ಉಡುಪಿ। ವಾಣಿಜ್ಯ ಅನಿಲ ಕೊರತೆಯಿಂದ ಹೊಟೇಲ್ ಬಂದ್‌ ಎಫೆಕ್ಟ್; ಮೀನಿನ ದರದಲ್ಲಿ ಭಾರೀ ಕುಸಿತ

Picture of Savistara

Savistara

Bureau Report

ಉಡುಪಿ: ಇರಾನ್ – ಅಮೆರಿಕ, ಇಸ್ರೇಲ್ ದೇಶಗಳ ನಡುವಿನಯುದ್ಧ ಪರಿಣಾಮ ಕರಾವಳಿ ಮೀನುಗಾರರಿಗೂ ತಟ್ಟುತ್ತಿದೆ. ನಿರಂತರವಾಗಿ ಮುಂದುವರೆಯುತ್ತಿರುವ ಕದನದಿಂದ ಮೀನಿನ ದರ ಇಳಿಕೆಯಾಗಿ ಮೀನುಗಾರಿಕಾ ಉದ್ಯಮವನ್ನೇ ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಇದು ಮೀನುಗಾರರ ಬದುಕನ್ನೇ ಅಲ್ಲೋಲ ಕಲ್ಲೋಲವನ್ನಾಗಿಸುವ ಹಂತಕ್ಕೆ ತಲುಪುತ್ತಿದೆ.ಯುದ್ಧದಿಂದಾಗಿ ಮೀನು ರಫ್ತು ಸ್ಥಗಿತಗೊಂಡಿರುವುದು ಮಾತ್ರವಲ್ಲದೆ, ವಾಣಿಜ್ಯ ಅನಿಲದ ಅಭಾವದಿಂದ ಹೊಟೇಲುಗಳು ಬಂದ್ ಆಗಿ ಮೀನಿಗೆ ಬೇಡಿಕೆ ಇಲ್ಲದಂತಾಗಿದೆ. ಇದರಿಂದ ಮೀನಿನ ದರದಲ್ಲಿ ಭಾರೀ ಇಳಿಕೆ ಕಂಡಿದೆ. ಇದರಿಂದ ಮೀನು ಉದ್ಯಮ ಹಾಗೂ ಮಾರಾಟಗಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಮೀನಿನ ದರದಲ್ಲಿ ಸುಮಾರು 50-200 ರೂ.ವರೆಗೆ ಇಳಿಕೆಯಾಗಿದೆ. ಉಡುಪಿ ಮೀನು ಮಾರುಕಟ್ಟೆಯಲ್ಲಿ ಸುಮಾರು 10 ಮಂದಿ ಸಗಟು ವ್ಯಾಪಾರಿಗಳು ಸೇರಿದಂತೆ ನೂರಾರು ಮಹಿಳೆಯರು ಮೀನು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ವಾಣಿಜ್ಯ ಅನಿಲದ ಕೊರತೆ ಯಿಂದ ಉಡುಪಿ ಜಿಲ್ಲೆಯ ನೂರಾರು ಮೀನಿನ ಹೊಟೇಲ್ ಬಾಗಿಲು ಮುಚ್ಚಿದೆ. ಹೊಟೇಲ್ ಬಂದ್ ಆಗಿರುವುದರಿಂದ ಹೊಟೇಲ್ ಮಾಲಕರು ಮಾರುಕಟ್ಟೆಗೆ ಕಾಲಿಡುತ್ತಿಲ್ಲ. ಹಾಗಾಗಿ ಮೀನಿನ ವ್ಯಾಪಾರದಲ್ಲಿ ಇಳಿಕೆ ಕಂಡಿದೆ.ಇನ್ನು ಕೆಲವು ಹೊಟೇಲುಗಳು ತೆರೆದಿದ್ದರೂ ಮೀನು ಖರೀದಿ ಮಾಡುತ್ತಿಲ್ಲ. ಕೆಲವು ಹೊಟೇಲ್‌ಗಳಲ್ಲಿ ಹೊರಗಡೆ ಒಲೆಯಲ್ಲಿ ಕಟ್ಟಿಗೆ ಉರಿಸಿ ಅಡುಗೆ ಮಾಡಲಾಗುತ್ತಿದೆ. ಇತ್ತೀಚೆಗೆ ರಾತ್ರಿ ಸುರಿದ ಮಳೆಯಿಂದಾಗಿ ಒಲೆಯಲ್ಲಿ ಅಡುಗೆ ಮಾಡುವಂತಿಲ್ಲ. ಇದೆಲ್ಲದರ ಪರಿಣಾಮವನ್ನು ಮೀನು ಮಾರಾಟ ಮಾಡುವ ಮಹಿಳೆಯರು ನಷ್ಟ ಅನುಭವಿಸುತ್ತಿದ್ದಾರೆ.

