‘ಆಯುಷ್ಮಾನ್ ವಯೋ ವಂದನಾ’ ಯೋಜನೆ ಜಾರಿಯಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ | 2,16,265 ಹಿರಿಯ ನಾಗರಿಕರ ಕಾರ್ಡ್‌ಗಳು ಊಟಕ್ಕಿಲ್ಲದ ಉಪ್ಪಿನಕಾಯಿ! : ಸದನದಲ್ಲಿ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು

Picture of Savistara

Savistara

Bureau Report

ಕೇಂದ್ರ ಸರ್ಕಾರವು 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಜಾರಿಗೆ ತಂದಿರುವ ಅತ್ಯಂತ ಮಹತ್ವಾಕಾಂಕ್ಷೆಯ ‘ಆಯುಷ್ಮಾನ್ ವಯೋ ವಂದನಾ’ ಆರೋಗ್ಯ ವಿಮಾm ಯೋಜನೆಯನ್ನು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸದೆ, ಹಿರಿಯ ಜೀವಗಳನ್ನು ಅಲೆದಾಡಿಸುತ್ತಿರುವm ರಾಜ್ಯ ಸರ್ಕಾರದ ನಡೆಯನ್ನು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ದಿನಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ ಅವರು, ವಿತರಣೆಯಾಗಿರುವ ಲಕ್ಷಾಂತರ ಕಾರ್ಡ್‌ಗಳು ಯಾವುದೇ ಪ್ರಯೋಜನಕ್ಕೆ ಬಾರದಂತಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ವಿಸ್ತರಿಸಿ, 70 ವರ್ಷ ಮೇಲ್ಪಟ್ಟ ಎಲ್ಲರಿಗೂ 5.00 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ವಿಮೆ ಒದಗಿಸುವ ‘ವಯೋ ವಂದನಾ’ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಈ ಯೋಜನೆ ಜಾರಿಗೆ 2025ರ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಸಚಿವ ಸಂಪುಟದ ಅನುಮೋದನೆ ದೊರೆತು, ಆರೋಗ್ಯ ಇಲಾಖೆಯು ಆದೇಶವನ್ನೂ ಹೊರಡಿಸಿದೆ. ಆದರೆ, ದುರಂತವೆಂದರೆ ಈವರೆಗೂ ಯೋಜನೆ ಮಾತ್ರ ವಾಸ್ತವದಲ್ಲಿ ಅನುಷ್ಠಾನಗೊಂಡಿಲ್ಲ. ರಾಜ್ಯದಲ್ಲಿ ಈಗಾಗಲೇ 2,16,265 (ಎರಡು ಲಕ್ಷದ ಹದಿನಾರು ಸಾವಿರದ ಇನ್ನೂರ ಅರವತ್ತೈದು) ಮಂದಿ ಹಿರಿಯ ನಾಗರಿಕರಿಗೆ ಈ ಯೋಜನೆಯಡಿ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಆದರೆ, ಆಸ್ಪತ್ರೆಗಳಲ್ಲಿ ಈ ಕಾರ್ಡ್‌ಗಳನ್ನು ಸ್ವೀಕರಿಸುತ್ತಿಲ್ಲವಾದ್ದರಿಂದ, ಚಿಕಿತ್ಸೆಗಾಗಿ ವೃದ್ಧರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ದುಸ್ಥಿತಿ ನಿರ್ಮಾಣವಾಗಿದೆ. ಅನುಷ್ಠಾನವೇ ಆಗದ ಕಾರಣ ಈ ಕಾರ್ಡ್‌ಗಳು ‘ಊಟಕ್ಕಿಲ್ಲದ ಉಪ್ಪಿನಕಾಯಿ’ಯಂತಾಗಿವೆ ಎಂದು ಅವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ನಮ್ಮ ದೇಶದ ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಜೀವನ ಹಾಗೂ ಆರೋಗ್ಯದ ಹಕ್ಕನ್ನು ನೀಡಿದೆ. ಅದರಲ್ಲೂ ಸಮಾಜದ ದುರ್ಬಲ ವರ್ಗಗಳಾದ ವಯೋವೃದ್ಧರ ಕಲ್ಯಾಣವನ್ನು ಕಾಪಾಡುವುದು ಹಾಗೂ ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಯಾವುದೇ ಸರ್ಕಾರದ ಮೂಲಭೂತ ಕರ್ತವ್ಯವಾಗಿದೆ. ಒಂದು ಸಮಾಜದ ಸಂಸ್ಕೃತಿಯನ್ನು ಆ ಸಮಾಜ ತನ್ನ ಹಿರಿಯರನ್ನು ನಡೆಸಿಕೊಳ್ಳುವ ರೀತಿಯಿಂದಲೇ ಅಳೆಯಲಾಗುತ್ತದೆ. ತಮ್ಮ ಸಂಧ್ಯಾಕಾಲದಲ್ಲಿರುವ ಹಿರಿಯ ನಾಗರಿಕರು ಗೌರವಯುತ ಹಾಗೂ ಭದ್ರತೆಯ ಜೀವನ ನಡೆಸಲು, ಚಿಕಿತ್ಸೆ ಪಡೆಯಲು ಈ ಯೋಜನೆ ಅತ್ಯಂತ ಸಹಕಾರಿಯಾಗಿದೆ. ಆದ್ದರಿಂದ, ರಾಜ್ಯ ಸರ್ಕಾರವು ಇನ್ನು ಮುಂದಾದರೂ ಕಾಲಹರಣ ಮಾಡದೆ ‘ಆಯುಷ್ಮಾನ್ ವಯೋ ವಂದನಾ’ ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಅವರು ಸದನದಲ್ಲಿ ಬಲವಾಗಿ ಒತ್ತಾಯಿಸಿದರು.

[t4b-ticker]
error: Content is protected !!