ಕ್ಷೇತ್ರ ಪುನ‌ರ್ ವಿಂಗಡನೆ; ಬದಲಾಗಲಿದೆಯಾ ದಕ್ಷಿಣ ಕನ್ನಡ ರಾಜಕೀಯ ಲೆಕ್ಕಾಚಾರ

Picture of Savistara

Savistara

Bureau Report

ಬಂಟ್ವಾಳ: 2029 ರಲ್ಲಿ ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆ ನಡೆಯಲಿದೆಯಾ? ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಒನ್ ನೇಷನ್ ಒನ್ ಎಲೆಕ್ಷನ್ ಜಾರಿಯಾಗಲಿದೆಯಾ? ಹೀಗೊಂದು ಮಹತ್ವದ ಚರ್ಚೆ ಅಧಿಕಾರಿಗಳ ವಲಯದಲ್ಲಿ ನಡೆಯುತ್ತಿರುವುದು ಬಹಿರಂಗವಾಗಿದೆ.

2028 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆ ಸುಮಾರು 6 ತಿಂಗಳ ಕಾಲ ಮುಂದೂಡಿ 2029 ಕ್ಕೆ ಲೋಕಸಭಾ ಚುನಾವಣಾ ಜೊತೆಯಲ್ಲಿ ನಡೆಯಲಿದೆಯಾ? ಎಂಬ ಗುಪ್ತವಾದ ಮಾಹಿತಿ ಇದೀಗ ಚರ್ಚೆಯಾಗುತ್ತಿದೆ.

ಕ್ಷೇತ್ರ ಪುನರ್ ವಿಂಗಡನೆ

ಮಾಹಿತಿಯೊಂದರ ಪ್ರಕಾರ ಮೇ. ತಿಂಗಳಿನಿಂದ ಕೇಂದ್ರ ಸರಕಾರದಿಂದ ಜನಗಣತಿ ಸಮೀಕ್ಷೆ ನಡೆಯಲಿದೆ. ಇದರ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡನೆಯಾಗಲಿದ್ದು, ದ.ಕ. ಜಿಲ್ಲೆಯಲ್ಲಿ ಮತ್ತೆ ಎರಡು ಹೆಚ್ಚುವರಿ ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರ ಸೇರಲಿದೆ ಎಂಬ ಮಾಹಿತಿಯೊಂದು ಕೇಳಿ ಬರುತ್ತಿದೆ.

ಪ್ರಸ್ತುತ ಉಳ್ಳಾಲ, ಮಂಗಳೂರು, ಮಂಗಳೂರು ಉತ್ತರ, ಮೂಡಬಿದಿರೆ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಮತ್ತು ಸುಳ್ಯ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಿದ್ದು, ಮುಂದುವರಿದು ಎರಡು ವಿಧಾನಸಭಾ ಕ್ಷೇತ್ರಗಳು ಉದಯವಾಗಲಿದೆ. ಕಡಬ ಹಾಗೂ ಮಂಗಳೂರು ಗ್ರಾಮಾಂತರ ಎಂಬ ಎರಡು ಕ್ಷೇತ್ರಗಳು ಸೇರುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಯಾವುದಾದರೂ ಒಂದು ಜಿ.ಪಂ.ಕ್ಷೇತ್ರ ಮಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸೇರಲಿವೆಯಾ? ಎಂಬ ಆತಂಕ ಕೂಡ ಇವೆ. ಇಲ್ಲಿನ ಯಾವುದಾದರೊಂದು ಒಂದು ಜಿ.ಪಂ.ವ್ಯಾಪ್ತಿಯನ್ನು ಸೇರಿಸುವ ಚಿಂತನೆ ನಡೆಯುತ್ತಿದೆ. ಸಂಗಬೆಟ್ಟು ಜಿ.ಪಂ. ಕ್ಷೇತ್ರವನ್ನು ಅಥವಾ ಕರಿಯಂಗಳ ಬಡಗಬೆಳ್ಳೂರು,ಅಮ್ಮಾಡಿ ಕುರಿಯಾಳ ಭಾಗವನ್ನು ಮಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸೇರಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಬಿಜೆಪಿಯ ಭದ್ರಕೋಟೆಯಾಗಿರುವ ಈ ವ್ಯಾಪ್ತಿ ಸೇರಿದರೆ ಬಂಟ್ವಾಳ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಿ ಉಳಿಯಲಿದೆ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಜೋರಾಗಿ ಕೇಳಲಾರಂಭಿಸಿದೆ.

ಅದೇ ರೀತಿ ಪುದು ಜಿ.ಪಂ.ನ ಪುದು ಮಾರಿಪಳ್ಳ, ತುಂಬೆ ಮತ್ತು ಮೇರೆಮಜಲು ಕೊಾನ್ ವ್ಯಾಪ್ತಿಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸುವ ಯೋಜನೆಗಳು ಸಿದ್ದವಾಗಿವೆಯಂತೆ.