ಅದೇ ರೀತಿ ಉಡುಪಿ ನಗರಕ್ಕೆ ಮಾತ್ರವಲ್ಲ ಶಿರ್ವ, ಕಾಪು, ಕಾರ್ಕಳ ಹಾಗೂ ಬೆಂಗಳೂರು ಸಹಿತ ಹೊರ ಜಿಲ್ಲೆ ಮತ್ತು ಕೇರಳ ಸಹಿತ ಹೊರ ರಾಜ್ಯಗಳಿಗೂ ಉಡುಪಿಯಿಂದಲೇ ಮೀನು ಸರಬರಾಜು ಆಗುತ್ತಿತ್ತು. ಅಲ್ಲಿಯೂ ಹೊಟೇಲ್ ಬಂದ್ ಆಗಿರುವುದರಿಂದ ಮೀನು ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ಮೀನುಗಾರ ವ್ಯಾಪಾರಿ ಮಹಿಳೆಯರು.ಆದರೆ ಮೀನಿನ ಹೊಟೇಲುಗಳಲ್ಲಿ ಮೀನಿನ ದರ ಜಾಸ್ತಿಯಾಗಿದೆ. ಹೊಟೇಲಿನವರು ವಾಣಿಜ್ಯ ಅನಿಲವನ್ನು ಒಂದು ಸಾವಿರ ರೂ.ವರೆಗೆ ಹೆಚ್ಚು ನೀಡಿ ಖರೀದಿಸುತ್ತಿರುವುದರಿಂದ ನಷ್ಟವನ್ನು ಸರಿದೂಗಿಸಲು ಪ್ರೈ ಮೀನಿನ ದರವನ್ನು ಹೆಚ್ಚಳ ಮಾಡಿದ್ದಾರೆ.

ಮೀನಿನ ಹೊಸ – ಹಳೆ ದರ

ಮಾಂಜಿ: ಹಳೆಯ ದರ (ಪ್ರತಿ ಕೆಜಿಗೆ)- 1550ರೂ., ಹೊಸ ದರ (ಪ್ರತಿ ಕೆಜಿಗೆ) 1400ರೂ. ಅಂಜಲ್ (ಸೀ ಫಿಶ್): 1100.-1000, ದೊಡ್ಡ ಬಂಗುಡೆ 300.- 260., ಡಿಸ್ಕೋ ಮೀನು: 180ರೂ.-140ರೂ., ರಾಣಿ ಮೀನು: 280.-245., ಚಿಕ್ಕ ಬಂಗುಡೆ : 210.- 180.ಸಿಗಡಿ (Prawns): 340. -320.

‘ನಾನ್‌ವೆಜ್ ಹೊಟೇಲುಗಳು ಬಹುತೇಕ ಬಾಗಿಲು ಮುಚ್ಚಿದ ಪರಿಣಾಮ ಮೀನು ವ್ಯಾಪಾರ ಇಳಿಕೆಯಾಗಿದೆ. ಸಗಟು ವ್ಯಾಪಾರಿಗಳು ಮಾತ್ರವಲ್ಲ ಮೀನು ಮಾರಾಟ ಮಾಡುವ ಎಲ್ಲ ಮಹಿಳೆಯರು ಕೂಡ ಈಗ ಹೊಟೇಲ್‌ಗಳಿಗೆ ಮೀನು ಮಾರಾಟ ಮಾಡುತ್ತಾರೆ. ಇವರೆಲ್ಲರಿಗೂ ವ್ಯಾಪಾರ ಇಲ್ಲವಾಗಿದೆ. ಮೀನಿನ ದರ ಕೂಡ ಕೆಜಿಗೆ 100ರೂ., 50ರೂ.ಕಡಿಮೆ ಆಗಿದೆ’

-ಬೇಬಿ ಸಾಲ್ಯಾನ್, ಮೀನು ಮಾರಾಟಗಾರರು, ಉಡುಪಿ

[t4b-ticker]
error: Content is protected !!