಿದ್ದವು, ಇದರಲ್ಲಿ 26 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರೆ, 11 ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಯಿತು. ಇದರಲ್ಲಿ 8 ಸ್ಥಾನಗಳು ಎನ್‌ಡಿಎ ಗೆದ್ದಿದ್ದರೆ, 1 ಸ್ಥಾನ ಬಿಜೆಡಿ ಪಾಲಾಗಿದೆ. ಹರ್ಯಾಣದ 2 ಸ್ಥಾನಗಳ ಫಲಿತಾಂಶವನ್ನೂ ತಡ ರಾತ್ರಿಯವರೆಗೂ ಆಯೋಗ ಪ್ರಕಟಿಸಿರಲಿಲ್ಲ.
ಹರ್ಯಾಣದಲ್ಲಿ ತಡ ರಾತ್ರಿ ಮತ ಎಣಿಕೆ:ಚುನಾವಣೆಯ ಬಳಿಕ ಮತದಾನದ ಗೌಪ್ಯತೆಯನ್ನು ಬಹಿರಂಗ ಮಾಡಲಾಗಿದೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಆರೋಪ ಮಾಡಿರುವುದರಿಂದ ಇಲ್ಲಿ ಮತ ಎಣಿಕೆಯನ್ನು ಆರಂಭದಲ್ಲಿ ಸ್ಥಗಿತಗೊಳಿಸಲಾಗಿತ್ತು. ಬಳಿಕ ತಡ ರಾತ್ರಿ ಮತ್ತೆ ಮತಎಣಿಕೆಯನ್ನು ಚುನಾವಣಾ ಆಧಿಕಾರಿಗಳು ಆರಂಭಿಸಿದರು. 2 ಸ್ಥಾನಗಳಿಗೆ ಇಲ್ಲಿ ಚುನಾವಣೆ ನಡೆದಿದ್ದು, 31 ಮತಗಳ ಅವಶ್ಯಕತೆ ಇದೆ. ಬಿಜೆಪಿ 48 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್ ಬಳಿ 37 ಶಾಸಕರಿದ್ದಾರೆ.
ಆಪರೇಷನ್ ಕಮಲ ತಡೆಯುವ ಯತ್ನ ವಿಫಲ:ಆಪರೇಷನ್ ಕಮಲದ ಗಾಳಕ್ಕೆ ಬೀಳಬಾರದು ಎಂಬ ಕಾರಣಕ್ಕೆ ಒಡಿಶಾದ 12 ಶಾಸಕರನ್ನು ಕಾಂಗ್ರೆಸ್ ಕರ್ನಾಟಕಕ್ಕೆ ಶಿಫ್ಟ್ ಮಾಡಿತ್ತು. ಕಾಂಗ್ರೆಸ್‌ನ ಟ್ರಬಲ್‌ಶೂಟರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಣ್ಣಾವಲಿನಲ್ಲಿ ಈ ಎಲ್ಲ ಶಾಸಕರೂ ಬಿಡದಿಯ ವಂಡರ್ ಲಾ ರೆಸಾರ್ಟ್‌ನಲ್ಲಿ ತಂಗಿದ್ದರು. ಅವರಿಗೆ ಖಾಲಿ ಚೆಕ್ ನೀಡಿ ಆಮಿಷವೊಡ್ಡಲು ಬಂದಿದ್ದರೆನ್ನಲಾದ ಒಡಿಶಾ ಮೂಲದ ಇಬ್ಬರನ್ನು ಭಾನುವಾರ ರಾಜ್ಯ ಪೊಲೀಸರು ವಶಕ್ಕೆ ಪಡೆದಿದ್ದರು. ಇಷ್ಟೆಲ್ಲ ಆದರೂ, ಸೋಮವಾರದ ಚುನಾವಣೆಯಲ್ಲಿ ಕಾಂಗ್ರೆಸ್‌ನ 3 ಶಾಸಕರು ಬಿಜೆಪಿ ಪರ ಮತ ಚಲಾಯಿಸಿದ್ದಾರೆ. ಆದರೆ, ಬಿಡದಿಗೆ ಬಂದಿದ್ದ ಕೈ ಶಾಸಕರು ಅಡ್ಡ ಮತದಾನ ಮಾಡಿಲ್ಲ ಎನ್ನಲಾಗಿದೆ.
ಆಯೋಗಕ್ಕೆ ಖರ್ಗೆ ಪತ್ರ:ಹರ್ಯಾಣದಲ್ಲಿ ಚುನಾವಣೆಯ ಸಮಗ್ರತೆಗೆ ಧಕ್ಕೆಯುಂಟಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಅಲ್ಲದೇ ಕಾಂಗ್ರೆಸ್ ಶಾಸಕರ ಮತಗಳನ್ನು ಅನರ್ಹಗೊಳಿಸಬಾರದು ಎಂದು ಕೋರಿದ್ದಾರೆ. ಕಾಂಗ್ರೆಸ್‌ನ ಇಬ್ಬರು ಶಾಸಕರು ಮತಪತ್ರಗಳನ್ನು ಸರಿಯಾಗಿ ಮಡಿಸದೇ ಚುನಾವಣಾ ಗೌಪ್ಯತೆಯನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.













