ಮಹಿಳೆಯರ ಕ್ಷೇತ್ರ

ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 33 ಪರ್ಸೆಂಟ್ ಅವಕಾಶ ನೀಡಬೇಕು ಎಂಬ ನಿಯಮದಂತೆ ನಡೆದರೆ, ಮುಂದಿನ ಚುನಾವಣೆಯಲ್ಲಿ ಕ್ಷೇತ್ರ ಪುನರ್ ವಿಂಗಡನೆಗೊಂಡು ದ.ಕ.ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳು ಜಾಸ್ತಿಯಾದರೆ ಒಟ್ಟು 10ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳು ಮಹಿಳೆಯರ ಪಾಲಾಗಲಿವೆ.

ಕಳೆದ ಅನೇಕ ವರ್ಷಗಳಿಂದ ಎಸ್.ಸಿ.ಗೆ ಮೀಸಲಾಗಿದ್ದ ಸುಳ್ಯ ವಿಧಾನಸಭಾ ಕ್ಷೇತ್ರ ಸಾಮಾನ್ಯ ಮೀಸಲು ಆಗಬಹುದು. ಬೆಳ್ತಂಗಡಿ ಎಸ್.ಸಿ. ಮೀಸಲು ಆಗುವ ಸಾಧ್ಯತೆಗಳು ಜಾಸ್ತಿ ಇವೆ. ಇನ್ನು ಈ ಎರಡು ಕ್ಷೇತ್ರಗಳ ಹೊರತುಪಡಿಸಿ ಮಹಿಳೆಯರ ಸಂಖ್ಯೆ ಜಾಸ್ತಿಯಿರುವ ನಾಲ್ಕು ಕ್ಷೇತ್ರಗಳು ಬಂಟ್ವಾಳ, ಪುತ್ತೂರು, ಮೂಡಬಿದಿರೆ, ಮತ್ತು ಮಂಗಳೂರು ಕ್ಷೇತ್ರಗಳು ಮಹಿಳೆಯರ ಮೀಸಲು ಕ್ಷೇತ್ರವಾಗುವ ಸಾಧ್ಯತೆಗಳು ಹೆಚ್ಚು ಇವೆ.

ರಾಜಕೀಯ ಚಿತ್ರಣವೇ ಬದಲು

2029 ರ ಇಸವಿಗೆ ಕ್ಷೇತ್ರ ಪುನರ್ ವಿಂಗಡಣೆ ನಡೆದು ಕ್ಷೇತ್ರಗಳು ಹೆಚ್ಚಾಗಿದ್ದೇ ಆದಲ್ಲಿ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗುವ ಸಾಧ್ಯತೆಗಳಿವೆ. ಇನ್ನು ಅನೇಕ ರಾಜಕೀಯ ನಾಯಕರುಗಳ ಭವಿಷ್ಯವೇ ಕೊನೆಯಾದೀತು ಎಂಬ ಲೆಕ್ಕಾಚಾರ ಕೆಲವರಲ್ಲಿ ಇದೆ. ಈ ಸಾಧ್ಯತೆಯನ್ನು ಕೂಡ ಅಲ್ಲಗಳೆಯುವಂತಿಲ್ಲ. ಕ್ಷೇತ್ರ ಪುನರ್ ವಿಂಗಡನೆ ಬಳಿಕ ಮತ್ತೆ ಚುನಾವಣಾ ಲೆಕ್ಕಾಚಾರ ಅದಲುಬದಲಾಗುವ ಅವಕಾಶವನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ರಾಜಕೀಯ ಚಿತ್ರಣ ಬದಲಾವಣೆಯ ಗಾಳಿ ಬೀಸುವ ಮೊದಲೇ ಕೆಲವರು ತಮ್ಮ ಕುಟುಂಬ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಒಟ್ಟಿನಲ್ಲಿ ರಾಜಕೀಯ ಪ್ರಭಾವ ತಮ್ಮ ತಮ್ಮಲ್ಲೇ ಉಳಿಯಬೇಕು ಎಂಬ ಲೆಕ್ಕಾಚಾರ ಒಂದೆಡೆಯಾದರೆ, ದ.ಕ.ಜಿಲ್ಲೆಯ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬಲು ದೊಡ್ಡದಿದೆ. ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತ ಟಿಕೆಟ್ ಗಾಗಿ ಪೈಪೋಟಿಯ ಹವಾ ಮಸ್ತ್ ಮಜಾ ಆಗಲಿದೆ ಅನ್ನೋದೆ ಕುತೂಹಲದ ಸಂಗತಿ.

[t4b-ticker]
error: Content is protected !!